ಸುದೀರ್ಘ ಸೇವೆಯಲ್ಲಿ ಜನರ ಪ್ರೀತಿ ಗಳಿಸಿದ ಪುಟ್ಟಮ್ಮ

KannadaprabhaNewsNetwork | Published : Aug 17, 2024 12:46 AM

ಸಾರಾಂಶ

ಜನರ ಅಭಿಮಾನ ಗಳಿಸುವುದು ಸುಲಭದ ಮಾತಲ್ಲ. ಶಿಕ್ಷಕಿ ಪುಟ್ಟಮ್ಮ ಕಳೆದ 40 ವರ್ಷದ ಸುದೀರ್ಘ ಸೇವೆಯಲ್ಲಿ ಜನರ ಪ್ರೀತಿ ಗಳಿಸಿದ್ದಾರೆ. ಅವರ ಪರಿಶ್ರಮ, ಪ್ರಾಮಾಣಿಕ ಸೇವೆಗೆ ಪ್ರತಿಫಲ ಸಿಕ್ಕಿದೆ ಎಂದು ಪೊಲೀಸ್ ಠಾಣಾಧಿಕಾರಿ ಬಿ.ಎಸ್.ನಿರಂಜನಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಜನರ ಅಭಿಮಾನ ಗಳಿಸುವುದು ಸುಲಭದ ಮಾತಲ್ಲ. ಶಿಕ್ಷಕಿ ಪುಟ್ಟಮ್ಮ ಕಳೆದ 40 ವರ್ಷದ ಸುದೀರ್ಘ ಸೇವೆಯಲ್ಲಿ ಜನರ ಪ್ರೀತಿ ಗಳಿಸಿದ್ದಾರೆ. ಅವರ ಪರಿಶ್ರಮ, ಪ್ರಾಮಾಣಿಕ ಸೇವೆಗೆ ಪ್ರತಿಫಲ ಸಿಕ್ಕಿದೆ ಎಂದು ಪೊಲೀಸ್ ಠಾಣಾಧಿಕಾರಿ ಬಿ.ಎಸ್.ನಿರಂಜನಗೌಡ ಹೇಳಿದರು.

ತಾಲೂಕಿನ ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಹಾಗೂ ನಿವೃತ್ತಗೊಂಡ ಶಾಲಾ ಮುಖ್ಯ ಶಿಕ್ಷಕಿ ಪುಟ್ಟಮ್ಮ ಅವರ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಾ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಾ ಬಂದಿವೆ ಎಂದರು.

ಅತಿಥಿಯಾಗಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹುದ್ದೆಯಾಗಿದೆ. ವೃತ್ತಿಯ ಪಾವಿತ್ರತೆ ಎತ್ತಿ ಹಿಡಿದು ಸೇವೆಯನ್ನು ಸಲ್ಲಿಸುತ್ತಿರುವ ಎಲ್ಲ ಶಿಕ್ಷಕರೂ ಕೂಡ ಅಭಿನಂದಾರ್ಹರು. ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯು ಹೆಚ್ಚೆಚ್ಚು ಯಶಸ್ವಿ ಕಾರ್ಯಕ್ರಮಗಳನ್ನು ಮಾಡುತ್ತಾ ತಾಲೂಕಿಗೆ ಮಾದರಿ ಸರ್ಕಾರಿ ಶಾಲೆಯಾಗಿದೆ ಎಂದರು.ನಿವೃತ್ತ ಮುಖ್ಯ ಶಿಕ್ಷಕಿ ಪುಟ್ಟಮ್ಮ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ವೃತ್ತಿಯ ಮೊದಲ ದಿನ ಸಂತೋಷದಿಂದ ಕೂಡಿದ್ದರೆ, ನಿವೃತ್ತಿಯ ದಿನ ದುಃಖದಿಂದ ಕೂಡಿರುತ್ತದೆ. ನಾನು ನನ್ನ ಸೇವಾ ಅವಧಿಯ 40 ವರ್ಷ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿದ್ದೇನೆ. ಶೆಟ್ಟಿಕೊಪ್ಪದ ಸರ್ಕಾರಿ ಶಾಲೆಯಲ್ಲಿ ಕಳೆದ 12 ವರ್ಷ ಮುಖ್ಯ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿದ್ದೇನೆ. ಈ ಅವಧಿಯಲ್ಲಿ ಇಲ್ಲಿಯ ಸಂಘ ಸಂಸ್ಥೆಯವರು, ಶಾಲಾಭಿವೃದ್ಧಿ ಸಮಿತಿಯವರು, ಪೋಷಕರು ಉತ್ತಮ ಸಹಕಾರವನ್ನು ನೀಡಿದ್ದಾರೆ ಎಂದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಟ್ಟಮ್ಮ ಅವರು ಇದೇ ಊರಿನವರಾಗಿದ್ದು, ಈ ಊರಿನ ಶಾಲೆಯಲ್ಲಿಯೇ ನಿವೃತ್ತಿಯಾಗಿರುವುದು ಸಂತಸ ತಂದಿದೆ. ಅವರ ತಾಳ್ಮೆ, ಬೋಧನೆಯ ರೀತಿ, ಸಂಘಟನಾ ಶಕ್ತಿ ಇತರ ಶಿಕ್ಷಕರಿಗೆ ಮಾದರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಇದೇ ಸರ್ಕಾರಿ ಶಾಲೆಯಲ್ಲಿ ಓದಿ, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಎಂ.ಬಿ.ಎ ಪದವಿಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು, ಕುವೆಂಪು ವಿಶ್ವ ವಿದ್ಯಾಲಯದಲ್ಲಿ 6ನೇ ರ‍್ಯಾಂಕ್ ಪಡೆದ ಕು.ಮೇಘನಾ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾಮಹೇಶ್, ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ಎ.ಬಿ.ಮಂಜುನಾಥ್, ವಾಣಿ ನರೇಂದ್ರ, ಪೂರ್ಣಿಮಾ, ಲಿಲ್ಲಿಮಾತುಕುಟ್ಟಿ, ಚಂದ್ರಶೇಖರ್, ಅಶ್ವಿನಿ, ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಾಲಭಿವೃದ್ಧಿ ಸಮಿತಿ ಸದಸ್ಯರುಗಳು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Share this article