ಶಿಗ್ಗಾಂವಿ: ತಾಲೂಕಿನಲ್ಲಿ ಮಾದಕ ಪದಾರ್ಥ, ನಿಷೇಧಿತ ಡ್ರಗ್ಸ್ ಮಾಫಿಯಾದ ಸದ್ದು ಕೇಳಿ ಬರುತ್ತಿದೆ. ಪೊಲೀಸ್ ಅಧಿಕಾರಿಗಳು ಪೆಡ್ಲರುಗಳನ್ನು ನಿರ್ದಾಕ್ಷಿಣ್ಯವಾಗಿ ಹತೋಟಿಗೆ ತರಲು ಕ್ರಮ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಮತ್ತು ಅಮೃತ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಕೊಲೆ ಸುಲಿಗೆಗಳಂತಹ ಅಹಿತಕರ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಶಿಗ್ಗಾಂವಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಕೊಲೆ ಘಟನೆ ಗಾಂಜಾ ವ್ಯಸನಿಗಳಿಂದ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಯವರು ಪೊಲೀಸ್ ಅಧಿಕಾರಿಗಳಿಗೆ ಕಠಿಣ ಕಾನೂನು ವ್ಯವಸ್ಥೆ ಜಾರಿಗೊಳಿಸುವಂತೆ ಸೂಚಿಸಿದರು.ಶೀಘ್ರದಲ್ಲಿ ರಸ್ತೆಗಳನ್ನು ದುರಸ್ತಿಪಡಿಸಿ. ನವೆಂಬರ್ ತಿಂಗಳು ಮುಗಿಯುವುದರ ಒಳಗಾಗಿ ಶಿಗ್ಗಾಂವಿ ಮತ್ತು ಸವಣೂರು ತಾಲೂಕಿನಲ್ಲಿ ಮನೆ ಮನೆಗೆ ನೀರು ಒದಗಿಸುವ ಅಮೃತ ಯೋಜನೆ ಪೂರ್ಣಗೊಳ್ಳಬೇಕು ಎಂದರು.
ರೈತನ ಬೆಳೆಗಳಿಗೆ ಯೂರಿಯಾ ಅವಶ್ಯಕತೆ ಹೆಚ್ಚಿರುವುದರಿಂದ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರಿತಪಿಸುವಂತಾಗಿದೆ. ಅಧಿಕಾರಿಗಳು ಯೂರಿಯಾ ರೈತರಿಗೆ ಅವಶ್ಯವಿರುವ ಗೊಬ್ಬರದ ಬೇಡಿಕೆಯ ತಕ್ಕಂತೆ ಪೂರೈಸಬೇಕು. ರೈತರ ಕೃಷಿಗೆ ಸಂಬಂಧಿಸಿದಂತೆ ಗೊಬ್ಬರ ಬೀಜ ಪೂರೈಕೆಯಲ್ಲಿ ರಾಜಕೀಯ ಮಾಡುವುದು ಬೇಡ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನಪ್ರತಿನಿಧಿಗಳು ರೈತನ ಅಗತ್ಯತೆಗೆ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ್ ದಾನಮ್ಮನವರ, ಸಿಇಒ ರುಚಿ ಬಿಂದಾಲ್, ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ, ತಾಪಂ ಇಒ ಮಂಜುನಾಥ ಸಾಳೊಂಕಿ ಇತರರು ಇದ್ದರು.