ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ಯಾದವರು, ವಿಜಯನಗರದ ಅರಸರು ಮುಂತಾದ ರಾಜ ಮನೆತನಗಳು ಹಾಗೂ ಮಾಂಡಳಿಕರು ಈ ನೆಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಶ್ರೀಮಂತಗೊಳಿಸಿದ್ದಾರೆ.
ಲಕ್ಷ್ಮೇಶ್ವರ: ಪುಲಿಗೆರೆಯು ತಿರುಳ್ಗನ್ನಡದ ಕನ್ನಡಿ. ಕರ್ನಾಟಕದ ಚರಿತ್ರೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಪುಲಿಗೆರೆಯ ನೆಲದ ಕೊಡುಗೆ ಅಪಾರವಾದದ್ದು. 6ನೇ ಶತಮಾನದಿಂದ 16ನೇ ಶತಮಾನದವರೆಗೆ ತನ್ನ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಹೆಜ್ಜೆ ಗುರುತುಗಳನ್ನು ಇಂದಿಗೂ ಇಲ್ಲಿ ಕಾಣಬಹುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಅಮರೇಶ್ ಯತಗಲ್ ತಿಳಿಸಿದರು.
ಪಟ್ಟಣದ ವೀರಗಂಗಾಧರ ಸಮುದಾಯ ಭವನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ್ದ ಮೂರು ದಿನಗಳ ಪುಲಿಗೆರೆ ಪರಿಸರದ ಪ್ರಾಚೀನ ಕನ್ನಡ ಸಾಹಿತ್ಯ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ 3ನೇ ದಿನದ ಕಾರ್ಯಕ್ರಮದಲ್ಲಿ ಪುಲಿಗೆರೆಯ ಐತಿಹಾಸಿಕ ಹಿನ್ನೆಲೆ ಕುರಿತು ಸಂಶೋಧನಾ ವಿಷಯ ಮಂಡಿಸಿದರು.
ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ಯಾದವರು, ವಿಜಯನಗರದ ಅರಸರು ಮುಂತಾದ ರಾಜ ಮನೆತನಗಳು ಹಾಗೂ ಮಾಂಡಳಿಕರು ಈ ನೆಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಶ್ರೀಮಂತಗೊಳಿಸಿದ್ದಾರೆ. ಪುಲಿಗೆರೆ ಮುನ್ನೂರರ ಪ್ರತಿಯೊಂದು ಕಣಗಳು ಗತವೈಭವದ ಪ್ರತೀಕವಾಗಿವೆ ಎಂದರು.ಸಂಶೋಧಕ ದೇವರಡ್ಡಿ ಹದ್ಲಿ ಮಾತನಾಡಿ, ಪುಲಿಗೆರೆಯ ಕನ್ನಡ ಕೇವಲ ತಿರುಳ್ಗನ್ನಡ, ಕವಿರಾಜ ಮಾರ್ಗಕಾರರ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಅದಕ್ಕಿಂತ ಮೊದಲೂ ಇಲ್ಲಿ ಕನ್ನಡದ ಶ್ರೇಷ್ಠತೆ ಹೊಂದಿದ್ದ ಭಾಷಾ ಶ್ರೀಮಂತಿಕೆ ಇತ್ತು. ಪ್ರಾಕೃತ ಭಾಷೆ ಹಾಗೂ ಸಂಸ್ಕೃತ ಭಾಷೆಗಳ ನಡುವೆಯೂ ಕನ್ನಡದ ಶ್ರೇಷ್ಠತೆ ಎತ್ತಿ ಹಿಡಿದ ನೆಲ ಅದು ಪುಲಿಗೆರೆಯ ನೆಲವಾಗಿತ್ತು ಎಂದರು.
ಎಸ್.ಎಫ್. ಆದಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಉಪಸ್ಥಿತರಿದ್ದರು. ಯಶವಂತ ದುರಗಣ್ಣವರ ವಚನ ಗಾಯನ ನಡೆಸಿಕೊಟ್ಟರು. ಮಹಾಕವಿ ಪಂಪನ ಮಹಾಕಾವ್ಯ ಅಜರಾಮರ
ಲಕ್ಷ್ಮೇಶ್ವರ: ಪುಲಿಗೆರೆ ಪರಿಸರ ಪಂಪನ ಮಹಾಕಾವ್ಯಗಳ ಸೃಷ್ಟಿಗೆ ಮಹತ್ತರ ಕೊಡುಗೆ ನೀಡಿದೆ. ಪಂಪ ಮಹಾಕವಿ ಕೃತಿಯಲ್ಲಿ ಪುಲಿಗೆರೆಯ ತಿರುಳ್ಗನ್ನಡ ಭಾಷೆಯ ಸೊಗಡು ಎದ್ದು ಕಾಣುತ್ತದೆ ಎಂದು ಡಾ. ಶಾಂತಿನಾಥ ದಿಬ್ಬದ ತಿಳಿಸಿದರು.ಪಟ್ಟಣದ ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಮೂರು ದಿನಗಳ ಕಾಲ ನಡೆದ ಪುಲಿಗೆರೆ ಪರಿಸರದ ಪ್ರಾಚೀನ ಕನ್ನಡ ಸಾಹಿತ್ಯದ ಕುರಿತ ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಿದರು.ಮಹಾಕವಿ ಪಂಪನು ರಚಿಸಿದ ಮಹಾಕಾವ್ಯಗಳು ಅಜರಾಮರವಾಗಿರುತ್ತವೆ. ಸಾವಿರಾರು ವರ್ಷ ಗತಿಸಿದರೂ ಪಂಪನ ಸಾಹಿತ್ಯ ಹಾಗೂ ಪಂಪನಿಗೆ ಸಾವು ಬಾರದು. ಮಹಾಕವಿ ಪಂಪನಿಗೆ ಸಂಸ್ಕೃತದಲ್ಲಿ ತನ್ನ ಕಾವ್ಯಗಳನ್ನು ರಚಿಸುವ ಅವಕಾವಿದ್ದರೂ ಪಂಪನು ತನ್ನ ಕಾವ್ಯಗಳನ್ನು ಪುಲಿಗೆರೆ ಪರಿಸರದ ತಿರುಳ್ಗನ್ನಡ ಭಾಷೆಯಲ್ಲಿ ರಚನೆ ಮಾಡಿದ್ದು ವಿಶೇಷವಾಗಿದೆ. ಪಂಪನ ಕಾವ್ಯಗಳಲ್ಲಿ ತಿರುಳ್ಗನ್ನಡ ಪದಗಳು ಹೇರಳವಾಗಿ ಕಂಡುಬರುತ್ತವೆ. ಕನ್ನಡ ಸಾಹಿತ್ಯಕ್ಕೆ ಮಹಾಕವಿ ಪಂಪನ ಮಹಾಕಾವ್ಯಗಳು ಮುಕುಟಮಣಿಗಳಾಗಿವೆ ಎಂದರು.ಡಾ. ಎನ್.ಎಂ. ತಳವಾರ, ಪ್ರೊ. ಆರ್.ಎನ್. ಪಾಟೀಲ, ಡಾ. ರಾಜಶೇಖರ ಇಚ್ಚಂಗಿ, ಡಾ. ಸಿ. ನಾಗಭೂಷಣ, ಲಲಿತಾ ಕೆರಿಮನಿ, ಈಶ್ವರ ಮೆಡ್ಲೇರಿ ಸೇರಿದಂತೆ ಅನೇಕರು ಇದ್ದರು. ಡಾ. ಅನ್ನಪೂರ್ಣ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ ಮಜ್ಜಿಗುಡ್ಡ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.