ಅಭಿಮಾನಿಗಳ ಆಚರಣೆಯಲ್ಲಿ ಪುನೀತ್‌ ಜೀವಂತವಾಗಿದ್ದಾರೆ: ಕೆ.ರಘುರಾಂ

KannadaprabhaNewsNetwork |  
Published : Mar 18, 2025, 12:30 AM IST
48 | Kannada Prabha

ಸಾರಾಂಶ

ಇಂದಿಗೂ ಮಂತ್ರಾಲಯ ಅಂದ ತಕ್ಷಣ ಡಾ.ರಾಜ್‌ ಕುಮಾರ್ ಅವರು ಮಾಡಿದ ಗುರುರಾಯರ ಪಾತ್ರ ಕಣ್ಣ ಮುಂದೆ ಬರುತ್ತದೆ. ಅದು ರಾಜ್‌ ಕುಮಾರ್ ಅವರ ಕಲಾ ಪ್ರೌಢಿಮೆಗೆ ಸಾಕ್ಷಿ. ಯಾವುದೇ ಪಾತ್ರವಾದರೂ ಅದರೊಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ತಂದೆಯ ಹಾದಿಯಲ್ಲೇ ಸಾಗಿದ್ದ ಪುನೀತ್ ರಾಜ್‌ ಕುಮಾರ್ ಅವರ ಸದ್ಗುಣಗಳಿಗಾಗಿ ಇಂದು ಅವರನ್ನು ನೆನೆಸಿಕೊಳ್ಳುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಪುನೀತ್‌ ರಾಜಕುಮಾರ್‌ ನಮ್ಮನ್ನು ಅಗಲಿಲ್ಲ ಎಂಬುದಕ್ಕೆ ರಾಜ್ಯದೆಲ್ಲೆಡೆ ಅವರ ಹುಟ್ಟುಹಬ್ಬ ಆಚರಿಸುತ್ತಿರುವುದೇ ಸಾಕ್ಷಿ ಎಂದು ಬ್ರಾಹ್ಮಣ ಸಮಾಜದ ಮುಖಂಡ ಕೆ. ರಘುರಾಂ ವಾಜಪೇಯಿ ಹೇಳಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನವು ಆಯೋಜಿಸಿದ್ದ ಪವರ್‌ ಸ್ಟಾರ್‌ ಪುನೀತ್‌ರಾಜಕುಮಾರ್‌ ಅವರ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪುನೀತ್‌ ಮರಣಾ ನಂತರದವರೆಗೂ ಮಾಡಿದ ಸಮಾಜಮುಖಿ ಕಾರ್ಯಗಳು ಬಹಿರಂಗವಾದಾಗ ನಿಜಕ್ಕೂ ಪ್ರಚಾರ ಬಯಸದೇ ಸಮಾಜಕ್ಕೆ ನೆರವಾಗುವವರು ಈಗಲೂ ಇದ್ದಾರೆಯೇ ಎಂಬ ಅಚ್ಚರಿ ಮೂಡುತ್ತದೆ ಎಂದರು.

ಪುಟ್ಟಸ್ವಾಮಯ್ಯ ಮತ್ತು ಅವರ ಕುಟುಂಬದವರು ಕನ್ನಡಿಗರಲ್ಲಿ ಪೌರಾಣಿಕ ಹಾಗೂ ಸಾಂಸ್ಕೃತಿಕ ಪ್ರಜ್ಞೆ ಮೂಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಚಲನಚಿತ್ರ ಪರಂಪರೆ ಬಹಳ ವಿಶೇಷವಾದದ್ದು, ಅದರಲ್ಲೂ ಕನ್ನಡದಲ್ಲಿ ಪುಟ್ಟಸ್ವಾಮಯ್ಯ, ಅವರ ಮಗ ಡಾ. ರಾಜ್‌ ಕುಮಾರ್ ಮತ್ತು ಅವರ ಮಕ್ಕಳು ಕಲಾ ಪ್ರಪಂಚದಲ್ಲಿ ತೊಡಗಿಸಿಕೊಂಡು, ಕಲೆಯನ್ನು ತಪಸ್ಸಿನ ರೀತಿ ಆಚರಿಸಿದ್ದಾರೆ ಎಂದರು.

ಇಂದಿಗೂ ಮಂತ್ರಾಲಯ ಅಂದ ತಕ್ಷಣ ಡಾ.ರಾಜ್‌ ಕುಮಾರ್ ಅವರು ಮಾಡಿದ ಗುರುರಾಯರ ಪಾತ್ರ ಕಣ್ಣ ಮುಂದೆ ಬರುತ್ತದೆ. ಅದು ರಾಜ್‌ ಕುಮಾರ್ ಅವರ ಕಲಾ ಪ್ರೌಢಿಮೆಗೆ ಸಾಕ್ಷಿ. ಯಾವುದೇ ಪಾತ್ರವಾದರೂ ಅದರೊಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ತಂದೆಯ ಹಾದಿಯಲ್ಲೇ ಸಾಗಿದ್ದ ಪುನೀತ್ ರಾಜ್‌ ಕುಮಾರ್ ಅವರ ಸದ್ಗುಣಗಳಿಗಾಗಿ ಇಂದು ಅವರನ್ನು ನೆನೆಸಿಕೊಳ್ಳುತ್ತಿದ್ದೇವೆ. ಅವರ ಆದರ್ಶಗಳನ್ನು ಯುವ ಜನಾಂಗ ಪಾಲಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್‌ ಕುಮಾರ್ ಮಾತನಾಡಿ, ಚಿತ್ರರಂಗದಲ್ಲಿನ ಅನೇಕರನ್ನು ಕಲಾವಿದರು ಎನ್ನುತ್ತೇವೆ. ಆದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳಲ್ಲಿ ನಟಿಸಿ, ಅದರಂತೆಯೇ ಬದುಕಿದ ಪುನೀತ್ ಅಂತಹವರು ಮಾತ್ರ ನಾಯಕರೆನಿಸಿಕೊಳ್ಳುತ್ತಾರೆ ಎಂದರು.

ಪುನೀತ್ ರಾಜ್‌ ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದೆಡೆ ಹೆಮ್ಮೆ- ಇನ್ನೊಂದೆಡೆ ದುಃಖ ಎರಡೂ ಒಟ್ಟಿಗೆ ಆಗುತ್ತಿದೆ. ಇಂದಿಗೂ ಚಿತ್ರರಂಗದ ಬಹುತೇಕ ನಟರು ಕೇವಲ ಕಲಾವಿದರಾಗಿ ಉಳಿದು ಹೋಗಿದ್ದಾರೆ. ಅದರಲ್ಲೂ ಕೆಲ ನಾಯಕ ನಟರ ವೈಯಕ್ತಿಕ ಜೀವನವನ್ನು ಅನುಕರಣೆ ಮಾಡುವಂತೆಯೇ ಇಲ್ಲ. ಆದರೆ, ಪುನೀತ್ ರಾಜ್‌ ಕುಮಾರ್ ಈ ಮಾತಿಗೆ ಅಪವಾದ, ಅವರ ಚಿತ್ರ ಜೀವನ-ವೈಯಕ್ತಿಕ ಜೀವನ ಎರಡೂ ಅನುಕರಣೀಯ ಎಂದರು.

ವೇದಿಕೆಯಲ್ಲಿ ಜ್ಯೋತಿಷಿ ವಿಷ್ಣು ಸಾಲಿಗ್ರಾಮ ಸ್ವಾಮಿ, ನಟ ಸುಪ್ರೀತ್, ಪುನೀತ್ ರಾಜ್‌ ಕುಮಾರ್ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎನ್. ರಾಜು, ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!