ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪನವರು ಪಿಯುಸಿ ಪರೀಕ್ಷೆ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಮತ್ತು ತಂಡಕ್ಕೆ ಸಲಹೆ-ಸೂಚನೆಗಳನ್ನು ನೀಡಲು ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯ ನಂತರ ನಡೆದ ದ್ವಿತೀಯ ಪಿಯುಸಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಒಟ್ಟು 19,009 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ರೆಗ್ಯೂಲರ್ ವಿದ್ಯಾರ್ಥಿಗಳು17,755, ರಿಪೀಟರ್ ವಿದ್ಯಾರ್ಥಿಗಳು 871, ಖಾಸಗಿ- 380 ಮತ್ತು ಇಂಪ್ರೂವ್‌ಮೆಂಟ್ -03 ವಿದ್ಯಾರ್ಥಿಗಳಿದ್ದಾರೆ ಎಂದರು.ಪರೀಕ್ಷಾ ಕೇಂದ್ರಗಳು: ಶಿವಮೊಗ್ಗ-17, ಭದ್ರಾವತಿ -6, ತೀರ್ಥಹಳ್ಳಿ- 3, ಹೊಸನಗರ -3 ಸಾಗರ -5, ಶಿಕಾರಿಪುರ-5, ಸೊರಬ-2 ಒಟ್ಟು 41 ಪರೀಕ್ಷಾ ಕೇಂದ್ರಗಳಿವೆ. ಪ್ರಶ್ನೆ ಪತ್ರಿಕೆ ವಿತರಕ ಮಾರ್ಗಗಳು -12 ಇವೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡಲು ತ್ರಿ ಸದಸ್ಯ ಸಮಿತಿಯನ್ನು ನೇಮಿಸಿ ಆದೇಶಿಸಿದ್ದು, ಮುಖ್ಯ ಅಧೀಕ್ಷಕರು ಹಾಗೂ ಉತ್ತರ ಪತ್ರಿಕೆ ಪಾಲಕರ ನೇಮಕವಾಗಿದೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಅಳವಡಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಮಕ್ಕಳಿಗೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇದ್ದು, ಪರೀಕ್ಷಾ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂನವರು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ವೆಬ್ ಕಾಸ್ಟಿಂಗ್: ವೆಬ್ ಕಾಸ್ಟಿಂಗ್‌ಗಾಗಿ ಈಗಾಗಲೇ ಸಿಬ್ಬಂದಿ ನೇಮಕ ಮಾಡಲಾಗಿದೆ. ಪರೀಕ್ಷಾ ವೇಳೆಯಲ್ಲಿ ವೆಬ್ ಕಾಸ್ಟಿಂಗ್‌ಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು, ಆದ್ದರಿಂದ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ನವರು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ , ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಮತ್ತು ತಂಡದೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪಿಯುಸಿ ಪರೀಕ್ಷೆಗಳು ಶಾಂತಿಯುತವಾಗಿ ನಡೆಯುವಂತೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮ ವಹಿಸಬೇಕು. ಯಾವುದೇ ಗೊಂದಲ ಮತ್ತು ಭಯಕ್ಕೀಡಾಗದಂತೆ ನಿರಾತಂಕವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವ್ಯವಸ್ಥೆಗಳನ್ನು ಮಾಡಿಕೊಡಬೇಕು. ಪರೀಕ್ಷೆ ಕುರಿತು ಯಾವುದೇ ರೀತಿಯ ವದಂತಿಗಳು, ಸೋಷಿಯಲ್ ಮೀಡಿಯಾದಲ್ಲಿನ ನಕಲಿ ಸುದ್ದಿಗಳಿಗೆ ಕಿವಿಗೊಡದೆ ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಸಿಸಿಟಿವಿ, ವೆಬ್‌ಕಾಸ್ಟಿಂಗ್ ಮತ್ತು ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ಸೂಚನೆ ನೀಡಿದರು.