ಕಾಗದದಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳು ಜೀವಂತ

KannadaprabhaNewsNetwork |  
Published : Jul 30, 2026, 02:15 AM IST
ಗದಗ ನಗರದ ರೈಲ್ವೆ ಕ್ವಾಟ್ರಸ್ ಹತ್ತಿರ ಗಣೇಶ ಗುಡಿ ಹತ್ತಿರ ಇವರು ಶುದ್ಧ ನೀರಿನ ಘಟಕ ಸ್ಥಗಿತಗೊಂಡಿರುವುದು.  | Kannada Prabha

ಸಾರಾಂಶ

ಜಿಲ್ಲೆಯ ವ್ಯಾಪ್ತಿಯಲ್ಲಿರುವ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸರ್ಕಾರಕ್ಕೆ ನೀಡುತ್ತಿರುವ ವರದಿಗೂ ವಾಸ್ತವಕ್ಕೂ ಅಜಾಗಜಾಂತರ ವ್ಯತ್ಯಾಸವಿದೆ.

ಶಿವಕುಮಾರ ಕುಷ್ಟಗಿ

ಗದಗ: ದೇಶಕ್ಕೆ ಶುದ್ಧ ಕುಡಿಯುವ ನೀರಿನ ಘಟಕಗಳ ಪರಿಚಯಿಸಿದ ಹೆಮ್ಮೆ ಗದಗಿನದ್ದು. ಜಿಲ್ಲೆಯ ವ್ಯಾಪ್ತಿಯಲ್ಲಿರುವ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸರ್ಕಾರಕ್ಕೆ ನೀಡುತ್ತಿರುವ ವರದಿಗೂ ವಾಸ್ತವಕ್ಕೂ ಅಜಾಗಜಾಂತರ ವ್ಯತ್ಯಾಸವಿದೆ.

ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 78 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇವುಗಳಲ್ಲಿ ಬರೋಬ್ಬರಿ 70 ಘಟಕಗಳು ಸುಸ್ಥಿತಿಯಲ್ಲಿದ್ದು, ಚಾಲ್ತಿಯಲ್ಲಿವೆ ಮತ್ತು ಕೇವಲ 8 ಘಟಕಗಳು ಮಾತ್ರ ದುರಸ್ತಿಯಲ್ಲಿವೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಮತ್ತು ಬರ ಪರಿಶೀಲನೆಗೆ ಬಂದ ತಂಡಗಳಿಗೆ ಅಧಿಕೃತ ಮಾಹಿತಿ ರವಾನಿಸಿದೆ. ಆದರೆ, ವಾಸ್ತವದಲ್ಲಿ ಶೇ. 60ಕ್ಕಿಂತಲೂ ಅಧಿಕ ಘಟಕಗಳು ಅಂತರ್ಜಲ ಕೊರತೆ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಸಂಪೂರ್ಣವಾಗಿ ನಿಂತು ಹೋಗಿವೆ.

ಅಧಿಕಾರಿಗಳ ದ್ವಂದ್ವ ನೀತಿ

ಅಧಿಕಾರಿಗಳ ವರದಿಯಲ್ಲೇ ಎದ್ದು ಕಾಣುವ ದ್ವಂದ್ವ ನೀತಿಯೆಂದರೆ, ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಒಟ್ಟು 1253ರಲ್ಲಿ 237 ಕೊಳವೆಬಾವಿಗಳು ದುರಸ್ತಿಯಲ್ಲಿವೆ ಅಥವಾ ಅಂತರ್ಜಲ ಕೊರತೆಯಿಂದಾಗಿ ಸ್ಥಗಿತಗೊಂಡಿವೆ ಎಂದಿದೆ. ಆದರೆ, ಅದೇ ಕೊಳವೆಬಾವಿಗಳನ್ನೇ ಮೂಲವಾಗಿ ನೆಚ್ಚಿಕೊಂಡಿರುವ ಘಟಕಗಳು ಮಾತ್ರ 78 ರಲ್ಲಿ 70 ಚಾಲನೆಯಲ್ಲಿವೆ ಎಂದು ಹೇಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅಂತರ್ಜಲ ಮಟ್ಟ ಕುಸಿದ ಪರಿಣಾಮ ಘಟಕಗಳಿಗೆ ಅಗತ್ಯವಿರುವಷ್ಟು ನೀರು ಪೂರೈಕೆಯಾಗುತ್ತಿಲ್ಲ. ಮೂಲದಲ್ಲೇ ನೀರಿಲ್ಲದಿದ್ದಾಗ ಘಟಕಗಳು ಹೇಗೆ ಕಾರ್ಯಾಚರಣೆ ನಡೆಸಲು ಸಾಧ್ಯ ಎಂಬ ಸರಳ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.

ಆರ್‌ಒ ಅವಶ್ಯಕಗದಗ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ಲೊರೈಡ್ ಅಂಶವನ್ನು ಹೊಂದಿದ್ದು, ಈ ಮೊದಲು ಇಲ್ಲಿನ ಕೊಳವೆಬಾವಿಯ ನೀರು ಅತ್ಯಂತ ಕ್ಷಾರಯುಕ್ತವಾಗಿದ್ದು ಅವುಗಳ ಬಳಕೆಯಿಂದಾಗಿ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ 350 ಅಡಿಗಿಂತಲೂ ಕೆಳಗೆ ಹೋಗಿದ್ದು, ಅಷ್ಟೊಂದು ಆಳದ ನೀರಲ್ಲಿ ಅತೀ ಹೆಚ್ಚಿನ ಪ್ರಮಾಣದ ಲವಣಾಂಶಗಳು ಇರುವುದರಿಂದಾಗಿ ಆ ನೀರು ಬಳಸುವುದು ಕಷ್ಟ ಸಾಧ್ಯವಾಗಿದೆ. ಅದಕ್ಕಾಗಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಕೂಡಲೇ ಸರ್ಕಾರದ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೇ ಮುಚ್ಚಿ ಹೋಗಿವೆ. ಸಾರ್ವಜನಿಕರು ಅನಿವಾರ್ಯವಾಗಿ ನೀರಿಗಾಗಿ ದೂರದ ಖಾಸಗಿ ಘಟಕಗಳಿಗೆ ಹೋಗಬೇಕು. ಹೆಚ್ಚಿನ ಹಣ ಕೊಟ್ಟು ಶುದ್ಧ ನೀರು ತರುವಂತಾಗಿದೆ. ಆದರೆ, ಅಧಿಕಾರಿಗಳು ಇವೆಲ್ಲವೂ ಬಂದ್ ಆಗಿಲ್ಲ, ನಡೆಯುತ್ತಿವೆ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎನ್ನುತ್ತಾರೆ ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ.

ಸ್ಥಳೀಯ ಸಂಸ್ಥೆ, ಆರ್‌ಒ ಪ್ಲಾಂಟ್‌, ಚಾಲ್ತಿಯಲ್ಲಿ ಸ್ಥಗಿತ

ಗದಗ ನಗರಸಭೆ 21 21 00

ಗಜೇಂದ್ರಗಡ 07 06 01

ಲಕ್ಷ್ಮೇಶ್ವರ 05 04 01

ಮುಂಡರಗಿ 12 12 00

ನರಗುಂದ 09 04 05

ರೋಣ 05 05 00

ಮುಳಗುಂದ 07 07 07

ನರೇಗಲ್ಲ 07 06 01

ಶಿರಹಟ್ಟಿ 05 05 00

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ಥಕ ಬದುಕಿಗೆ ವಚನಗಳ ಸಾರ ದಾರಿದೀಪ
ನಗರಸಭೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ