ನೇಮಕಾತಿ ಮುಂಬಡ್ತಿಗಳಿಗೆ ತಡೆ ನೀಡಿ

KannadaprabhaNewsNetwork | Published : Dec 10, 2024 12:31 AM

ಸಾರಾಂಶ

ನ್ಯಾ.ನಾಗಮೋಹನ್‌ದಾಸ್ ಅವರ ಏಕಸದಸ್ಯ ಪೀಠದ ವರದಿ ಬಂದು ಒಳಮೀಸಲಾತಿ ಜಾರಿಯಾಗುವವರೆಗೂ ರಾಜ್ಯ ಸರಕಾರ ಸರಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಮುಂಬಡ್ತಿಯನ್ನು ತಡೆ ಹಿಡಿಯಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು ನ್ಯಾ.ನಾಗಮೋಹನ್‌ದಾಸ್ ಅವರ ಏಕಸದಸ್ಯ ಪೀಠದ ವರದಿ ಬಂದು ಒಳಮೀಸಲಾತಿ ಜಾರಿಯಾಗುವವರೆಗೂ ರಾಜ್ಯ ಸರಕಾರ ಸರಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಮುಂಬಡ್ತಿಯನ್ನು ತಡೆ ಹಿಡಿಯಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಮೂರ್ನಾಲ್ಕು ದಶಕಗಳಿಂದ ರಾಜ್ಯದಲ್ಲಿ ಮಾದಿಗ ಸಮುದಾಯ ಒಳ ಮೀಸಲಾತಿನ ಜಾರಿ ಮಾಡಬೇಕೆಂಬ ಹಿತದೃಷ್ಟಿಯಿಂದ ಅನೇಕ ಹೋರಾಟ ಧರಣಿ ಸತ್ಯಾಗ್ರಹ ಪ್ರತಿಭಟನೆಗಳು ನಡೆದವು. ರಾಜ್ಯದಲ್ಲಿ ಆಡಳಿತಗಾರರು ಮಾದಿಗ ಸಮುದಾಯದ ಮೀಸಲಾತಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದರು. ಸರಕಾರದ ಸಚಿವ ಸಂಪುಟದಲ್ಲಿ ಸಮಾಜವಾದಿಗಳು, ಅಂಬೇಡ್ಕರ್ ವಾದಿಗಳು ಎಂದು ಘೋಷಿಸಿಕೊಳ್ಳುವ ದಲಿತ ಹಿಂದುಳಿದ ಅಲ್ಪಸಂಖ್ಯಾತ ಮತ್ತು ಇತರ ಜಾತಿ ಸಚಿವರಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಈ ಮಾತುಗಳನ್ನು ಹೇಳುವ ಸಿದ್ದರಾಮಯ್ಯ ಅವರು, ಕಳೆದ 30 ವರ್ಷಗಳಿಂದ ಒಳ ಮೀಸಲಾತಿಯನ್ನು ಜಾರಿಗೆ ಎಳ್ಳು ನೀರು ಬಿಟ್ಟಿದ್ದಾರೆ ಎಂದರು. ಕಳೆದ ಹತ್ತು ವರ್ಷಗಳಿಂದ ಮಾದಿಗ ಸಮುದಾಯದ ಮತ್ತು ದಲಿತ ಶೋಷಿತರ ಪರವಾಗಿ ಇರುತ್ತೇವೆ ಎಂದು ವಾಗ್ದಾನ ನೀಡಿದ ಕಾಂಗ್ರೆಸ್ ಪಕ್ಷ ಇದೀಗ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನಗಳ ವಿರುದ್ಧವಾಗಿ ಸಾರ್ವಜನಿಕವಾಗಿಯೇ ಮಾತನಾಡುತ್ತಿದ್ದಾರೆ. ತುಮಕೂರು ಜಿಲ್ಲೆಯ ಗೃಹ ಸಚಿವರು ಮಾದಿಗ ಸಮುದಾಯದ ಮತಗಳಿಂದ ಗೆದ್ದು ಬಂದು ಇದೀಗ ಅವರ ಹಿತ ಕಾಯುವ ಬದಲಾಗಿ ಸಚಿವ ಸಂಪುಟದ ವಿರುದ್ಧವಾಗಿ ನೇಮಕಾತಿ ಮತ್ತು ಮುಂಬಡ್ತಿಯನ್ನು ನೀಡಲು ಮುಂದಾಗಿರುವುದು ನಮಗೆಲ್ಲ ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು. ಎಸ್ಸಿ ಎಸ್ಟಿ ನೌಕರರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರೊಫೆಸರ್ ಸಿ.ಕೆ.ಮಹೇಶ್, ಎಸ್.ಸಿ,ಎಸ್.ಟಿ ನೌಕರರ ಒಕ್ಕೂಟದ ಸಂಘದ ಸದಸ್ಯ ಚಿಕ್ಕಣ್ಣ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಎಸ್ಸಿ ಎಸ್ಟಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಗೂ ಸಾಮಾಜಿಕ ಸಂಘಟನೆಯ ಸಮಿತಿಯ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ,ವಕೀಲರು ಮತ್ತು ಪ್ರಾಧ್ಯಾಪಕ ಜೆ.ಸಿ.ರಂಗಧಾಮಯ್ಯ, ಡಾ.ಬಿ.ಆರ್ ಅಂಬೇಡ್ಕರ್ ಕೋಚಿಂಗ್ ಸೆಂಟರ್ ನ ನಾಗರಾಜು ಸೇರಿದಂತೆ ವಿವಿಧ ಮಾದಿಗ ಸಮುದಾಯ ಸಂಬಂಧಿತ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Share this article