ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವುದೇ ಅಕ್ಷಯ ಪಾತ್ರೆ ಉದ್ದೇಶ: ಶ್ರೀ ಚಂಚಲಪತಿ ದಾಸ್

KannadaprabhaNewsNetwork |  
Published : Dec 25, 2024, 12:49 AM IST
ಫೋಟೋ: 24 ಹೆಚ್‌ಎಸ್‌ಕೆ 2 ಮತ್ತು 32.ಹೊಸಕೋಟೆ ನಗರದ ಹೊರವಲಯದ ಚೀಮಸಂದ್ರದಲ್ಲಿ ಕೆನರಾ ಬ್ಯಾಂಕ್ ಸಹಯೋಗದಿಂದ 76ನೇ ಅಕ್ಷಯಪಾತ್ರ ಅಡುಗೆ ಮನೆಯನ್ನು ಅಕ್ಷಯಪಾತ್ರೆ ಫೌಂಡೇಷನ್ ಉಪಾಧ್ಯಕ್ಷ ಶ್ರೀ ಚಂಚಲಪತಿ ದಾಸ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಊಟವನ್ನು ಒದಗಿಸುವ ಅಕ್ಷಯ ಪಾತ್ರೆದ ಬದ್ಧತೆಗೆ ಈ ಹೊಸ ಅಡುಗೆಮನೆ ಸಾಕ್ಷಿಯಾಗಿದೆ. ಅಕ್ಷಯ ಪಾತ್ರೆಯ ಸಾಮಾಜಿಕ ಬದ್ಧತೆಯ ಕಾರ್ಯಕ್ಕೆ ಸರ್ಕಾರಗಳ ಸಹಕಾರ ಕೂಡ ಪರಿಣಾಮಕಾರಿಯಾಗಿ ಧಕ್ಕುತ್ತಿದೆ .

ಕನ್ನಡಪ್ರಭ ವಾರ್ತೆ ಹೊಸಕೋಟೆ

ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಹಾಗೂ ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಬಿಸಿಯೂಟ ಒದಗಿಸುವುದೇ ಅಕ್ಷಯಪಾತ್ರೆ ಮುಖ್ಯ ಉದ್ದೇಶ ಎಂದು ಅಕ್ಷಯಪಾತ್ರೆ ಫೌಂಡೇಷನ್ ಉಪಾಧ್ಯಕ್ಷ ಶ್ರೀ ಚಂಚಲಪತಿ ದಾಸ್ ತಿಳಿಸಿದರು.

ನಗರದ ಹೊರವಲಯದ ಚೀಮಸಂದ್ರದಲ್ಲಿ ಕೆನರಾ ಬ್ಯಾಂಕ್ ಸಹಯೋಗದಿಂದ ೭೬ನೇ ಅಕ್ಷಯಪಾತ್ರೆ ಅಡುಗೆ ಮನೆಯನ್ನು ಉದ್ಘಾಟಿಸಿ ಮಾತನಾಡಿದರು.

24 ವರ್ಷಗಳ ಹಿಂದೆ ಅಕ್ಷಯ ಪಾತ್ರೆ ಫೌಂಡೇಷನ್ ಸ್ಥಾಪನೆ ಮಾಡಿದ ಸಂದರ್ಭದಲ್ಲಿ ಕೇವಲ 1500 ಮಕ್ಕಳಿಗೆ ಊಟ ಸರಬರಾಜು ಮಾಡುತ್ತಿದ್ದೆವು. ಪ್ರಸ್ತುತ 3 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತಿದ್ದು, ಚೀಮಸಂದ್ರದಲ್ಲಿ ಆರಂಭವಾಗಿರುವ ಈ ಹೊಸ ಅಡುಗೆ ಮನೆಯು ಸುಮಾರು 7500 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಒದಗಿಸುವ ಸೌಲಭ್ಯ ಹೊಂದಿದೆ. ಹೆಚ್ಚು ಮಕ್ಕಳಿಗೆ ಊಟ ಸಿದ್ಧಪಡಿಸಿದ ನಂತರ ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಮಾತನಾಡಿ, ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಊಟವನ್ನು ಒದಗಿಸುವ ಅಕ್ಷಯ ಪಾತ್ರೆದ ಬದ್ಧತೆಗೆ ಈ ಹೊಸ ಅಡುಗೆಮನೆ ಸಾಕ್ಷಿಯಾಗಿದೆ. ಅಕ್ಷಯ ಪಾತ್ರೆಯ ಸಾಮಾಜಿಕ ಬದ್ಧತೆಯ ಕಾರ್ಯಕ್ಕೆ ಸರ್ಕಾರಗಳ ಸಹಕಾರ ಕೂಡ ಪರಿಣಾಮಕಾರಿಯಾಗಿ ಧಕ್ಕುತ್ತಿದೆ ಎಂದರು.

ಅಕ್ಷಯ ಪಾತ್ರೆಯ ಫೌಂಡೇಷನ್ ಸಿಇಒ ಶ್ರೀಧರ್ ವೆಂಕಟ್ ಮಾತನಾಡಿ, ಅಕ್ಷಯ ಪಾತ್ರೆ ಫೌಂಡೇಷನ್ ಪ್ರಸ್ತುತ ಬೆಂಗಳೂರಿನ 1200ಕ್ಕೂ ಹೆಚ್ಚು ಶಾಲೆಗಳಲ್ಲಿ 1.8 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ಕರ್ನಾಟಕದ 3400ಕ್ಕೂ ಹೆಚ್ಚು ಶಾಲೆಗಳ 4.4 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಸಿಇಒ ಲತಾಕುಮಾರಿ, ಅಕ್ಷಯ ಪಾತ್ರೆ ಫೌಂಡೇಷನ್‌ನ ಬೆಂಗಳೂರು ಕ್ಲಸ್ಟರ್‌ನ ಪ್ರಾದೇಶಿಕ ಅಧ್ಯಕ್ಷ ಗುಣಕರ ರಾಮ ದಾಸ ಕೆನರಾ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯನಾರಾಯಣ ರಾಜು ಕೆ. ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...