ನನ್ನನ್ನು ರಸ್ತೆಯಲ್ಲಿ ಕೊಚ್ಚಿ ಕೊಲ್ಲುತ್ತೇವೆ ಎಂದಿದ್ದಾರೆ ಎಂದ ಪುಷ್ಪಗಿರಿ ಸ್ವಾಮೀಜಿ

KannadaprabhaNewsNetwork | Published : Dec 14, 2023 1:30 AM

ಸಾರಾಂಶ

ಪುಷ್ಪಗಿರಿ ಕ್ಷೇತ್ರದ ಪೀಠಾಧಿಪತಿಯಾಗಿ ಹದಿನೈದು ವರ್ಷಗಳು ಕಳೆದಿವೆ. ಇಷ್ಟು ವರ್ಷ ನಾನು ಅನುಭವಿಸಿರುವ ಸಂಕಷ್ಟಗಳಿಂದ ಸಾಕಾಗಿ ಹೋಗಿದೆ. ಕೆಲವರು ನನ್ನನ್ನು ನಡುರಸ್ತೆಯಲ್ಲಿ ಕೊಚ್ಚುವುದಾಗಿ ಹೇಳುತ್ತಾರೆ. ಒಂದು ವೇಳೆ ಹಾಗಾದರೆ ಅದು ನನ್ನ ವೀರ ಮರಣ ಎಂದು ಪುಷ್ಪಗಿರಿ ಕ್ಷೇತ್ರದ ಪೀಠಾಧಿಪತಿಯಾದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಪುಷ್ಪಗಿರಿ ಎನ್ನುವುದು ಮಠವಲ್ಲ, ಇದು ಪುಷ್ಪಗಿರಿ ಕ್ಷೇತ್ರ. ಈ ಕ್ಷೇತ್ರದ ಪೀಠಾಧಿಪತಿಯಾಗಿ ಹದಿನೈದು ವರ್ಷಗಳು ಕಳೆದಿವೆ. ಇಷ್ಟು ವರ್ಷ ನಾನು ಅನುಭವಿಸಿರುವ ಸಂಕಷ್ಟಗಳಿಂದ ಸಾಕಾಗಿ ಹೋಗಿದೆ. ಕೆಲವರು ನನ್ನನ್ನು ನಡುರಸ್ತೆಯಲ್ಲಿ ಕೊಚ್ಚುವುದಾಗಿ ಹೇಳುತ್ತಾರೆ. ಒಂದು ವೇಳೆ ಹಾಗಾದರೆ ಅದು ನನ್ನ ವೀರ ಮರಣ ಎಂದು ಪುಷ್ಪಗಿರಿ ಕ್ಷೇತ್ರದ ಪೀಠಾಧಿಪತಿಯಾದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿಗೆ ಸಮೀಪದ ಪುಷ್ಪಗಿರಿ ಶ್ರೀ ಕ್ಷೇತ್ರದಲ್ಲಿ ಮಂಗಳವಾರ ರಾತ್ರಿ ನಡೆದ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳ ಅಮೃತಶಿಲೆಯ ವಿಗ್ರಹ ಪ್ರತಿಷ್ಠಾಪನೆ, ಆದಿಯೋಗಿ ಶಿವನ ವಿಗ್ರಹ ಉದ್ಘಾಟನೆ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿ ವರ್ಷದಂತೆ ೧೦೮ ಶಿವಲಿಂಗಗಳಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ, ತಮಗಿರುವ ಪ್ರಾಣ ಬೆದರಿಕೆ, ತಾವು ಮಾಡುತ್ತಿರುವ ಅಭಿವೃದ್ಧಿಗಳಿಗೆ ಅಸಹಕಾರ, ಭಿನ್ನಾಭಿಪ್ರಾಯಗಳ ಕುರಿತು ಶ್ರೀಗಳ ಬಹಿರಂಗ ವೇದಿಕೆಯಲ್ಲಿ ಅಸಮಾಧಾನ ಹಾಗೂ ನೋವನ್ನು ತೋಡಿಕೊಂಡಿದ್ದಾರೆ. ನಾನು ಈ ಕ್ಷೇತ್ರದ ಏಳಿಗೆಗಾಗಿ ದುಡಿಯುತ್ತಿರುವವನು. ಆದರೆ ಕೆಲವರು ರೋಡ್‌ನಲ್ಲಿ ಸಿಗಲಿ ಕೊಚ್ಚಿ ಹಾಕುತ್ತೇವೆ, ಇಲ್ಲಾ ಹೊಡೆದು ಹಾಕುತ್ತೇವೆ ಅಂತಾ ಹೇಳುತ್ತಿದ್ದಾರೆ. ಒಂದು ವೇಳೆ ಭಗವಂತ ನನ್ನ ಆಯಸ್ಸು ಕಡಿಮೆ ಮಾಡಿ, ಅವರ ಕೈಯಿಂದಲೇ ಹೋಗುವಂತಹ ಅವಕಾಶ ಮಾಡಿಕೊಟ್ಟರೆ ನಾನದನ್ನು ಸ್ವರ್ಗ ಅಂತ ಭಾವಿಸುತ್ತೇವೆ. ಬದುಕಿದ್ದಾಗ ವೀರ ಮರಣ ಸಾವನ್ನಪ್ಪಬೇಕು ಅಂತಾರೆ. ಹೆದರಿ ಹಿಂದಕ್ಕೆ ಓಡಿ ಹೋಗಿ ಸಾಯುವುದಿಲ್ಲ. ಹೀಗಾಗಿ ಎದುರುಗಡೆ ಕೊಚ್ಚಿಸಿಕೊಂಡು ಹೋದರೆ ನಮಗೆ ಸ್ವರ್ಗ ಸಿಗುತ್ತದೆ ಎಂದು ಭಾವಿಸಿದ್ದೇನೆ ಎಂದರು. ಈ ವೇದಿಕೆ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೂ ವೈಯುಕ್ತಿಕವಾದುದನ್ನು ಹೇಳಲೇಬೇಕಿತ್ತು ಹೇಳಿದ್ದೇನೆ. ಇದು ಎಲ್ಲರಿಗೂ ಬೇಸರ ಆಗಬಹುದು. ಆದರೆ ನಮ್ಮ ನಿಲುವನ್ನ ಹೇಳಲೇಬೇಕು. ಏಕೆಂದರೆ ಸಣ್ಣ ಸಣ್ಣ ಸಮಾಜಗಳು ಇವತ್ತು ದೊಡ್ಡ ದೊಡ್ಡ ಕ್ರಾಂತಿಯನ್ನು ಮಾಡುತ್ತಿವೆ. ಅದನ್ನು ನೋಡಿದ ನಮಗೂ ನಮ್ಮ ಕ್ಷೇತ್ರದಲ್ಲಿ ಏನಾದರೂ ವಿಭಿನ್ನವಾಗಿ ಮಾಡೋಣ ಅನಿಸುತ್ತದೆ. ಮಾಡುವಂತಹ ಶಕ್ತಿ ಇದೆ. ಆದರೆ ಸಹಕಾರ ಇಲ್ಲದ್ದಕ್ಕಾಗಿ ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡರು. ಕ್ಷೇತ್ರ ಎಂದು ಹೆಸರು ಪಡೆದ ಇಲ್ಲಿ ಯಾವ ಜಾತಿ, ಧರ್ಮಕ್ಕೆ ಅವಕಾಶ ಇಲ್ಲ. ಇದು ಸರ್ವಧರ್ಮದ ಕ್ಷೇತ್ರ ಎಂದು ನಾನು ಪದೇ ಪದೇ ಹೇಳುತ್ತಾ ಬಂದಿದ್ದೇನೆ. ಇದು ಪುಷ್ಪಗಿರಿ ಮಠವಲ್ಲ ಇದು ಪುಷ್ಪಗಿರಿ ಕ್ಷೇತ್ರ. ನಾನು ಈ ಕ್ಷೇತ್ರದ ಕೆಲಸ ಮಾಡಲಿಕ್ಕೆ ಸೀಮಿತ ಆಗಿದ್ದೇನೆ. ಈ ಕೆಲಸವನ್ನು ಅರ್ಧ ಭಾಗ ಸರಕಾರದ ಹಣದಲ್ಲಿ ಇನ್ನು ಅರ್ಧ ಭಕ್ತರ ಸಹಾಯದಿಂದ ಮಾಡಿದ್ದೇನೆ. ನನಗೆ ಯಾವ ಜಾತಿ, ಧರ್ಮ ಮುಖ್ಯವಲ್ಲ. ನಾನು ಒಬ್ಬ ಸನ್ಯಾಸಿ. ನನಗೆ ಯಾವ ಆಸೆ, ಆಕಾಂಕ್ಷಿಗಳು ಇಲ್ಲದೆ ಕೆಲಸ ಮಾಡುತ್ತಿದ್ದೇನೆ.

ಪ್ರತಿ ರಾಜಮನೆತನದಲ್ಲಿ ಗುರುಗಳನ್ನು ನೇಮಿಸಿಕೊಳ್ಳುವುದು ಹಿಂದಿನಿಂದಲೂ ನಡೆದುಬಂದ ಪದ್ಧತಿಯಾಗಿತ್ತು. ಅದೇ ರೀತಿ ಹೊಯ್ಸಳ ಮಹಾರಾಜರ ಕಾಲದಲ್ಲಿ ಪುಷ್ಪಗಿರಿ ಮಹಾ ಸಂಸ್ಥಾನದ ರಾಜ ಗುರುಗಳನ್ನು ನೇಮಿಸಿಕೊಂಡಿರುವುದಕ್ಕೆ ಇಲ್ಲಿನ ಬೆಳ್ಳಿಯ ಪದಕದಲ್ಲಿ ಶಾಸನ ಇದೆ ಎಂದು ತಿಳಿಸಿದರು.ಬಾಕ್ಸ್‌*

*ಬಾಕ್ಸ್‌ನ್ಯೂಸ್‌: ಅಧಿಕಾರಿಗಳೇ ಜಾತ್ರೆ ನಡೆಸಿಕೊಳ್ಳಿ:

ಇನ್ನು ರಾಜ್ಯ ಬಿಜೆಪಿ ವಕ್ತಾರರಾದ ಚಂದ್ರಶೇಖರ್ ಅವರು ಇನ್ನೂ ನೂರು ವರ್ಷಕಾಲ ಬಾಳಿ ಅಂತ ಹೇಳುತ್ತಿದ್ದರು. ನಮಗೆ ನೂರು ವರ್ಷವಲ್ಲ, ಹದಿನೈದು ವರ್ಷಕ್ಕೆ ಸಾಕಾಗಿದೆ. ಹಾಗಾಗಿ ಈಗಲೇ ಹೇಳುತ್ತಿದ್ದೇನೆ ಮುಂದಿನ ದಿನಗಳಲ್ಲಿ ತಾಲೂಕು ಅಧಿಕಾರಿ ನೀವೇ ನಿಂತುಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಳ್ಳಿ ಎಂದು ಶ್ರೀಗಳು ಹೇಳಿದರು. ನಾವು ನಿಮಿತ್ತ ಮಾತ್ರ ಇರುತ್ತೇವೆ. ಹೇಗೆ ಕಾರ್ಯಕ್ರಮ ಮಾಡಬೇಕು ಅಂತ ಹೇಳಿ ನಾವು ಮಾಡಿಕೊಂಡು ಹೋಗುತ್ತೇವೆ. ಬಹುಶಃ ನೀವು ಇದ್ದರೆ ಪರವಾಗಿಲ್ಲ. ಮುಂದೆ ಯಾರೇ ಬಂದರೂ ಕೂಡ ಸರ್ಕಾರ ಆಡಳಿತಾತ್ಮಕವಾಗಿ ಏನಿದೆ ಅದನ್ನು ನಡೆಸಿಕೊಂಡು ಹೋಗಿ. ಈ ಕಾರ್ಯಕ್ರಮವನ್ನು ಸರ್ಕಾರದ ಕಾರ್ಯಕ್ರಮದ ರೀತಿ ಮಾಡಿಕೊಂಡು ಹೋಗಿ ಎಂದು ಹೇಳಿದರು.

Share this article