ಹಳಿಯಾಳ: ಸಿದ್ದಿ ಹಾಗೂ ದನಗರ ಗೌಳಿ ಸಮುದಾಯದ ಅಭಿವೃದ್ಧಿಗೆ ಇನ್ನಷ್ಟು ಯೋಜನೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ತಾಲೂಕಿನ ಕೆಸರೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬುಡಕಟ್ಟು ಸಿದ್ದಿ ಹಾಗೂ ದನಗರ ಗೌಳಿ ಸಮುದಾಯದವರು ವಾಸಿಸುವ ವಾಡಾ-ಗರಡೊಳ್ಳಿ, ರಾಯಪಟ್ಟಣ ಮತ್ತು ಕ್ಯಾತನಗೇರಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ತಾಲೂಕಿನಲ್ಲಿರುವ ಬುಡಕಟ್ಟು ಸಿದ್ದಿ ಸಮುದಾಯ ಹಾಗೂ ದನಗರ ಗೌಳಿ ಸಮುದಾಯದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಕೈಗೊಂಡ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಈಗ ಎರಡೂ ಸಮುದಾಯಗಳು ಉತ್ತಮ ಸ್ಥಿತಿಯಲ್ಲಿವೆ. ಆದರೆ ನನಗೆ ಇದರಿಂದ ತೃಪ್ತಿಯಿಲ್ಲ. ಇನ್ನಷ್ಟು ಯೋಜನೆ ತರುವ ಇಚ್ಛೆ ನನ್ನದಾಗಿದೆ ಎಂದು ಹೇಳಿದರು.

ಸಿದ್ದಿಗಳಿಗೆ ಎಸ್‌ಟಿ ಸೌಲಭ್ಯ: ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸಿದ್ದಿ ಸಮುದಾಯದವರನ್ನು ಎಸ್‌ಟಿ ಪಂಗಡಕ್ಕೆ ಸೇರ್ಪಡೆ ಮಾಡಿದ ಪರಿಣಾಮ ಅವರಿಗೆ ಅಭಿವೃದ್ಧಿಯ ಬಾಗಿಲು ತೆರೆಯಿತು. ಇದರಿಂದಾಗಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯುವ ಅವಕಾಶವೂ ದೊರೆಯಿತು. ಸಿದ್ದಿ ಸಮುದಾಯದವರು ವಾಸಿಸುವ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಒದಗಿಸುವಿಕೆಯ ಪರಿಣಾಮ ಇಂದು ಗ್ರಾಮಗಳ ಚಿತ್ರಣವೇ ಬದಲಾಗಿದೆ ಎಂದರು.

ಗೌಳಿ ಸಮುದಾಯದವರು ತಮ್ಮ ಮೂಲ ಕಸಬು ಹೈನುಗಾರಿಕೆಯನ್ನು ಬಿಡಬಾರದು, ಆದಷ್ಟು ಹೊಸ ತಂತ್ರಜ್ಞಾನ ಬಳಸಿಕೊಂಡು ಹೈನುಗಾರಿಕಾ ಉದ್ಯಮ ನಡೆಸಬೇಕು ಎಂದರು.

ಯಾವ ಕಾಮಗಾರಿ ಎಲ್ಲಿ?: ಗರಡೊಳ್ಳಿ-ವಾಡಾದಲ್ಲಿ ಅಂಗನವಾಡಿ ಕಟ್ಟಡ ಲೋಕಾರ್ಪಣೆ ಮಾಡಿದ ಶಾಸಕರು, ಗರಡೊಳ್ಳಿ-ವಾಡಾ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. ರಾಯಪಟ್ಟಣ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಕೊಠಡಿ ಲೋಕಾರ್ಪಣೆ ಮಾಡಿ, ತದನಂತರ ಕ್ಯಾತನಗೇರಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಲೋಕಾರ್ಪಣೆ ಮಾಡಿ, ಶಾಲಾ ಕೊಠಡಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಕಾಂಗ್ರೆಸ್ ಪ್ರಮುಖರಾದ ಅಂತೋನ ಡಿಗ್ಗೇಕರ, ಜ್ಯೂಲಿಯನ್ ಫರ್ನಾಂಡೀಸ್, ಸಂಜು ಪಾಟೀಲ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ಬಿಇಒ ಪ್ರಮೋದ ಮಹಾಲೆ, ಜಿಪಂ ಎಇಇ ಸತೀಶ ಆರ್., ಸಿಡಿಪಿಒ ಸಿದ್ದಲಿಂಗಪ್ಪ ಕೋರವಾಡ, ಪಿಡಬ್ಲ್ಯುಡಿ ಎಇಇ ಸಂತೋಷ ಅಥಣಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಸತೀಶ ಬಿರಾದಾರ ಇದ್ದರು.