ಮುಂಡರಗಿಯಲ್ಲಿ ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆ

KannadaprabhaNewsNetwork |  
Published : Oct 31, 2025, 02:45 AM IST
ಮುಂಡರಗಿಯಲ್ಲಿ ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಗುರುವಾರ ಕನ್ನಡ ಮಾತನಾಡುವ ಸ್ಪರ್ಧೆಯನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣೀಗೇರಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮುಂಡರಗಿ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರುವಾರ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ನಾಡು-ನುಡಿ ಕುರಿತು ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ ನಡೆಯಿತು.

ಮುಂಡರಗಿ: ಕನ್ನಡಿಗರಾದವರು ಕನ್ನಡ ಭಾಷೆಯನ್ನು ಉಳಿಸಿ-ಬಳಸಿ-ಬೆಳೆಸುವುದು ಮುಖ್ಯ. ನಮ್ಮ ಭಾಷೆ ಕನ್ನಡವನ್ನು ಹೃದಯತುಂಬಿ ಮಾತನಾಡಬೇಕು. ಶುದ್ಧ ಕನ್ನಡದಲ್ಲಿ ಮಾತನಾಡುವುದನ್ನು ಕಲಿತು, ಕರಗತ ಮಾಡಿಕೊಳ್ಳಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಹೇಳಿದರು.

ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಕಾರದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ನಾಡು-ನುಡಿ ಕುರಿತು ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ ಉದ್ಘಾಟಿಸಿ ಅವರು ಮತನಾಡಿದರು.

ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಸಂವಹನ ನಡೆಸಲು ಏಕೈಕ ಮಾರ್ಗ ಎಂದರೆ ಭಾಷೆ. ಇಂತಹ ಭಾಷೆಗಳಲ್ಲಿ ಕನ್ನಡ ಪ್ರಮುಖ ಭಾಷೆಯಾಗಿದೆ. ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ. ಈ ಶಾಲೆ ನಡೆಸುವ ಎಲ್ಲ ಕಾರ್ಯಕ್ರಮಗಳಿಗೆ ಇಲಾಖೆ ಸಹಕಾರ ನೀಡುತ್ತದೆ ಎಂದರು.

ಸಮಿತಿಯ ಗೌರವ ಕಾರ್ಯದರ್ಶಿ ವಿ. ಸೀತಾರಾಮರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಉಪಾಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿ, ಕನ್ನಡ ಭಾಷೆಗೆ ಉನ್ನತ ಸ್ಥಾನಮಾನವಿದೆ. ಅದನ್ನು ಉಳಿಸಿ-ಬೆಳೆಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು.

ಗದಗ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ಮುತ್ತು ಹಾಳಕೇರಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮುತ್ತು ಹಾಳಕೇರಿ ಮಾತನಾಡಿ, ಕನ್ನಡ ಭಾಷೆಗೆ ಮಡಿವಂತಿಕೆ ಬೇಡ, ಅದನ್ನು ಯಥೇಚ್ಛವಾಗಿ ಬಳಸುವುದರೊಂದಿಗೆ ಭಾಷೆಗೆ ಗೌರವ ಕೊಡೋಣ ಎಂದರು.

ಸಮಿತಿಯ ಈಶ್ವರಪ್ಪ ಹಂಚಿನಾಳ, ಕರಬಸಪ್ಪ ಹಂಚಿನಾಳ, ತಾಲೂಕು ಕಸಾಪದ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಮನೋಹರ, ನಿರ್ಣಾಯಕರಾದ ಆರ್.ಎಲ್. ಪೊಲೀಸ್‌ಪಾಟೀಲ್‌, ಎಂ.ಎಂ. ಹೆಬ್ಬಾಳ, ಹನುಮರಡ್ಡಿ ಇಟಗಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಪರಮೇಶ ನಾಯಕ ಉಪಸ್ಥಿತರಿದ್ದರು.

ಕನ್ನಡ ಮಾತನಾಡುವ ಸ್ಪರ್ಧೆಯಲ್ಲಿ ಒಟ್ಟು 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವರಡ್ಡಿ ಇಮ್ರಾಪುರ ಸ್ವಾಗತಿಸಿದರು. ಆಡಳಿತಾಧಿಕಾರಿ ಸಿ.ಎಸ್. ಅರಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗುಡದೀರಪ್ಪ ಲಿಂಗಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಚಿಲವಾಡಗಿ ವಂದಿಸಿದರು.

ಕನ್ನಡ ಮಾತನಾಡುವ ಸ್ಪರ್ಧೆಯ ಫಲಿತಾಂಶ: ಎಂ.ಎಸ್. ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿ ಅರ್ಚನಾ ಭಜಮ್ಮನವರ (ಪ್ರಥಮ), ಜೆ.ಎ. ಆಂಗ್ಲ ಮಾಧ್ಯಮ ಶಾಲೆಯ ಸುಮನ್ ಜಾಟ್ (ದ್ವಿತೀಯ) ಮತ್ತು ಎಸ್.ಎಫ್.ಎಸ್. ಪ್ರೌಢಶಾಲೆಯ ತನುಶ್ರೀ ಆರ್. ಹಾಗೂ ಜೆ.ಟಿ. ಕೋಟೆ ಪ್ರೌಢಶಾಲೆಯ ಮಾಳವ್ವ ಚಿಕ್ಕಣ್ಣವರ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ ಬಹುಮಾನ ₹1000, ದ್ವಿತೀಯ ಬಹುಮಾನ ₹750 ಮತ್ತು ತೃತೀಯ ಬಹುಮಾನ ₹500ಗಳನ್ನು ವಿಜೇತರಿಗೆ ತಾಲೂಕು ಆಡಳಿತ ನಡೆಸುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ