ಪಕ್ಷಕ್ಕೆ, ಶಾಸಕ ಸ್ಥಾನಕ್ಕೆ ಪೂಜಾರ ರಾಜೀನಾಮೆ ನೀಡಲಿ

KannadaprabhaNewsNetwork | Published : Apr 4, 2025 12:45 AM

ಸಾರಾಂಶ

ಮುಳುಗಡೆ ಸಂತ್ರಸ್ತರಿಗೆ ಸೂರು ಒದಗಿಸಲು ಸ್ಥಾಪನೆಗೊಂಡಿದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗುತ್ತಿದೆ. ಪೂಜಾರ ಅವರ ಅಧಿಕಾರದ ದುರಾಸೆಗಾಗಿ ಪ್ರಾಧಿಕಾರದ ಅಸ್ತಿತ್ವಕ್ಕೆ ಸಂಚಕಾರ ಬಂದೊದಗಿದೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ, ಶಾಸಕ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಲಿ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಳುಗಡೆ ಸಂತ್ರಸ್ತರಿಗೆ ಸೂರು ಒದಗಿಸಲು ಸ್ಥಾಪನೆಗೊಂಡಿದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗುತ್ತಿದೆ. ಪೂಜಾರ ಅವರ ಅಧಿಕಾರದ ದುರಾಸೆಗಾಗಿ ಪ್ರಾಧಿಕಾರದ ಅಸ್ತಿತ್ವಕ್ಕೆ ಸಂಚಕಾರ ಬಂದೊದಗಿದೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ, ಶಾಸಕ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಲಿ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಿಧಾನ ಪರಿಷತ್ ಸದಸ್ಯರನ್ನು ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸದಸ್ಯರನ್ನಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡಿತ್ತು. ಅದರಂತೆಯೇ ರಾಜ್ಯದ ವಿಪ ಸದಸ್ಯರನ್ನು ಅವರು ಪ್ರತಿನಿಧಿಸುವ ಊರಿನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೇಮಕ ಮಾಡಲಾಗಿತ್ತು ಎಂದರು.ಪೂಜಾರ ವಿರುದ್ಧ ವೀರಣ್ಣ ಆರೋಪವೇನು?:

ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇಲ್ಲಿನ ಸದಸ್ಯರೊಬ್ಬರು ನೇಮಕವಾಗಿದ್ದಲ್ಲದೇ ಸರ್ಕಾರದ ಆದೇಶ ಇಟ್ಟುಕೊಂಡು ಬಿಟಿಡಿಎ ಸದಸ್ಯತ್ವ ಪಡೆಯಲು ಮುಂದಾಗಿದ್ದರು. ಆದರೆ ಸರ್ಕಾರದ ಆದೇಶ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ಗಳಿಗೆ ಮಾತ್ರ ಸೀಮಿತ ಎಂಬುದನ್ನು ಮನಗಂಡು ಬಿಟಿಡಿಎಯಲ್ಲಿ ಅವರ ಸದಸ್ಯತ್ವಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರಿನ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ ವಿಪ ಸದಸ್ಯ ಪಿ.ಎಚ್.ಪೂಜಾರ ತನ್ನ ಸದಸ್ಯತ್ವ ರದ್ದಾಗಿರುವುದನ್ನು ಮಾತ್ರವೇ ಪ್ರಶ್ನಿಸಬೇಕಿತ್ತು. ಆದರೆ ಸಂತ್ರಸ್ತರ ಹಿತಕಾಯಲು ಸ್ಥಾಪನೆಗೊಂಡ ಬಿಟಿಡಿಎ ಅಸ್ತಿತ್ವ ಪ್ರಶ್ನಿಸಿದರ ಪರಿಣಾಮ ನ್ಯಾಯಾಲಯದಿಂದ ಬಿಟಿಡಿಎ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ ಎಂದು ದೂರಿದರು.ಬಿಟಿಡಿಎ ಸಂತ್ರಸ್ತರ ವಿಚಾರದಲ್ಲಿ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ನ್ಯಾಯಾಲಯದ ಗಮನಕ್ಕೆ ತಾರದೇ ಯಕಶ್ಚಿತ ತನ್ನ ಸದಸ್ಯತ್ವ ಹೋಗಿದೆ ಎಂಬ ಕಾರಣಕ್ಕೆ ಪ್ರಾಧಿಕಾರವೇ ಬೇಕಿಲ್ಲ ಎಂಬ ಅವರ ಧೋರಣೆಯಿಂದಾಗಿ ಸಂತ್ರಸ್ತರಿಗೆ ಅನ್ಯಾಯವಾಗುವ ಕಾಲ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಗದಕ್ಕಷ್ಟೇ ಸೀಮಿತವಾಗುವ ಸಂಭವ:

ಪ್ರಸಕ್ತ ಹೈಕೋರ್ಟ್‌ನ ಆದೇಶದ ಪ್ರಕಾರ ಬಿಟಿಡಿಎ ತನ್ನ ಅಸ್ತಿತ್ವ ಕಳೆದುಕೊಂಡು ಕೇವಲ ಕಾಗದಕ್ಕಷ್ಟೇ ಸೀಮಿತವಾಗುವ ಸಂಭವವಿದೆ. ನಗರ ವ್ಯಾಪ್ತಿಯಲ್ಲಿನ ಭೂಸ್ವಾಧೀನ, ಸ್ಥಳಾಂತರ ಪ್ರಕ್ರಿಯೆ ಕಾರ್ಯ ಎಲ್ಲವೂ ಬುಡಾಕ್ಕೆ ಹಸ್ತಾಂತರಗೊಳ್ಳಬೇಕು. ಬುಡಾ ವ್ಯಾಪ್ತಿ ಹೊರತಾದ ಮುಳುಗಡೆಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಕೃಷ್ಣಾ ಬೇಸಿನ್ ಬೋರ್ಡ್‌ಗೆ ವರ್ಗಾವಣೆ ಆಗಬೇಕೆಂದು ಆದೇಶದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಬುಡಾಕ್ಕೆ ಬಿಟಿಡಿಎ ನಿರ್ವಹಿಸುವ ನವನಗರದ ಯುನಿಟ್ -1, 2 ನಿರ್ವಹಿಸುವ ಹಕ್ಕಿಲ್ಲ. ಹೀಗಾಗಿ ನವನಗರವನ್ನು ತ್ವರಿತವಾಗಿ ನಗರಸಭೆಗೆ ಹಸ್ತಾಂತರಿಸುವ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆ ಇದೆ. ಇದಕ್ಕೆ ಪಿ.ಎಚ್.ಪೂಜಾರ ಅವರ ಅಧಿಕಾರದ ದುರಾಸೆ ಕಾರಣ ಎಂದು ದೂರಿದರು.ಬಿಟಿಡಿಎ ಹೋದರೆ ಏನಾಗುತ್ತದೆ?- ಚರಂತಿಮಠ ಆತಂಕವೇನು?

-1985 ಕೆಐಬಿ ಕಾಯ್ದೆಗೆ ತಿದ್ದುಪಡಿ ತಂದು ಬಿಟಿಡಿಎಯನ್ನು ಅಸ್ತಿತ್ವಕ್ಕೆ ತರಬೇಕಾದರೆ ಸಂತ್ರಸ್ತರ ಹಿತ ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ರೂಪಿಸಲಾಗಿತ್ತು. ಆದರೆ ಬುಡಾಕ್ಕೆ ಹಸ್ತಾಂತರಗೊಂಡಲ್ಲಿ ಸಂತ್ರಸ್ತರಿಗಾಗಿ ಇದ್ದ ವಿಶೇಷ ಸವಲತ್ತುಗಳು ಕೈತಪ್ಪಲಿವೆ (ಉದಾ: 10 ವರ್ಷಗಳ ಕಟ್ಟಡಕ್ಕೆ ತೆರಿಗೆ ವಿನಾಯಿತಿ, ಉಚಿತ ಕುಡಿಯುವ ನೀರು ಸೇರಿದಂತೆ ಸೌಲಭ್ಯಗಳು ಕಳೆದುಕೊಳ್ಳಬೇಕಾಗುತ್ತದೆ.) ಎಂದು ಆತಂಕ ವ್ಯಕ್ತಪಡಿಸಿದರು.-ನವನಗರದ ಸ್ವಚ್ಛತೆ, ವಿದ್ಯುತ್, ಚರಂಡಿ ನಿರ್ವಹಣೆ, ಒಳಚರಂಡಿ ನಿರ್ವಹಣೆ ಎಲ್ಲವನ್ನು ಬಿಟಿಡಿಎ ನಿರ್ವಹಿಸುತಿತ್ತು. ಆದರೆ ಬುಡಾಕ್ಕೆ ಈ ರೀತಿ ನಿರ್ವಹಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ.-ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಬಿಟಿಡಿಎ ಉಳಿಸಲು ವಿಶೇಷ ಪ್ರಯತ್ನ ಮಾಡಬೇಕು. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಆಡಳಿತ ಹಾಗೂ ವಿರೋಧ ಪಕ್ಷದ ಜನಪ್ರತಿನಿಧಿಗಳು ಒತ್ತಡ ತರುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.- ಬಾಗಲಕೋಟೆಯಲ್ಲಿ ಇನ್ನೂ ಮುಳುಗಡೆ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಕಾರಣ ಬಿಟಿಡಿಎಯನ್ನು ಬುಡಾದಲ್ಲಿ ವಿಲೀನಗೊಳಿಸಬಾರದು ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಇವರು ವಿಫಲರಾದ ಪರಿಣಾಮ ಸಂತ್ರಸ್ತರ ಹಿತಕ್ಕೆ ಕುತ್ತು ಬಂದಿದೆ.ಮಾತೆತ್ತಿದರೆ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು ಎಂದು ಹೇಳಿಕೊಳ್ಳುವ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರು ಬಾಗಲಕೋಟೆಯಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡ ಸಂಘದ ಕಚೇರಿ ಕಟ್ಟಡಕ್ಕೆ ತಾವೇ ನೀಡಿದ ಎರಡು ಲಕ್ಷ ರುಪಾಯಿಗಳ ಚೆಕ್ ಎರಡು ಬಾರಿ ಬ್ಯಾಂಕ್‌ನಿಂದ ಹಣ ಸಂದಾವಾಗದೇ ಮರಳಿ ಬಂದಿದೆ. ಇದು ಇವರಲ್ಲಿನ ಸಂಘ ಪರಿವಾರದ ಹಿನ್ನೆಲೆ.

- ಡಾ.ವೀರಣ್ಣ ಚರಂತಿಮಠ,

ಮಾಜಿ ಶಾಸಕರು.

Share this article