ಕಾರವಾರ:ಮುಂದೇನು? ಸತೀಶ ಸೈಲ್ ಹೈಕೋರ್ಟಿಗೆ ಹೋಗುತ್ತಾರಾ? ಸ್ಟೇ ಸಿಗುತ್ತಾ? ಅವರು ಶಾಸಕ ಸ್ಥಾನದಿಂದ ಅನರ್ಹರಾಗುತ್ತಾರಾ? ಉಪ ಚುನಾವಣೆ ನಡೆಯಲಿದೆಯಾ?
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ಸತೀಶ ಸೈಲ್ ಅವರಿಗೆ ಶಿಕ್ಷೆ ವಿಧಿಸುತ್ತಿದ್ದಂತೆ ಅವರು ಪ್ರತಿನಿಧಿಸುತ್ತಿರುವ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ.
ಸೈಲ್ ಅವರ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ದುಗುಡದಿಂದ ಕೇಳುತ್ತಿದ್ದರೆ, ಜಿಲ್ಲೆಯಾದ್ಯಂತ ಜನತೆಯಲ್ಲಿ ತೀವ್ರ ಕುತೂಹಲ ಉಂಟಾಗಿದೆ. ಎರಡು ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಯಾದರೆ ಶಾಸಕ ಸ್ಥಾನವನ್ನು ಕಳೆದುಕೊಳ್ಳುವುದು ನಿಶ್ಚಿತ. ಈಗಾಗಲೆ ಸೈಲ್ ಅವರಿಗೆ 7 ವರ್ಷಗಳ ಶಿಕ್ಷೆ ಪ್ರಕಟವಾಗಿದೆ.
ಆದರೆ ಈ ಶಿಕ್ಷೆಗೆ ಹೈಕೋರ್ಟ್ ತಡೆ ನೀಡಿದರೆ ಆಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು. ಹೈಕೋಟ್ ತಡೆ ವಿಳಂಬವಾದಲ್ಲಿ ಅಥವಾ ಸಿಗದೆ ಇದ್ದಲ್ಲಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವುದು ಖಚಿತವಾಗಿದೆ.
ಹಾಗೆ ಶಾಸಕ ಸ್ಥಾನ ಕಳೆದುಕೊಂಡಲ್ಲಿ ಮತ್ತೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಹಿಂದೆ ಸತೀಶ ಸೈಲ್ ಶಾಸಕರಾಗಿದ್ದ ಸಂದರ್ಭದಲ್ಲಿ ಒಂದೂವರೆ ವರ್ಷ ಜೈಲಿನಲ್ಲಿ ಇದ್ದುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು ಎಂದು ಪ್ರತಿಪಕ್ಷಗಳಿಂದ ಆರೋಪ ಕೇಳಿಬಂದಿತ್ತು. ಆದರೆ ಆಗ ಅವರು ಆರೋಪಿಯಷ್ಟೇ ಆಗಿದ್ದರು.
ಈಗ ಆರೋಪ ಸಾಬೀತಾಗಿರುವುದು ಹಾಗೂ ಶಿಕ್ಷೆ ಪ್ರಕಟವಾಗಿರುವುದು ಸದ್ಯಕ್ಕೆ ಡೋಲಾಯಮಾನ ಪರಿಸ್ಥಿತಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಸತೀಶ ಸೈಲ್ ಅವರಿಗೆ ಶಿಕ್ಷೆಯಾದ ಬಗ್ಗೆ ವಿವಿಧ ಪ್ರತಿಕ್ರಿಯೆಗಳು ಬರುತ್ತಿವೆ. ಸತೀಶ್ ಸೈಲ್ ಬೆಂಬಲಿಗರು ಮಾತ್ರ ತೀವ್ರ ಕಳವಳಗೊಂಡಿದ್ದಾರೆ. ಯಾವುದೆ ರಾಜಕೀಯ ಪಕ್ಷಗಳ ಮುಖಂಡರು ಸದ್ಯಕ್ಕೆ ಯಾವುದೆ ಪ್ರತಿಕ್ರಿಯೆ ನೀಡದೆ ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಸೈಲ್‌ಗೆ ಮೇಲ್ಮನವಿಗೆ ಅವಕಾಶ...ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸತೀಶ್ ಸೈಲ್ ಅವರಿಗೆ ಅವಕಾಶ ಇದೆ. ಶಾಸಕ ಸ್ಥಾನವನ್ನು ಉಳಿಸಿಕೊಂಡು ಶಿಕ್ಷೆಯಿಂದ ಸದ್ಯಕ್ಕೆ ಪಾರಾಗಲು ಹೈಕೋರ್ಟ್ ಆದೇಶದಿಂದ ಮಾತ್ರ ಸಾಧ್ಯ. ಸೈಲ್ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಹೆಚ್ಚಿದೆ.