ಮಂಗಳೂರು: ಮಂಗಳೂರು ಜೈನ್ ಸೊಸೈಟಿ ಮುಂದಾಳತ್ವದಲ್ಲಿ ರೂಪುಗೊಂಡ ನಗರದ ಪಂಪ್‌ವೆಲ್ ಮಹಾವೀರ ವೃತ್ತದಲ್ಲಿ ಮರುಸ್ಥಾಪನೆಗೊಂಡ ಕಲಶವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಶನಿವಾರ ಲೋಕಾರ್ಪಣೆಗೊಳಿಸಿದರು.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಮಂಗಳೂರು 2.0 ಅಭಿವೃದ್ಧಿಗೆ ಈ ಕಲಶ ಕಲಶಪ್ರಾಯವಾಗಿದೆ. ‘ಮರಳಿ ಊರಿಗೆ’ ಕಲ್ಪನೆಯಡಿ ಸ್ವಂತ ಊರಿನಲ್ಲಿ ಉದ್ಯೋಗ ಕೈಗೊಳ್ಳುವವರಿಗೆ ಇದು ಪ್ರೇರಣೆಯಾಗಬೇಕು ಎಂದರು.
ಬಿ.ಸಿ.ರೋಡ್-ಸುರತ್ಕಲ್ ಹೆದ್ದಾರಿಯ ಉನ್ನತೀಕರಣಕ್ಕೆ ಕಾರ್ಯಸಾಧ್ಯತಾ ವರದಿಗೆ ಕೇಂದ್ರ ಸೂಚಿಸಿದೆ. ಕುದುರೆಮುಖ ಪ್ಯಾಕ್ಟರಿಯಿಂದ ಬೈಕಂಪಾಡಿಗೆ ಹಾಗೂ ನಂತೂರಿನಿಂದ ಕೂಳೂರು ವರೆಗೆ ಎಲಿವೇಟೆಡ್ ರಸ್ತೆ ನಿರ್ಮಾಣವಾಗಬೇಕಾಗಿದೆ. ಸುರತ್ಕಲ್-ಬಿ.ಸಿ.ರೋಡ್ ಬೈಪಾಸ್ ರಸ್ತೆ ರಚನೆಯಾಗಬೇಕಾಗಿದ್ದು, ಇವಕ್ಕೆಲ್ಲ ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಜೊತೆ ಮಾತುಕತೆ ನಡೆಸಲು ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರ ಸಾಥ್ ಬೇಕಾಗಿದೆ ಎಂದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಮಂಗಳೂರಿಗೆ ಜೈನ್ ಸಮುದಾಯದ ಕೊಡುಗೆ ಅಪಾರವಾದ್ದು. ಅಲ್ಪಸಂಖ್ಯಾತರ ಇಲಾಖೆಯಲ್ಲಿ ಸಿಗುವ ಸವಲತ್ತುಗಳನ್ನು ಜೈನ್ ಸಮುದಾಯ ಕೂಡ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ದೇಶ ಕಟ್ಟುವ ಡಾ.ಹೆಗ್ಗಡೆ ಅವರ ಚಿಂತನೆ ಎಲ್ಲರಿಗೂ ಆದರ್ಶಪ್ರಾಯ. ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಲ್ಲಿ ಶ್ರಮಿಸುವಂತೆ ಡಾ.ಹೆಗ್ಗಡೆ ಅವರು ನನ್ನಲ್ಲಿ ಸೂಚಿಸಿದ್ದರು ಎಂದರು.ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಂಗಳೂರಿಗೆ ಆಗಮಿಸುವವರಿಗೆ ಪಂಪ್‌ವೆಲ್ ಮಹಾವೀರ ವೃತ್ತದ ಕಲಶ ಗೌರವ ಸೂಚಕವಾಗಿದೆ. ಇಲ್ಲಿ ಉದ್ದಿಮೆ ನಡೆಸುವವರಿಗೂ ಯಶಸ್ಸು ಸಿಗಲಿ ಎಂದು ಹಾರೈಸಿದರು. ಮಾಜಿ ಕಾರ್ಪೊರೇಟರ್ ಸಂದೀಪ್ ಗರೋಡಿ, ಮೂಡ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್ ಇದ್ದರು.ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ಮನೋಜ್ ಕುಮಾರ್ ವಾಮಂಜೂರು ನಿರೂಪಿಸಿದರು. ಡಾ. ಹೆಗ್ಗಡೆ ಚಿತ್ರಿಸಿದ ಕಲಶ ಇದು!
ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮನದಲ್ಲಿ ಮೂಡಿದ, ಅವರೇ ಚಿತ್ರಿಸಿದ ಕಲಶವನ್ನು ಇಲ್ಲಿ ಸ್ಥಾಪಿಸಿರುವುದು ಗಮನಾರ್ಹ.ಈ ವಿಚಾರವನ್ನು ಪ್ರಾಸ್ತಾವಿಕದಲ್ಲಿ ಹೇಳಿದ ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಜೈನ್, ಮೂರ್ತಿಗಳ ಬದಲು ಶುಭಕಾರ್ಯಕ್ಕೆ ಮಂಗಳಪ್ರಾಯವಾದ ಕಲಶದ ಪ್ರತಿಷ್ಠಾಪನೆ ಬಗ್ಗೆ ಡಾ.ಹೆಗ್ಗಡೆ ಒಲವು ವ್ಯಕ್ತಪಡಿಸಿದ್ದರು. ವರ್ಧಮಾನ ತೀರ್ಥಂಕರರ ಪ್ರತಿಷ್ಠಾಪನಾ ಮಹೋತ್ಸವದ ಸಂದರ್ಭದಲ್ಲಿ ಇದು ಮೂರ್ತರೂಪ ಪಡೆಯಿತು ಎಂದರು. ರಾತ್ರಿ ವಿವಿಧ ಬಣ್ಣಗಳ ಮೆರುಗು
ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಹೊತ್ತು ಎದ್ದು ನಿಂತಿರುವ ಈ ಬೃಹತ್ ಕಲಶ ಮತ್ತು ವೃತ್ತ ನಿರ್ಮಾಣಕ್ಕೆ ಸುಮಾರು ೨೫ ಲಕ್ಷ ರು. ವೆಚ್ಚವಾಗಿದೆ. ಈ ವೃತ್ತದ ಸುತ್ತ ರೇಲಿಂಗ್ ಅಳವಡಿಸಲಾಗಿದೆ. ವೃತ್ತಕ್ಕೆ ಅಲಂಕಾರಿಕ ದೀಪಗಳು ಹಾಗೂ ಗ್ರಾನೈಟ್ ಅಳವಡಿಕೆ ಮಾಡಲಾಗಿದೆ. ಪ್ರತಿದಿನ ಸಂಜೆ 6.30 ರಿಂದ ಬೆಳಗ್ಗಿನ ವರೆಗೆ ಆರು ಬಣ್ಣಗಳ ಬೆಳಕಿನಿಂದ ಕಂಗೊಳಿಸಲಿದೆ.