ಪುಲಿಮುಂಚಿ ಸೈಟ್‌ 2 ವರ್ಷ ಬಳಿಕ ಲಭ್ಯ? : ಟೆಂಡರ್ ಕರೆಯುವ ಸಾಧ್ಯತೆ

KannadaprabhaNewsNetwork |  
Published : Jun 25, 2024, 12:30 AM ISTUpdated : Jun 25, 2024, 05:29 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ಕರ್ನಾಟಕ ಗೃಹ ಮಂಡಳಿಯಿಂದ ನಗರ ಹೊರವಲಯದ ಹೊಸಕೋಟೆ ಸಮೀಪದ ಪುಲಿಮುಂಚಿ ಗ್ರಾಮದ ಬಳಿ ಸುಸಜ್ಜಿತ ಟೌನ್‌ಶಿಪ್‌ ಅಭಿವೃದ್ಧಿಗೆ ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯುವ ಸಾಧ್ಯತೆ

 ಬೆಂಗಳೂರು :  ಕರ್ನಾಟಕ ಗೃಹ ಮಂಡಳಿಯಿಂದ ನಗರ ಹೊರವಲಯದ ಹೊಸಕೋಟೆ ಸಮೀಪದ ಪುಲಿಮುಂಚಿ ಗ್ರಾಮದ ಬಳಿ ಸುಸಜ್ಜಿತ ಟೌನ್‌ಶಿಪ್‌ ಅಭಿವೃದ್ಧಿಗೆ ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದ್ದು, ನಿವೇಶನಗಳು ಅರ್ಜಿದಾರರಿಗೆ ಲಭ್ಯವಾಗಲು ಸುಮಾರು 2 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಕೇಂದ್ರ ಭಾಗದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಪುಲಿಮುಂಚಿ ಗ್ರಾಮದ ಬಳಿ ಸುಮಾರು 71 ಎಕರೆ ಪ್ರದೇಶದಲ್ಲಿ 50:50 (ಭೂಮಾಲೀಕರು, ಕೆಎಚ್‌ಬಿ) ಅನುಪಾತದಲ್ಲಿ ಟೌನ್‌ಶಿಪ್ ನಿರ್ಮಿಸಲು ಬೇಡಿಕೆ ಸಮೀಕ್ಷೆಗಾಗಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕೆಎಚ್‌ಬಿ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, ಚುನಾವಣೆ ನೀತಿ ಸಂಹಿತೆ, ಜಮೀನು ಸಂಬಂಧಿಸಿದ ವಿವಿಧ ಕೆಲಸಗಳ ಕಾರಣದಿಂದ ಯೋಜನೆ ನಿಧಾನಗತಿಯಲ್ಲಿ ಸಾಗಿತ್ತು. ಈಗ ಎಲ್ಲಾ ಕೆಲಸಗಳು ಪೂರ್ಣಗೊಂಡಿವೆ. ನೀತಿ ಸಂಹಿತೆಯು ಮುಗಿದಿರುವ ಕಾರಣ ಇನ್ನೊಂದು ತಿಂಗಳಲ್ಲಿ ಲೇಔಟ್ ಅಭಿವೃದ್ಧಿಪಡಿಸಲು ಟೆಂಡರ್‌ ಕರೆಯಲಾಗುತ್ತದೆ ಎಂದು ಕೆಎಚ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ.

ಟೆಂಡರ್‌ ಅಂತಿಮಗೊಂಡು ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಸುಮಾರು 11 ತಿಂಗಳು ಕಾಲಾವಕಾಶವಿದೆ. ನಿವೇಶನಗಳಿಗೆ ಸಂಖ್ಯೆ ನಿಗದಿಪಡಿಸುವುದು ಮುಂತಾದ ಕೆಲಸಗಳು ಇರುತ್ತವೆ. ನಂತರ ಲಭ್ಯವಾಗುವ ಒಟ್ಟಾರೆ ನಿವೇಶನಗಳ ಪೈಕಿ ಯೋಜನೆಗೆ ಜಮೀನು ನೀಡಿರುವ ಭೂಮಾಲೀಕರಿಗೆ ಅರ್ಧದಷ್ಟು ವಿತರಿಸಬೇಕು.

71 ಎಕರೆ ಪ್ರದೇಶದಲ್ಲಿ ವಿವಿಧ ಅಳತೆಯ ಸುಮಾರು 960 ನಿವೇಶನಗಳು ಲಭ್ಯವಾಗುತ್ತವೆ. ಅದರಲ್ಲಿ ಕೆಎಚ್‌ಬಿಗೆ 450 ನಿವೇಶನಗಳು ಲಭ್ಯವಾಗುತ್ತವೆ. ಆದರೆ, 3,858 ಜನ ಅರ್ಜಿ ಸಲ್ಲಿಸಿದ್ದಾರೆ. ಮೀಸಲಾತಿ ಪ್ರಕಾರ ನಿವೇಶನಗಳನ್ನು ವಿಂಗಡಿಸಿ ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಪ್ರತಿ ಚದರ ಅಡಿಗೆ 1,500 ರು. ದರ ನಿಗದಿಪಡಿಸಲಾಗಿದೆ.

‘ಚುನಾವಣಾ ನೀತಿ ಸಂಹಿತೆ ಮುಗಿದಿರುವ ಕಾರಣ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆದು ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಆದಷ್ಟು ಬೇಗ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ.’

-ಕವಿತಾ. ಎಸ್.ಮನ್ನಿಕೇರಿ, ಆಯುಕ್ತೆ, ಕರ್ನಾಟಕ ಗೃಹ ಮಂಡಳಿ

-------

ಪ್ರಮುಖಾಂಶಗಳು

ಯೋಜನೆ: ಕೆಎಚ್‌ಬಿ ಟೌನ್‌ಶಿಪ್, ಪುಲಿಮುಂಚಿ ಗ್ರಾಮ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ

ಟೌನ್‌ಶಿಪ್ ವಿಸ್ತೀರ್ಣ: 71 ಎಕರೆ

ಕೆಎಚ್‌ಬಿಗೆ ಲಭ್ಯವಾಗುವ ನಿವೇಶನಗಳು: ಸುಮಾರು 450

ದರ: ಪ್ರತಿ ಚದರ ಅಡಿಗೆ 1,500 ರು.

ಅರ್ಜಿ ಸಲ್ಲಿಸಿದವರು: 3,858

ಆಯ್ಕೆ ವಿಧಾನ: ಲಾಟರಿ ಮೂಲಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ