ಆರ್‌ಟಿಐ ಅನ್ವಯ ಮಾಹಿತಿ ನೀಡದಿದ್ದರೆ ಶಿಕ್ಷೆ: ಮಮತಾ ಗೌಡ

KannadaprabhaNewsNetwork |  
Published : Nov 11, 2025, 03:00 AM IST
10ಮಮತಾಮಾಹಿತಿ ಆಯುಕ್ತೆ ಮಮತಾ ಗೌಡ ಅಧ್ಯಕ್ಷತೆಯಲ್ಲಿ ಆರ್‌ಟಿಐ ಕಾಯ್ದೆ ಕಾರ್ಯಾಗಾರ | Kannada Prabha

ಸಾರಾಂಶ

ಸೋಮವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾರ್ಯಾಗಾರ ನೆರವೇರಿತು.

ಉಡುಪಿ: ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಗೊಳಿಸಲಾಗಿದೆ. ನಾಗರಿಕರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರೆ ನಿಗದಿತ ಕಾಲಾವಧಿಯಲ್ಲಿ ಸೂಕ್ತ ಶುಲ್ಕ ಪಡೆದು ತಪ್ಪದೆ ಮಾಹಿತಿ ನೀಡಬೇಕು ಎಂದು ರಾಜ್ಯ ಮಾಹಿತಿ ಆಯುಕ್ತೆ ಮಮತಾ ಗೌಡ ಹೇಳಿದ್ದಾರೆ.

ಸೋಮವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮಾಹಿತಿಯ ಪಾಲಕರಾಗಿದ್ದು, ಮಾಹಿತಿ ಹಕ್ಕು ಅರ್ಜಿಗಳಿಗೆ ಕ್ಷುಲ್ಲಕ ಕಾರಣ ನೀಡಿ ತಪ್ಪಿಸಿಕೊಳ್ಳದೆ, ಸಾರ್ವಜನಿಕ ಕಡತ, ಫೋಟೋ, ಡಿಜಿಟಲ್ ಮಾಹಿತಿಗಳು ಮತ್ತಿತರ ದಾಖಲೆಗಳನ್ನು ಯಥಾವತ್ತಾಗಿ ನೀಡಬೇಕು. ಖಾಸಗಿ ಸಂಸ್ಥೆಗಳ ವಿವರ, ಪಾನ್, ಆಧಾರ್, ಮಾರ್ಕ್ಸ್ ಕಾರ್ಡ್‌ ಇನ್ನಿತರ ವೈಯಕ್ತಿಕ ಮಾಹಿತಿ ನೀಡುವಂತಿಲ್ಲ. ಮಾಹಿತಿ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಹೊಂದಿದ್ದರೇ ಸೆಕ್ಷನ್ 11ರ ಅಡಿಯಲ್ಲಿ ಮಾಹಿತಿಗೆ ಸಂಬಂಧಪಟ್ಟವರಿಗೆ ನೋಟೀಸ್ ನೀಡಿ, ಅನುಮತಿ ಪಡೆದು ನೀಡಬಹುದಾಗಿದೆ ಎಂದರು.

ಅಧಿಕಾರಿಗಳು ಸ್ವಯಂಪ್ರೇರಣೆಯುಂದ ಮಾಹಿತಿಗಳನ್ನು ಅಧಿನಿಯಮದ 4(1)ಎ, 4(1)ಬಿ ರಡಿಯಲ್ಲಿ ವೆಬ್‌ಸೈಟ್‌ಗಳಲ್ಲಿ ಕಾಲಕಾಲಕ್ಕೆ ಅಪ್ಲೋಡ್ ಮಾಡಿದ್ದಲ್ಲಿ ಸಾರ್ವಜನಿಕರು ಅದರ ಲಾಭ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಅರ್ಜಿ ಸಲ್ಲಿಸುವುದು ತಪ್ಪುತ್ತದೆ ಎಂದರು. 8(1) ಜೆ ನಲ್ಲಿ ಸೂಚಿಸಲಾದ ದಾಖಲೆಗಳ ಮಾಹಿತಿ ನೀಡುವ ವಿನಾಯಿತಿ ಇದ್ದಲ್ಲಿ ಹಾಗೂ ನ್ಯಾಯಾಲಯದಿಂದ ನೀಡಬಾರದು ಎಂದು ಸ್ಪಷ್ಟ ಆದೇಶವಿದ್ದ ಸಂದರ್ಭದಲ್ಲಿ ಮಾಹಿತಿ ನೀಡಲು ನಿರಾಕರಿಸಬಹುದಾಗಿದೆ ಎಂದರು.

ಸಂಬಂಧಪಟ್ಟ ಅಧಿಕಾರಿಗಳು 30 ದಿನಗಳೊಳಗಾಗಿ ಅರ್ಜಿದಾರರಿಗೆ ಮಾಹಿತಿ ನೀಡಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕಾಲಕಾಲಕ್ಕೆ ತಿದ್ದುಪಡಿಗಳಾಗುತ್ತವೆ. ಅದನ್ನು ಪ್ರತಿಯೊಬ್ಬ ಅಧಿಕಾರಿಗಳು ತಿಳಿದುಕೊಳ್ಳಬೇಕು ಎಂದು ಕಾರ್ಯಾಗಾರ ಆಯೋಜಿಸಲಾಗಿದ್ದು, ಅಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್.ಕಾದ್ರೋಳ್ಳಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇದ್ದರು.

PREV

Recommended Stories

ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ನಯನಾಡು ಗೆಳೆಯರ ಬಳಗ ಸೇವಾ ಟ್ರಸ್ಟ್‌ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ