ಕನ್ನಡಪ್ರಭ ವಾರ್ತೆ ಖಾನಾಪುರ
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಶನಿವಾರವೂ ತನ್ನ ಆರ್ಭಟ ಮುಂದುವರೆಸಿದೆ. ಶುಕ್ರವಾರ ರಾತ್ರಿ ಸುರಿದ ಮಳೆಯ ರಭಸಕ್ಕೆ ತಾಲೂಕಿನ ಮಂತುರ್ಗಾ ಬಳಿಯ ಅಲಾತ್ರಿ ಹಳ್ಳದ ಸೇತುವೆಯ ಮೇಲೆ ನೀರು ಹರಿಯಲಾರಂಭಿಸಿದೆ. ಲೋಂಡಾ-ವರ್ಕಡ ಮಾರ್ಗಮಧ್ಯದ ಹಳ್ಳದ ಸೇತುವೆಯಲ್ಲೂ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. ತಾಲೂಕಿನ ಗವ್ವಾಳಿ, ಅಮಗಾಂವ, ಕೃಷ್ಣಾಪುರ, ಹುಳಂದ, ಸಡಾ, ದೇಗಾಂವ ಮತ್ತು ಹಂದಿಕೊಪ್ಪ, ಗೌಳಿವಾಡಾ ಗ್ರಾಮಗಳು ಮುಖ್ಯವಾಹಿನಿಯಿಂದ ಸಂಪರ್ಕ ಕಡಿದುಕೊಂಡು ನಡುಗಡ್ಡೆಗಳಾಗಿವೆ. ಸತತ ಮಳೆಯ ಕಾರಣ ಅರಣ್ಯ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ಗ್ರಾಮಗಳಲ್ಲಿ ಮೊಬೈಲ್ ನೆಟವರ್ಕ್ ಇಲ್ಲದೆ ಸಮಸ್ಯೆ ಉದ್ಭವಿಸಿದೆ. ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.ಕರ್ನಾಟಕ-ಗೋವಾ ಗಡಿಯಲ್ಲಿ ಶನಿವಾರ ಇಡೀ ದಿನ ಮಳೆಯ ಅಬ್ಬರ ಮುಂದುವರಿದ ಪರಿಣಾಮ ಮಲಪ್ರಭಾ, ಮಹದಾಯಿ ನದಿಗಳು ಮತ್ತು ಕಳಸಾ-ಭಂಡೂರಿ, ಅಲಾತ್ರಿ, ಮಂಗೇತ್ರಿ, ಪಣಸೂರಿ, ಕೋಟ್ನಿ, ಬೈಲ್, ಕುಂಬಾರ, ನಿಟ್ಟೂರ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಗುಂಜಿ ಮತ್ತು ಜಾಂಬೋಟಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಗೋಲಿಹಳ್ಳಿ, ಘಷ್ಟೊಳ್ಳಿ, ಕಸಮಳಗಿ, ಕರಂಬಳ, ನೀಲಾವಡೆ, ಕುಸಮಳಿ, ಮಂಗೇನಕೊಪ್ಪ, ಹಿಂಡಲಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಕುಸಿದ ವರದಿಯಾಗಿದೆ.
ಜಾಂಬೋಟಿ ಮತ್ತು ಗುಂಜಿ ಹೋಬಳಿ ವ್ಯಾಪ್ತಿಯ 40ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಇದುವರೆಗೂ ಯಾವುದೇ ಅವಘಡ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಕಚೇರಿಯ ಮೂಲಗಳು ಸ್ಪಷ್ಟಪಡಿಸಿವೆ.ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಶನಿವಾರ ಕಣಕುಂಬಿಯಲ್ಲಿ 13.2 ಸೆಂ.ಮೀ, ಖಾನಾಪುರ ಪಟ್ಟಣ ಹಾಗೂ ಜಾಂಬೋಟಿಯಲ್ಲಿ 3 ಸೆಂ.ಮೀ, ನಾಗರಗಾಳಿ, ಗುಂಜಿ, ಅಸೋಗಾ, ಬೀಡಿ, ಕಕ್ಕೇರಿಗಳಲ್ಲಿ ಸರಾಸರಿ 4 ಸೆಂ.ಮೀ ಮತ್ತು ಲೋಂಡಾದಲ್ಲಿ 6 ಸೆಂ.ಮೀ ಮಳೆಯಾಗಿದೆ.