ಜಿಲ್ಲಾದ್ಯಂತ ರಾಮಮಂದಿರಗಳಲ್ಲಿ ಪೂಜೆ, ಹವನಕ್ಕೆ ಸಿದ್ಧತೆ

KannadaprabhaNewsNetwork | Published : Jan 22, 2024 2:16 AM

ಸಾರಾಂಶ

ಅಯೋಧ್ಯೆಯಲ್ಲಿ ಜ.೨೨ರಂದು ಜರುಗಲಿರುವ ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಜಿಲ್ಲೆಯಲ್ಲಿ ಹಬ್ಬದ ವಾತಾವಣ ನಿರ್ಮಾಣಗೊಂಡಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಅಯೋಧ್ಯೆಯಲ್ಲಿ ಜ.೨೨ರಂದು ಜರುಗಲಿರುವ ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಜಿಲ್ಲೆಯಲ್ಲಿ ಹಬ್ಬದ ವಾತಾವಣ ನಿರ್ಮಾಣಗೊಂಡಿದೆ. ಶ್ರೀರಾಮ, ಆಂಜನೇಯ ಮಂದಿರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿರುವ ರಾಮ ಮಂದಿರಗಳನ್ನು ಸುಣ್ಣಬಣ್ಣ ಬೆಳೆದು ಸ್ವಚ್ಛಗೊಳಿಸಲಾಗಿದ್ದು, ಕಳೆದ ಒಂದು ವಾರದಿಂದ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ತಳಿರು ತೋರಣ, ಕೇಸರಿ ಪತಾಕಿ, ಹೂವುಗಳಿಂದ ಸಿಂಗರಿಸಲಾಗಿದೆ. ಅಯೋಧ್ಯೆಯಲ್ಲಿ ಜರಗುವ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ವೀಕ್ಷಣೆಗಾಗಿ ಹಾವೇರಿಯ ರಾಮಮಂದಿರದಲ್ಲಿ ಮೂರು ಬೃಹತ್ ಟಿವಿ ಪರದೆ ಅಳವಡಿಸಲಾಗುತ್ತಿದೆ. ರಾಣಿಬೆನ್ನೂರು ನಗರದ ಕುರುಬರಗೇರಿ ಮಾಯಮ್ಮ ದೇವಸ್ಥಾನ ಬಳಿ ಹಾಗೂ ರಂಗನಾಥ ನಗರದ ಬಾಬಾರಾಮದೇವ ಗುಡಿ ಬಳಿ ಹಾಗೂ ಬ್ಯಾಡಗಿ ಪಟ್ಟಣದಲ್ಲಿ ಎಲ್‌ಇಡಿ ಪರದೇ ವ್ಯವಸ್ಥೆ ಮಾಡಲಾಗಿದೆ.

ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಜನತೆ ಕಾತರದಿಂದ ಕಾಯುತ್ತಿದ್ದಾರೆ. ದಿನವಿಡಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ಮನೆಗಳಲ್ಲಿ ದೀಪ ಬೆಳಗಲು ಸಿದ್ಧತೆ ನಡೆಸಿದ್ದಾರೆ.

ಹಾವೇರಿಯ ಶ್ರೀರಾಮ ದೇವಸ್ಥಾನದಲ್ಲಿ ಜ.೨೨ರಂದು ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ೮ಕ್ಕೆ ಶ್ರೀರಾಮನಿಗೆ ಅಭಿಷೇಕ, ಶ್ರೀರಾಮ ತಾರಕ ಯಾಗದ ಪುಣ್ಯಾಹ ವಾಚನ, ತ್ರಯೋದಶ ಸಹಸ್ರ ಹೋಮ, ೧೨.೩೫ಕ್ಕೆ ಪೂರ್ಣಾಹುತಿ ಮಹಾಪ್ರಸಾದ ಜರುಗಲಿದೆ. ಸಂಜೆ ೬.೩೦ಕ್ಕೆ ಮಹಿಳಾ ಮಂಡಳದವರಿಂದ ರಾಮಾಯಣದ ಆಯ್ದಭಾಗ, ಸೀತೆ ಪುನೀತೆ ನಾಟಕ, ರಾಮಜನ್ಮದ ಗೀತೆಯೊಂದಿಗೆ ಕೋಲಾಟ, ಅಷ್ಟಾವಧಾನ, ಮಹಾಮಂಗಳಾರತಿ ಜರುಗಲಿವೆ. ವಿವಿಧ ಸಂಘಟನೆಗಳಿಂದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆಗೆ ವಿತರಣೆ ನಡೆಯಲಿದೆ.

ರಾಣಿಬೆನ್ನೂರು ತಾಲೂಕಿನ ಸುಣಕಲ್‌ಬಿದರಿ ಗ್ರಾಮದ ಶ್ರೀ ಬಸವೇಶ್ವರ, ಆಂಜನೇಯ ಸ್ವಾಮಿ ಹಾಗೂ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಬ್ರಾಹ್ಮೀ ಮೂರ್ತದಲ್ಲಿ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆಗಳು ನಡೆಯಲಿವೆ. ಮಧ್ಯಾಹ್ನ ೧೨.೩೦ಕ್ಕೆ ಆಂಜನೇಯ ದೇವಸ್ಥಾನದ ಗೋಪುರಕ್ಕೆ ಭಗವಾನ್ ಧ್ವಜ ಏರಿಸುವುದು, ಸಂಜೆ ೭ಕ್ಕೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇನ್ನೂ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗಾಯತ್ರಿ ತಪೋಭೂಮಿಯಲ್ಲಿ ಅಯೋಧ್ಯೆ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ೯ಕ್ಕೆ ರಾಮ ತಾರಕ ಹಾಗೂ ಗಾಯತ್ರಿ ಹೋಮ, ಜರುಗುವುದು, ಶ್ರೀ ರಾಮ ಭಜನೆ, ರಾಮ ರಕ್ಷ ಪಠಣ, ಹನುಮಾನ್ ಚಾಲೀಸ್ ಪಾಠಣ ನಡೆಯಲಿದೆ. ಸಂಜೆ ೭ಕ್ಕೆ ವಿಜೃಂಭಣೆಯಿಂದ ದೀಪೋತ್ಸವ ಜರುಗಲಿದೆ. ನಗರ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಕಂಬ, ಪ್ರಮುಖ ವೃತ್ತಗಳಲ್ಲಿ ಕೇಸರಿ ಬಾವುಟ ರಾರಾಜಿಸುತ್ತಿವೆ. ಒಟ್ಟಿನಲ್ಲಿ ಜಿಲ್ಲಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Share this article