ಪುಷ್ಕರಣಿ ವಿವಾದ: ಸಹಜ ಸ್ಥಿತಿಗೆ ಮರಳಿದ ಅಸಾರ ಓಣಿ

KannadaprabhaNewsNetwork |  
Published : Aug 24, 2026, 02:15 AM IST
ಪುಷ್ಕರಣಿ ವಿವಾದ ಹಿನ್ನೆಲೆ ಭಾನುವಾರ ಅಸಾರ ಓಣಿಗೆ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು. | Kannada Prabha

ಸಾರಾಂಶ

ಭವಾನಿ ಶಂಕರ ನಾರಾಯಣ ದೇವಸ್ಥಾನದ ಪುಷ್ಕರಣಿ ಜಾಗದಲ್ಲಿ ಪಾಲಿಕೆಯಿಂದ ರಸ್ತೆ ಕಾಮಗಾರಿ ನಡೆಸಿರುವುದನ್ನು ವಿರೋಧಿಸಿ ತೀವ್ರ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಹಳೇ ಹುಬ್ಬಳ್ಳಿಯ ಅಸಾರ ಓಣಿ ಭಾನುವಾರ ಸಹಜ ಸ್ಥಿತಿಗೆ ಮರಳಿತು. ಭಾನುವಾರ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಹುಬ್ಬಳ್ಳಿ: ಭವಾನಿ ಶಂಕರ ನಾರಾಯಣ ದೇವಸ್ಥಾನದ ಪುಷ್ಕರಣಿ ಜಾಗದಲ್ಲಿ ಪಾಲಿಕೆಯಿಂದ ರಸ್ತೆ ಕಾಮಗಾರಿ ನಡೆಸಿರುವುದನ್ನು ವಿರೋಧಿಸಿ ತೀವ್ರ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಹಳೇ ಹುಬ್ಬಳ್ಳಿಯ ಅಸಾರ ಓಣಿ ಭಾನುವಾರ ಸಹಜ ಸ್ಥಿತಿಗೆ ಮರಳಿತು. ಭಾನುವಾರ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಪುಷ್ಕರಣಿ ಜಾಗದಲ್ಲಿ ನಡೆಸಿರುವ ಕಾಮಗಾರಿ ತೆರವುಗೊಳಿಸದಿದ್ದರೆ ನಾವೇ ತೆರವುಗೊಳಿಸುವುದಾಗಿ ಹಿಂದೂಪರ ಸಂಘಟನೆಗಳು ಪಾಲಿಕೆಗೆ ಗಡುವು ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಹು-ಧಾ ಮಹಾನಗರ ಪೊಲೀಸ್ ಆಯುಕ್ತರು ದೇವಸ್ಥಾನದ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

ಭಾನುವಾರ ದೇವಸ್ಥಾನ ಹಾಗೂ ಅಸಾರ ಹೊಂಡದ ದರ್ಗಾ ಬಳಿ ಮಾತ್ರ ಬ್ಯಾರಿಕೇಡ್‌ಗಳನ್ನು ಮುಂದುವರಿಸಲಾಗಿದ್ದು, ಬಂದೋಬಸ್ತ್‌ಗಾಗಿ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ವಾಹನ ಹಾಗೂ ಜನ ಸಂಚಾರ ಎಂದಿನಂತೆ ಮುಂದುವರಿಯಿತು.

ಅಬ್ಬಯ್ಯ ಭೇಟಿ

ಇದೇ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಭಾನುವಾರ ಹಳೇ ಹುಬ್ಬಳ್ಳಿಯ ಅಸಾರ ಓಣಿಗೆ ನೀಡಿ ಪುಷ್ಕರಣಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಪ್ರಮುಖರೊಂದಿಗೆ ಚರ್ಚಿಸಿದರು. ಬಳಿಕ ದೇವಸ್ಥಾನದ ಪ್ರಾಂಗಣ ಹಾಗೂ ಮುಂಭಾಗದ ರಸ್ತೆಯನ್ನು ಪರಿಶೀಲಿಸಿದ ಅವರು, ಬಳಿಕ ಪುಷ್ಕರಣಿಯ ಅಸ್ತಿತ್ವ, ಜಾಗದ ಸ್ವರೂಪ ಹಾಗೂ ನಡೆಯುತ್ತಿರುವ ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ರಜತ್ ಉಳ್ಳಾಗಡ್ಡಿಮಠ, ಅಲ್ತಾಫ್ ಹಳ್ಳೂರ, ಗುರುನಾಥ ಉಳ್ಳಿಕಾಶಿ, ಶ್ರೀನಿವಾಸ ಬೆಳದಡಿ, ರಜನಿಕಾಂತ ಬಿಜವಾಡ, ಪ್ರಭು ಪ್ರಭಾಕರ, ಮಾರುತಿ ದೊಡ್ಡಮನಿ, ಸಂತೋಷ ಪೂಜಾರ, ಮಂಜುನಾಥ ಉಳ್ಳಿಕಾಶಿ, ಶ್ರೀಶೈಲ ಛಲವಾದಿ ಉಪಸ್ಥಿತರಿದ್ದರು. ಬಿಜೆಪಿ ರಾಜಕೀಯ ಪ್ರೇರಿತ ಹೋರಾಟ: ಅಬ್ಬಯ್ಯ

ಹಳೇ ಹುಬ್ಬಳ್ಳಿ ಶ್ರೀ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿಗೆ ಸಂಬಂಧಿಸಿದಂತೆ ಬಿಜೆಪಿಯವರು ನಡೆಸುತ್ತಿರುವುದು ರಾಜಕೀಯ ಪ್ರೇರಿತ ಹೋರಾಟ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಹುಡಾ ಸಿಡಿಪಿಯಲ್ಲಿ ರಸ್ತೆ ಇದೆ ಎನ್ನುವುದು ಇದೆ. ರಾಜ್ಯ ಪುರಾತತ್ವ ಇಲಾಖೆಯನ್ನು 2023ರಲ್ಲಿ ಹು-ಧಾ ಮಹಾನಗರ ಪಾಲಿಕೆ ಸಂಪರ್ಕ ಮಾಡಿತ್ತು. ಆಗ ಪುಷ್ಕರಣಿ ಇಲ್ಲ ಎಂದು ಇಲಾಖೆ ಹೇಳಿದೆ. ಇದರ ಆಧಾರದ ಮೇಲೆ ಪಾಲಿಕೆ ರಸ್ತೆ ಕಾಮಗಾರಿಗೆ ಆದೇಶ ನೀಡಿದೆ ಎಂದು ವಿವರಿಸಿದರು.

ಬಿಜೆಪಿಯವರಲ್ಲಿ ಯಾವ ದಾಖಲೆಗಳು, ಸಾಕ್ಷಿ ಇವೆಯೋ ಗೊತ್ತಿಲ್ಲ. ಆರ್‌ಎಸ್‌ಎಸ್ ನಾಗಪುರ ಕಚೇರಿಯಲ್ಲಿ ಪುರಾವೆಗಳಿವೆಯೋ ಅಥವಾ ಮಾಡಿದ್ದಾರೋ ಗೊತ್ತಿಲ್ಲ. ಜಾತಿ- ಧರ್ಮದ ಹೆಸರಿನಲ್ಲಿ ಹೋರಾಟ ಮಾಡುವುದು ಬಿಟ್ಟರೆ ಮತ್ತೇನು ಮಾಡುತ್ತಾರೆ? ಕಾನೂನು ಹೋರಾಟ ಮಾಡುವುದಿದ್ದರೆ ಮಾಡಲಿ, ಆಗಲಾದರೂ ಸತ್ಯ ಹೊರಗಡೆ ಬರುತ್ತದೆ ಎಂದರು.

ಬಿಜೆಪಿಯ ಪಾಂಡುರಂಗ ಪಾಟೀಲ ಅಲ್ಲಿ ಕಾರ್ಪೋರೇಟರ್ ಇದ್ದರು. ಅವರ ಅವಧಿಯಲ್ಲಿ ದೇವಸ್ಥಾನದ ಸುತ್ತಮುತ್ತ ಕಾಮಗಾರಿ ಆಗಿವೆ. ಆಗ ಯಾಕೆ ಬಿಜೆಪಿಯವರು ಚಕಾರ ಎತ್ತಲಿಲ್ಲ? ಈಗ ರಸ್ತೆ ಮಾಡಿದ್ದಕ್ಕೆ ಧರ್ಮದ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಣಜಿಗ ಸಮಾಜ ಸ್ವಾವಲಂಬನೆಯಿಂದ ಸಂಘಟಿತವಾಗಬೇಕು
ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಗಡಿಪಾರು ಮಾಡಿ