ಹುಬ್ಬಳ್ಳಿ:
ವಾರ್ಡ್ ನಂ. 8ರಲ್ಲಿ ಕೋಳಿಕೆರೆ ಕಾಮಗಾರಿಗೆ ಇತ್ತೀಚಿಗೆ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಚಾಲನೆ ನೀಡಿದ್ದರು. ಆದರೆ, ಅಲ್ಲಿನ ಪಾಲಿಕೆ ಸದಸ್ಯ ಶಂಕರ ಶೇಳಕೆ ಈ ವಿಷಯವನ್ನು ಪ್ರಸ್ತಾಪಿಸಿ, ಆ ಕಾಮಗಾರಿಗೆ ಪಾಲಿಕೆ ಸದಸ್ಯನಾದ ನನಗೆ ಆಹ್ವಾನಿಸಿಲ್ಲ. ಜನಪ್ರತಿನಿಧಿಗಳು ಅಲ್ಲದವರನ್ನು ಕರೆಯಿಸಿ ಭೂಮಿ ಪೂಜೆ ಮಾಡಿಸಿದ್ದಾರೆ. ಕೂಡಲೇ ವಲಯ ಅಧಿಕಾರಿ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಆಗ ಇಇ ಧಾರವಾಡ, ಗುತ್ತಿಗೆದಾರರು ಮಾಹಿತಿ ನೀಡಿರುವುದಾಗಿ ತಿಳಿಸಿದ್ದರು. ಹೀಗಾಗಿ ನಾವು ಹೇಳಿರಲಿಲ್ಲ ಎಂದರು. ಅದಕ್ಕೆ ಮತ್ತಷ್ಟು ರೊಚ್ಚಿಗೆದ್ದ ಶೇಳಕೆ, ಗುತ್ತಿಗೆದಾರ ನಮಗೆ ಸಂಬಂಧವಿಲ್ಲ. ಅಲ್ಲಿನ ಅಧಿಕಾರಿಗಳೇ ಸಂಬಂಧ. ಇವರನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದು ಧರಣಿಗೆ ಮುಂದಾದರು. ಆಗ ಮೇಯರ್ ಸ್ಥಾನದಲ್ಲಿ ಕುಳಿತ್ತಿದ್ದ ಉಪಮೇಯರ್ ಸಂತೋಷ ಚವ್ಹಾಣ ಅವರು, ಮತ್ತೊಮ್ಮೆ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡುವಂತೆ ಸೂಚಿಸಿದರು.
ಲ್ಯಾಂಡ್ ಮಾಫಿಯಾನಕಲಿ ದಾಖಲೆ ಸೃಷ್ಟಿಸಿ ಕೆಲವರು ಪಾಲಿಕೆ ಆಸ್ತಿ ಸೇರಿದಂತೆ ಬಹಳ ಆಸ್ತಿಗಳನ್ನು ಕಬಳಿಸಿದ್ದಾರೆ. ಕೆಲವರು ಮಾರಾಟ ಕೂಡ ಮಾಡಿರುವುದುಂಟು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಕೃಷ್ಣಾಪುರದಲ್ಲಿ ಈ ರೀತಿ ಲ್ಯಾಂಡ್ ಮಾಫಿಯಾ ಜಾಸ್ತಿಯಾಗಿದೆ. ರಾಜ್ಯದಲ್ಲೇ ದೊಡ್ಡ ಹಗರಣವಾಗುತ್ತಿದೆ ಇದು ಎಂದು ಸದಸ್ಯ ಆರೀಫ್ ಭದ್ರಾಪುರ ಒತ್ತಾಯಿಸಿದರು. ಉಳಿದ ಸದಸ್ಯರು, ಈ ರೀತಿ ಘಟನೆಗಳು ಬೇರೆ ಬೇರೆ ವಾರ್ಡ್‌ಗಳಲ್ಲೂ ನಡೆದಿರುವುದುಂಟು. ನಗರದಲ್ಲಿ ದೊಡ್ಡ ಲ್ಯಾಂಡ್ ಮಾಫಿಯಾ ಕೆಲಸ ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಪಾಲಿಕೆ ಆದಾಯ ವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕಾಗಿ ಪಾಲಿಕೆ ಉಪಸಮಿತಿಯಿದೆ. ಅಲ್ಲಿ ದಾಖಲೆ ನೀಡಿದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಂತೋಷ ಚವ್ಹಾಣ ತಿಳಿಸಿದರು. ಈ ನಡುವೆ ಸ್ಮಾರ್ಟ್‌ಸಿಟಿ ಯೋಜನೆಗಳ ಬಗ್ಗೆ ಕೆಲಕಾಲ ಚರ್ಚೆ ನಡೆಯಿತು. ₹ 990 ಕೋಟಿ ವೆಚ್ಚದಲ್ಲಿ ಯಾವುದೇ ಕಾಮಗಾರಿ ಹೇಳಿಕೊಳ್ಳುವಂತಾಗಲಿಲ್ಲ ಎಂದು ಸದಸ್ಯರೆಲ್ಲರೂ ಕಿಡಿಕಾರಿದ್ದುಂಟು.ಮತ್ತೆ ಚರ್ಚೆಗೆ ಬಂದ ಗೌನು!ಹಿಂದೆ ಮೇಯರ್ ಈರೇಶ ಅಂಚಟಗೇರಿ ಗೌನು ಬಿಟ್ಟಿದ್ದರು. ಜತೆಗೆ ಸರ್ಕಾರದಿಂದ ಗೌನು ಧರಿಸುವುದು ಅವರವರ ವಿವೇಚನೆಗೆ ಬಿಟ್ಟಿದ್ದು ಎಂಬ ಆದೇಶವನ್ನು ತರಿಸಿಕೊಂಡಿದ್ದರು. ಶನಿವಾರ ಮೇಯರ್ ಜ್ಯೋತಿ ಪಾಟೀಲ ಅನುಪಸ್ಥಿತಿಯಲ್ಲಿ ಉಪಮೇಯರ್ ಸಂತೋಷ ಚವ್ಹಾಣ ಸಾಮಾನ್ಯ ಸಭೆ ನಡೆಸಿದರು. ಆದರೆ, ಈ ಬಗ್ಗೆ ಪ್ರಶ್ನಿಸಿದ ಆರೀಫ್ ಭದ್ರಾಪುರ, ನೀವು ಗೌನು ಧರಿಸದೇ ಅವಮಾನ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು. ಆಗ ಅಂಚಟಗೇರಿ ಅವರು, ಗೌನು ಧರಿಸುವುದು ಅವರವರ ವಿವೇಚನೆಗೆ ಬಿಟ್ಟಿದ್ದು ಎಂದು ಸರ್ಕಾರಿ ಆದೇಶವೇ ಇದೆ ಎಂದು ಸ್ಪಷ್ಟಪಡಿಸಿದರು. ಆದರೆ, ವಿರೋಧ ಪಕ್ಷದವರೆಲ್ಲರೂ ಈ ಬಗ್ಗೆ ಮೇಯರ್ ಸ್ಪಷ್ಟನೆ ಕೇಳಿ ಪ್ರತಿಭಟನೆಗೆ ಸಜ್ಜಾದರು. ಕೊನೆಗೆ ಸಂತೋಷ ಚವ್ಹಾಣ, ಸರ್ಕಾರಿ ಆದೇಶ ಓದುವ ಮೂಲಕ ಗೌನು ಧರಿಸುವುದು ಮೇಯರ್ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು. ಆಗ ವಿರೋಧ ಪಕ್ಷದವರೆಲ್ಲರೂ ಶಾಂತರಾದರೆ, ಅಂಚಟಗೇರಿ, ನಿಮಗೆ ಅವಕಾಶ ಸಿಕ್ಕಾಗ ನೀವು ಗೌನು ಧರಿಸಿ. ಆದರೆ, ನಿಮಗೆ ಅವಕಾಶ ಸಿಗಲ್ಲ ಅದು ಬೇರೆ ಮಾತು. ಈಗ ಅವರಿಗೆ ಇಷ್ಟವಿಲ್ಲ. ಹೀಗಾಗಿ ಧರಿಸಿಲ್ಲ ಬಿಡ್ರಿ ಎಂದು ಕಾಲೆಳೆದರು. ಈ ವೇಳೆ ಎರಡು ಪಕ್ಷಗಳ ನಡುವೆ ವಾಗ್ವಾದ ನಡೆಯಿತು.