ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರದ ಬಳಿಕ ಪುಷ್ಯ ಮಳೆಯು ಜೋರಾಗಿ ಸುರಿಯುತ್ತಿದ್ದು, ಶನಿವಾರ ಸರಾಸರಿ 54.59ಮಿ.ಮೀ ಮಳೆ ಸುರಿದಿದೆ. ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲಿ ಧಾರಕಾರವಾಗಿ ಮಳೆ ಸುರಿದಿದೆ.ಜಿಲ್ಲೆಯಲ್ಲಿ ವಾಡಿಕೆ ಮೀರಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 603.55 ಮಿ.ಮೀ ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, ತಿಂಗಳ ಅಂತ್ಯಕ್ಕೆ ಇನ್ನೂ 10 ದಿನಗಳು ಬಾಕಿ ಇರುವಾಗಲೇ ವಾಡಿಕೆ ಮೀರಿದ್ದು, ಜು.20ರವರೆಗೆ 659.81 ಮಿ.ಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 54.59 ಮಿ.ಮೀ ಮಳೆಯಾಗಿದ್ದು. ಶಿವಮೊಗ್ಗದಲ್ಲಿ 28.20 ಮಿ.ಮೀ., ಭದ್ರಾವತಿ 22.80 ಮಿ.ಮೀ., ತೀರ್ಥಹಳ್ಳಿಯಲ್ಲಿ 65.60 ಮಿ.ಮೀ., ಸಾಗರದಲ್ಲಿ 93.10 ಮಿ.ಮೀ., ಶಿಕಾರಿಪುರದಲ್ಲಿ 41.40 ಮಿ.ಮೀ., ಸೊರಬದಲ್ಲಿ 53.40 ಮಿ.ಮೀ., ಹೊಸನಗರದಲ್ಲಿ 77.60 ಮಿ.ಮೀ. ಮಳೆಯಾಗಿದೆ.ಈಗಾಗಲೇ ಭರ್ತಿಯಾಗಿರುವ ತುಂಗಾ ಜಲಾಶಯಕ್ಕೆ ಶನಿವಾರ 65786 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದ್ದು, 68654 ಕ್ಯಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಶನಿವಾರ 46876 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 162.3ಕ್ಕೆ ಏರಿಕೆಯಾಗಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ದಲ್ಲಿ ಈಗ 45.04 ಟಿಎಂಸಿ ನೀರು ಸಂಗ್ರಹವಾಗಿದೆ.ಇನ್ನೂ ಶರಾವತಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 69724 ಕ್ಯುಸೆಕ್ ನೀರು ಹರಿದು ಬಂದಿದ್ದು, ಗರಿಷ್ಟ 1819 ಅಡಿ ಸಾಮರ್ಥ್ಯದ ಜಲಾಶಯದ ಮಟ್ಟ ಸದ್ಯ 1794.30 ಅಡಿಗೆ ಏರಿಕೆಯಾಗಿದೆ.
ಶಾಸಕ ಎಸ್.ಎನ್.ಚನ್ನಬಸಪ್ಪ ಭೇಟಿ:ಶಿವಮೊಗ್ಗದಲ್ಲಿ ಮಳೆಯಿಂದಾಗಿ ಪುರಲೆ ಮತ್ತು ಮಿಳಘಟ್ಟದಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಮನೆಯ ಗೋಡೆಗಳು ತೋಯ್ದಿರುವುದರಿಂದ ಏಕಾಏಕಿ ನೆಲಕ್ಕುಳುತ್ತಿವೆ. ತಾಲೂಕಿನಲ್ಲಿ 23 ಮನೆಗಳು ಹಾನಿಗೊಳಗಾಗಿದೆ. ಮಣ್ಣಿನ ಗೋಡೆಯ ಮನೆಗಳು ಮಳೆಗೆ ಭದ್ರತೆಯಿಲ್ಲದೆ ಬೀಳಲಾರಂಭಿಸುತ್ತಿವೆ.ಮಳೆಯಿಂದ ಮನೆ ಬಿದ್ದಿರುವ ಕಡೆ ಶಾಸಕ ಚನ್ನಬಸಪ್ಪ ಭೇಟಿ ನೀಡಿದ್ದಾರೆ. ಮಿಳಘಟ್ಟದಲ್ಲಿ ಹಾನಿಗೊಳಗಾದ 2 ಮನೆಗಳಿಗೆ ಮತ್ತು ಪುರಲೆಯಲ್ಲಿ 4 ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನೀಡಿದ್ದು, ಹಾನಿ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಳಜಿ ಕೇಂದ್ರಕ್ಕೂ ಶಾಸಕ ಭೇಟಿ:ಗುರುಪುರದ ಎಕೆ ಕಾಲೋನಿಯಲ್ಲಿ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಪುರಲೆಯ ಸರ್ಕಾರಿ ಶಾಲೆಗಳಲ್ಲಿ 11 ಜನ ನಿರಾಶ್ರಿತರಿಗೆ ಕಾಳಜಿ ಕೇಂದ್ರ ಆರಂಭವಾಗಿದೆ. ಇವರನ್ನೂ ಭೇಟಿ ಮಾಡಿದ ಶಾಸಕರು ಧೈರ್ಯ ತುಂಬಿದ್ದಾರೆ. ಈ ವೇಳೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ, ಜ್ಞಾನೇಶ್ವರ್, ಪ್ರಭು ಶಾಸಕರಿಗೆ ಸಾಥ್ ನೀಡಿದ್ದರು.
ಕಾಂಪೌಂಡ್ ಕುಸಿದು ಕಾರುಗಳು ಜಖಂ:ಶಿವಮೊಗ್ಗದ ಮಿಲ್ಲಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಎರಡು ಕಾರುಗಳು ಜಖಂಗೊಂಡಿವೆ.
ಶಾಲಾ ಕಾಂಪೌಂಡ್ ಗೋಡೆಯ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ಮಾರುತಿ ಓಮ್ನಿ ಹಾಗೂ ಮಾರುತಿ 800 ಕಾರ್ ಜಖಂಗೊಂಡಿವೆ. ಹೇಮಂತ ಹಾಗೂ ವಿಜಯ್ ಎಂಬುವರಿಗೆ ಈ ಕಾರುಗಳು ಸೇರಿದಾಗಿದ್ದು, ಹೇಮಂತ್ ಪಾತ್ರೆ ಮಾರಾಟ ಹಾಗೂ ಹಳೆಯ ಮಿಕ್ಸಿ ಯನ್ನು ಓಮಿನಿ ವಾಹನದಲ್ಲಿ ಹೋಗಿ ರಿಪೇರಿ ಮಾಡಿ ಬಂದ ಹಣದಿಂದ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನೂ ಗಾರೆ ಕೆಲಸಕ್ಕೆ ಹೋಗುವ ವಿಜಯ್ ಕಾರು ಕೂಡ ಸಂಪೂರ್ಣ ಜಖಂಗೊಂಡಿದ್ದು, ಶಾಲಾ ಕಾಂಪೌಂಡ್ ಗೋಡೆ ಬಿದ್ದು ವಾಹನಗಳು ಜಖಂಗೊಂಡ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ.ತುಂಬಿದ ತುಂಗೆಗೆ ಸಂಸದರಿಂದ ಬಾಗೀನ ಅರ್ಪಣೆ:
ಶಿವಮೊಗ್ಗ ಗಾಜನೂರಿನ ತುಂಗಾ ಜಲಾಶಯಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಶನಿವಾರ ಬಾಗಿನ ಅರ್ಪಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಕೆ.ಬಿ.ಅಶೋಕ್‍ನಾಯ್ಕ್, ಎಸ್. ದತ್ತಾತ್ರಿ, ಅನಿತಾ ರವಿಶಂಕರ್, ಯಶೋಧ, ಪವಿತ್ರ ರಾಮಯ್ಯ, ಸುಮಾಭೂಪಾಳಂ, ಸಂತೋಷ ಬೆಳ್ಳಕೆರೆ, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ಕೆ.ವಿ.ಅಣ್ಣಪ್ಪ, ವಿನ್ಸಂಟ್ ರೂಡ್ರಿಗಸ್ ಸೇರಿದಂತೆ ಇನ್ನಿತರರಿದ್ದರು.169ಎ ರಾ.ಹೆ.: ವಾಹನ ಸಂಚಾರಕ್ಕೆ ಅಡಚಣೆ ಇಲ್ಲತೀರ್ಥಹಳ್ಳಿ: ಪಟ್ಟಣ ಸಮೀಪದ 169ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಶನಿವಾರದಿಂದ ಎಂದಿನಂತೆ ಆರಂಭಗೊಂಡಿದ್ದು ಹೆದ್ದಾರಿಯನ್ನು ಮುಕ್ತ ಗೊಳಿಸಲಾಗಿದೆ. ಧರೆ ಕುಸಿದ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಶನಿವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಜಾಗದ ಕೊರತೆಯಿಂದ ಸೂಕ್ತ ರೀತಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದು ಮಳೆಯಿಂದಾಗಿ ಗುಡ್ಡದ ಮೇಲಿನಿಂದ ಬಂಡೆಗಳು ಜಾರಿದ ಪರಿಣಾಮ ಗುಡ್ಡ ಕುಸಿದಿದ್ದು ರಕ್ಷಣಾ ಗೋಡೆಗೂ ಹಾನಿ ಸಂಭವಿಸಿದೆ. ಹಾನಿಯಾಗಿರುವ ತಡೆಗೋಡೆ ಪ್ರತ್ಯೇಕ ಅನುದಾನದಲ್ಲಿ ನಿರ್ಮಿಸಲಾಗಿದ್ದು, ಸೇತುವೆ ಕಾಮಗಾರಿಯ ಟೆಂಡರ್‌ನಲ್ಲಿ ಸೇರಿರಲಿಲ್ಲ. ಪ್ರಸ್ತುತ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಇಲ್ಲ. ಮಳೆ ನಿಂತ ನಂತರದಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂದೂ ಹೇಳಿದರು.ಗುತ್ತಿಗೆದಾರರಾದ ಇಬ್ರಾಹಿಂ ಷರೀಫ್, ಹೆದ್ದಾರಿ ಪ್ರಾಧಿಕಾರದ ಇಂಜಿನಿಯರುಗಳಾದ ನವೀನ್ ರಾಜ್ ಹಾಗೂ ಶಶಿಧರ್ ಜೋಯ್ಸ್, ಬಿಜೆಪಿ ಮುಖಂಡರುಗಳಾದ ಬೇಗುವಳ್ಳಿ ಸತೀಶ್, ಚಂದವಳ್ಳಿ ಸೋಮಶೇಕರ್ ಇದ್ದರು.
ತಾವರೆಹಳ್ಳಿಯಲ್ಲಿ ಭೂ ಕುಸಿತ ಗ್ರಾಮಸ್ಥರು ಆತಂಕಆನಂದಪುರ: ಕಳೆದ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗೌರಿಕೆರೆ ಕೋಡಿಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿ ಭೂಕುಸಿತ ಉಂಟಾಗುತ್ತಿದೆ.
ಗೌರಿ ಕೆರೆಯ ಕೋಡಿ ನೀರು ತಾವರೆಹಳ್ಳಿ ಗ್ರಾಮದ ಮೂಲಕ ಶರಾವತಿ ಹಿನ್ನೆಲೆಗೆ ಸೇರಲಿದೆ. ಕೊಡಿಯಲ್ಲಿ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ಭೂಕುಸಿತ ಉಂಟಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಕೊಡಿಯ ಪಕ್ಕದಲ್ಲಿ ಗ್ರಾಮದ ರಸ್ತೆಯಿದ್ದು ಭೂ ಕುಸಿತ ಮುಂದುವರೆದರೆ. ರಸ್ತೆ ಕೂಡ ಕುಸಿದು ಹೋಗುವುದಲ್ಲದೆ, ಅಂಗನವಾಡಿ ಸೇರಿದಂತೆ 10 ಕುಟುಂಬಗಳು ಸಂಪರ್ಕ ಕಳೆದುಕೊಳ್ಳುವುದಲ್ಲದೆ ಅನಾಹುತ ಸಂಭವಸುವ ಆದ್ಯತೆ ಇದೆ. ವಿಷಯ ತಿಳಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.ಭೂಕುಸಿತವಾಗುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪತಸಿಲ್ದಾರ್ ಅವರಿಗೆ ಗ್ರಾಮಸ್ಥರು ತ್ವರಿತವಾಗಿ ಶಾಶ್ವತ ಪರಿಹಾರ ನೀಡುವಂತೆ ಮನವಿ ನೀಡಿದರು. ಮನವಿಯನ್ನು ಸ್ವೀಕರಿಸಿ. ಈ ಭೂಕುಸಿತದ ವಿಚಾರವಾಗಿ ತಕ್ಷಣವೇ ಸರ್ಕಾರದ ಗಮನಕ್ಕೆ ತರುವುದಾಗಿ ಪ್ರಭಾರಿ ಉಪ ತಹಸಿಲ್ದಾರ್ ಕವಿರಾಜ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದರು. ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ. ಪಂಚಾಯತ್ ಉಪಾಧ್ಯಕ್ಷ ರೂಪಕಲ, ಮಾಜಿ ಅಧ್ಯಕ್ಷ ನೇತ್ರಾವತಿ ಮಂಜುನಾಥ್, ಸದಸ್ಯ ಮೋಹನ್ ಕುಮಾರ್ ಕಾಲೋನಿ, ಕಂದಾಯ ಇಲಾಖೆಯ ಗೋವಿಂದ್ ಮೂರ್ತಿ, ರವೀಂದ್ರ, ರಿತೀಶ್, ತುಕ್ಕೋಜಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಬೀಳುವ ಹಂತದಲ್ಲಿ ಪಾಳುಬಿದ್ದ ಮನೆ: ಜೀವಭಯ
ರಿಪ್ಪನ್‍ಪೇಟೆ: ರಾಜ್ಯ ಹೆದ್ದಾರಿ ಶಿವಮೊಗ್ಗ-ಹೊಸನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಮನೆಯೊಂದು ಹಲವು ವರ್ಷಗಳಿಂದ ಪಾಳುಬಿದ್ದಿದ್ದು ಇದರಿಂದ ಯಾವುದೇ ಕ್ಷಣದಲ್ಲಿಯೂ ಉರುಳಿ ಬೀಳುತ್ತದೋ ಎಂಬ ಭಯದಲ್ಲಿ ಅಕ್ಕಪಕ್ಕದ ನಿವಾಸಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುವಂತಾಗಿದೆ.ಸತೀಶ್ ಕಿಣಿ ಮತ್ತು ಆರ್.ಎಸ್.ಶಂಶುದ್ದೀನ್ ಎಂಬುವರ ಅಕ್ಕಪಕ್ಕದ ನಿವಾಸಿಗಳಾಗಿದ್ದು ಸಣ್ಣ ಪುಟ್ಟ ಮಕ್ಕಳೊಂದಿಗೆ ಮನೆಯಲ್ಲಿ ವಾಸಮಾಡುತ್ತಿದ್ದು ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪಾಳುಬಿದ್ದ ಮನೆಯ ಗೋಡೆಗಳು ಯಾವುದೇ ಸಂದರ್ಭದಲ್ಲಿ ಬೀಳುವುದು ಎಂಬ ಭಯಕಾಡುವಂತಾಗಿದೆ.ಇನ್ನಾದರೂ ಸ್ಥಳೀಯಾಡಳಿತ ಸಂಬಂಧಿಸಿದ ಮನೆಯ ಮಾಲೀಕರನ್ನು ಕರೆಯಿಸಿ ತಕ್ಷಣ ಪಳು ಮನೆಯನ್ನು ನೆಲಸಮಗೊಳಿಸುವಂತೆ ಸೂಚಿಸಬೇಕು ಎಂದು ಸತೀಶ್ ಕಿಣಿ ಮತ್ತು ಶಂಶುದ್ದೀನ್ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಆಧಿಕಾರಿಗಳಿಗೆ ಮನವಿ ಮೂಲಕ ಆಗ್ರಹಿಸಿದ್ದಾರೆ.