- ಜೆಜೆಎಂ ವೈದ್ಯಕೀಯ ಕಾಲೇಜಿನ ಕೀಲು ಮೂಳೆ ಪ್ರಾಧ್ಯಾಪಕ ಡಾ. ಜೆ.ರಘುಕುಮಾರ್ - - -
ಕನ್ನಡಪ್ರಭ ವಾರ್ತೆ ದಾವಣಗೆರೆವಯಸ್ಕರಲ್ಲಿ ಕೆಲವೊಂದು ಶಾರೀರಿಕ ಬದಲಾವಣೆಗಳು ಉಂಟಾಗುತ್ತವೆ. ಇದರಿಂದ ಯೌವನ ವಯಸ್ಸಿನಲ್ಲಿ ಕೆಲ ಪ್ರಕ್ರಿಯೆಗಳು ವಯಸ್ಕರಲ್ಲಿ ಸೀಮಿತಗೊಳ್ಳುತ್ತದೆ. ಮೂಳೆ ಮತ್ತು ಮಾಂಸ ಖಂಡಗಳಲ್ಲಿ ಬದಲಾವಣೆಗಳು ಉಂಟಾಗುತ್ತವೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಕೀಲು ಮೂಳೆ ವಿಭಾಗದ ಪ್ರಾಧ್ಯಾಪಕ ಡಾ. ಜೆ.ರಘುಕುಮಾರ್ ಹೇಳಿದರು.
ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಸಭಾಂಗಣದಲ್ಲಿ ಗುರುವಾರ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಆಯೋಜಿಸಿದ್ದ "ಮುಪ್ಪಿನಲ್ಲಿ ಮಂಡಿನೋವು-ಕಾರಣಗಳು: ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ " ವಿಷಯ ಕುರಿತು ಅವರು ಮಾಹಿತಿ ನೀಡಿದರು. ಮೂಳೆ, ಮಾಂಸ ಖಂಡಗಳ ದ್ರವ್ಯರಾಶಿ ಕಡಿಮೆ ಆಗುತ್ತದೆ. ಮೃದುಮೂಳೆ ಒಣಗುವುದು, ಲಿಗಮೆಂಟ್ ಮತ್ತು ಟೆಂಡನ್ ಪುನಶ್ಚೇತನ ಶಕ್ತಿ ಕಡಿಮೆಯಾಗುವುದು ಎಂದರು.ಸಂಧಿವಾತ ದೇಹದ ಯಾವುದೇ ಕೀಲುಗಳಲ್ಲಿ ಕಂಡುಬರಬಹುದು. ಆದರೆ ಮಂಡಿ ಕೀಲಿನಲ್ಲಿ ಸಾಮಾನ್ಯವಾಗಿ ಕಾಣಬಹುದು. ಸಂಧಿವಾತದ ಮುಖ್ಯ ಲಕ್ಷಣಗಳೆಂದರೆ ನೋವು, ಉರಿಯೂತ, ಕೀಲಿನಲ್ಲಿ ಶಬ್ಧ, ಕೀಲಿನ ಚಲನೆಯಲ್ಲಿ ಕೊರತೆ, ವಕ್ರಸಂಧಿಗಳು ಬರಬಹುದು. ಇದನ್ನು ಕ್ಷಕಿರಣದಿಂದ ಪರೀಕ್ಷಿಸಬಹುದು. ಇದರ ಕಾರಣ ತಿಳಿಯಲು ಕೆಲವೊಂದು ರಕ್ತ ಪರೀಕ್ಷೆ ಮಾಡಬೇಕಾಗುತ್ತದೆ. ಸಾಧಾರಣ ಸಂಧಿವಾತಕ್ಕೆ ವ್ಯಾಯಾಮ, ನೋವು ನಿವಾರಕ ಮಾತ್ರೆಗಳು, ಕೀಲಿಗೆ ಶಾಖದ ಚಿಕಿತ್ಸೆ ನೀಡಬಹುದು. ತೀವ್ರ ಸಂಧಿವಾತಕ್ಕೆ ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದರು.
ಧೂಮಪಾನವು ಮೂಳೆ ಮತ್ತು ಕಾರ್ಟಿಲೆಟ್ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮೊಣಕಾಲು ನೋವನ್ನು ಅನುಭವಿಸುತ್ತಿದ್ದರೆ ವೃತ್ತಿಪರ ವೈದ್ಯರ ಸಲಹೆ ಪಡೆಯಬೇಕು. ಆಹಾರ ಪದ್ಧತಿಯಲ್ಲಿ ಎಣ್ಣೆಯುಕ್ತ ಮೀನಿನಲ್ಲಿ ಒಮೆಗಾ-ಎ ಕೊಬ್ಬಿನಾಮ್ಲ ಸಮೃದ್ಧವಾಗಿದೆ. ಇದು ಉರಿಯೂತ, ಕೀಲುನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೀಜಗಳು, ಸಿಟ್ರಸ್ ಹಣ್ಣುಗಳು, ಹಸಿರು ಚಹಾ, ಹಸಿರು ಸೊಪ್ಪು, ತರಕಾರಿಗಳು, ಧಾನ್ಯಗಳು, ಬೇಳೆ ಕಾಳುಗಳು, ಆರೋಗ್ಯಕರ ಶಕ್ತಿ ಒದಗಿಸುತ್ತವೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ.ಗುರುಪ್ರಸಾದ್, ಹಿರಿಯ ಮಕ್ಕಳ ತಜ್ಞರಾದ ಡಾ.ಬಾಣಾಪುರಮಠ, ಡಾ.ಶೋಭಾ ಬಾಣಾಪುರಮಠ, ಡಾ.ಸುರೇಶ ಬಾಬು, ಡಾ.ನವೀನ್ ನಾಡಿಗ್, ಡಾ.ಮಧು ಪೂಜಾರ್, ಡಾ. ಎಸ್.ಎಸ್. ಪ್ರಕಾಶ್, ಡಾ.ರೇವಪ್ಪ, ಡಾ. ಮೃತ್ಯುಂಜಯ, ಡಾ.ಕೌಜಲಗಿ, ವ್ಯವಸ್ಥಾಪಕರಾದ ಸಿದ್ದೇಶ್ವರ ಗುಬ್ಬಿ, ಡಾ.ರಮೇಶ್, ಮಕ್ಕಳ ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.
- - --3ಕೆಡಿವಿಜಿ 35, 36.ಜೆಪಿಜಿ:
ಡಾ. ಜೆ.ರಘುಕುಮಾರ್ ಮಂಡಿನೋವು ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ ಕುರಿತು ಮಾಹಿತಿ ನೀಡಿದರು.