ರಾಮನಗರ: ಶಿಕ್ಷಕರ ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ ಅಥವಾ ಪಕ್ಷಕ್ಕೆ ಸೀಮಿತವಾಗಿ ಕೆಲಸ ಮಾಡಲು ಆಗುವುದಿಲ್ಲ. ಶಿಕ್ಷಕರೊಂದಿಗೆ ಒಡನಾಟ ಇಟ್ಟುಕೊಂಡು, ಪ್ರತಿ ಹಂತದಲ್ಲೂ ಅವರ ಸಮಸ್ಯೆಗಳ ಪರ ವಿಧಾನ ಪರಿಷತ್ನಲ್ಲಿ ಧ್ವನಿ ಎತ್ತುವ ಕೆಲಸ ಮಾಡಿದ್ದರಿಂದಲೇ ಎಲ್ಲ ಪಕ್ಷಗಳಿಂದಲು ಗೆಲುವು ಸಾಧಿಸಿರುವ ಪುಟ್ಟಣ್ಣ ಪಕ್ಷಾತೀತ ನಾಯಕ ಎನಿಸಿಕೊಂಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಜೆಡಿಎಸ್, ಬಿಜೆಪಿ ಬಳಿಕ ಕಾಂಗ್ರೆಸ್ ಪಕ್ಷದಿಂದಲೂ ಪುಟ್ಟಣ್ಣ 5 ಬಾಕಿ ಗೆಲುವು ಸಾಧಿಸಿದ್ದಾರೆ ಎಂದರೆ ಅದು ಶಿಕ್ಷಕರು ಮತ್ತು ಅವರ ನಡುವಿನ ಉತ್ತಮ ಬಾಂಧವ್ಯ ತೋರಿಸುತ್ತದೆ. ಹೊಸಬರು ನಿಮ್ಮ ಸಮಸ್ಯೆ ಅರಿತುಕೊಳ್ಳುವಷ್ಟರಲ್ಲಿ ಅವಧಿ ಮುಗಿದು, ಶಿಕ್ಷಕರ ಸಮಸ್ಯೆಗಳು ಉಲ್ಬಣಗೊಂಡಿರುತ್ತವೆ. ಶಿಕ್ಷಕರ ಧ್ವನಿಯಾಗಿ ಸರ್ಕಾರದಲ್ಲಿ ಕೆಲಸ ಮಾಡುವ ಚಾಕಚಕ್ಯತೆ ಪುಟ್ಟಣ್ಣ ಅವರಲ್ಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಿದ್ಧರಾಗಿದ್ದಾರೆ. ಎಲ್ಲ ಶಿಕ್ಷಕರ ಸಮಸ್ಯೆ ಬಗೆಹರಿಸುವ ಇಚ್ಚಾಸಕ್ತಿ ಪುಟ್ಟಣ್ಣ ಅವರಲ್ಲಿದೆ. ದೂರದ ಬೆಟ್ಟ ಯಾವಾಗಲು ನುಣ್ಣಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕರಿ ಕೋಟ್ ಹಾಕಿಕೊಂಡು, ದೊಡ್ಡ ನಾಯಕರ ಜೊತೆ ಓಡಾಡುತ್ತಾರೆಂದು ಭಾವಿಸಿದರೆ ತಪ್ಪು. ಕೆಲಸ ಮಾಡುವವರು ಶೋ ತೋರಿಸಲ್ಲ. ಇದನ್ನು ಅರಿತು ಪುಟ್ಟಣ್ಣ ಅವರಿಗೆ ಮೊದಲ ಪ್ರಾಶಸ್ತ್ಯ ಮತ ಚಲಾಯಿಸಿ ಆಯ್ಕೆ ಮಾಡಿಕೊಳ್ಳುವತ್ತ ಪ್ರಬುದ್ದ ಶಿಕ್ಷಕರು ಚಿಂತಿಸಬೇಕು ಎಂದು ಹೇಳಿದರು.6 ನೇ ಬಾರಿ ಆಯ್ಕೆ ಮಾಡಿ ಇತಿಹಾಸ ಸೃಷ್ಟಿಸಿ:
ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು ಪುಟ್ಟಣ್ಣ ಅವರಿಗೆ ಬಿಜೆಪಿ, ಜೆಡಿಎಸ್ ಪಕ್ಷದವರು ಅವರನ್ನು ಇಷ್ಟ ಪಡುತ್ತಾರೆ. ಅಷ್ಟೆ ಅಲ್ಲದೆ ಅವರೆಲ್ಲರ ಬೆಂಬಲವೂ ಸಿಗುತ್ತಿದೆ. ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಪುಟ್ಟಣ್ಣ ಗೆಲುವು ಸಾಧಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗೆಂದು ಮತದಾರ ಶಿಕ್ಷಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಿರ್ಲಕ್ಷ್ಯ ವಹಿಸಬಾರದು ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರದೀಪ್, ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಜ್ಗರ್ ಮಾತನಾಡಿದರು. ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಎನ್ ಆರ್ ವೆಂಕಟೇಶ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಸಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ಮಾಜಿ ಅಧ್ಯಕ್ಷ ಜಯಣ್ಣ, ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕರ ಸ್ಥಾನ ಪವಿತ್ರವಾದದ್ದು. ಆ ಕ್ಷೇತ್ರ ಪ್ರತಿನಿಧಿಸಿರುವ ಪುಟ್ಟಣ್ಣ ಅವರಲ್ಲಿ ಸರಳತೆ, ಸಂಯಮ, ಉತ್ತಮ ಬಾಂಧವ್ಯ ಗುಣಗಳಿದ್ದು, ಜೊತೆಗೆ ಶಿಕ್ಷಕರ ಬಗ್ಗೆ ಹಗಲಿರುಳು ಚಿಂತನೆ ಮಾಡುತ್ತಾರೆ. ಅವರಿಗೆ ಮತ್ತೊಮ್ಮೆ 6ನೇ ಬಾರಿಗೆ ಶಕ್ತಿ ತುಂಬಿ. ಚುನಾಣೆಗಳಲ್ಲಿ ಒಂದೊಂದು ಮತವೂ ಬಹಳ ಮುಖ್ಯ.
ಕೋಟ್............
- ಡಿ.ಕೆ.ಸುರೇಶ್, ಅಧ್ಯಕ್ಷರು, ಬಮೂಲ್
ರಾಮನಗರದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಪ್ರಚಾರ ಸಭೆಯಲ್ಲಿ ಡಿ.ಕೆ.ಸುರೇಶ್ ಮಾತನಾಡಿದರು.