ಐತಿಹಾಸಿಕ ಬಿದ್ದಾಟಂಡ ವಾಡೆ ನಾಡ್ ಮಂದ್‌ನಲ್ಲಿ ಪುತ್ತರಿ ಕೋಲಾಟ

KannadaprabhaNewsNetwork |  
Published : Nov 29, 2026, 03:00 AM IST
ಹುತ್ತರಿ ಹಬ್ಬ ಆಚರಣೆ | Kannada Prabha

ಸಾರಾಂಶ

ಕೊಡಗಿನಲ್ಲಿ ಪುತ್ತರಿ (ಹುತ್ತರಿ) ಹಬ್ಬದ ಸಂಭ್ರಮ ಮುಗಿಲು ಮುಟ್ಟಿದ್ದು, ಸಂಪ್ರದಾಯದಂತೆ ಹಬ್ಬದ ಆಚರಣೆಯು ನಾಡ್ ಮಂದ್‌ಗಳಲ್ಲಿ ನಡೆಯುವ ಕೋಲಾಟದವರೆಗೂ ವಿಸ್ತರಿಸಿದೆ. ಭತ್ತದ ಗದ್ದೆಯಿಂದ ಧಾನ್ಯಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಈ ವಿಶಿಷ್ಟ ಹಬ್ಬದಲ್ಲಿ ಕೊಡಗಿನ ನಿವಾಸಿಗಳ ಜಾನಪದ ಕಲೆಗಳು ಅನಾವರಣಗೊಂಡವು.

ನಾಪೋಕ್ಲು : ಕೊಡಗಿನಲ್ಲಿ ಪುತ್ತರಿ (ಹುತ್ತರಿ) ಹಬ್ಬದ ಸಂಭ್ರಮ ಮುಗಿಲು ಮುಟ್ಟಿದ್ದು, ಸಂಪ್ರದಾಯದಂತೆ ಹಬ್ಬದ ಆಚರಣೆಯು ನಾಡ್ ಮಂದ್‌ಗಳಲ್ಲಿ ನಡೆಯುವ ಕೋಲಾಟದವರೆಗೂ ವಿಸ್ತರಿಸಿದೆ. ಭತ್ತದ ಗದ್ದೆಯಿಂದ ಧಾನ್ಯಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಈ ವಿಶಿಷ್ಟ ಹಬ್ಬದಲ್ಲಿ ಕೊಡಗಿನ ನಿವಾಸಿಗಳ ಜಾನಪದ ಕಲೆಗಳು ಅನಾವರಣಗೊಂಡವು.

ಸಮೀಪದ ಬಿದ್ದಾಟಂಡ ವಾಡೆಯ ಐತಿಹಾಸಿಕ ನೂರಂಬಡ ನಾಡ್ ಮಂದ್‌ನಲ್ಲಿ ಶನಿವಾರ ಪುತ್ತರಿ ಕೋಲಾಟ ಅತ್ಯಂತ ವಿಜೃಂಭಣೆಯಿಂದ ಜರುಗಿತು. ನೂರಂಬಡ ನಾಡಿಗೆ ಸಂಬಂಧಿಸಿದಂತೆ ಬೇತು ಗ್ರಾಮದ ಪ್ರಸಿದ್ಧ ಮಕ್ಕಿ ಶಾಸ್ತಾವು ದೇವಾಲಯದಿಂದ ಚಾಲನೆ ನೀಡಲಾಗುತ್ತದೆ. ಅದರಂತೆ ಊರಿನ ಮುಖ್ಯಸ್ಥರು, ಗ್ರಾಮಸ್ಥರು ದೇವರ ಕೋಲು, ವಸ್ತ್ರ ಹಾಗೂ ಬೆಳ್ಳಿಯ ಕಡತಲೆ (ಖಡ್ಗ)ಯೊಂದಿಗೆ ದೈವಾಧೀನರಾಗಿ ಸಾಂಪ್ರದಾಯಿಕ ಕಾಪಳ ಕಳಿ, ಕೊಂಬು, ಕೊಟ್ಟು ವಾಲಗ ಹಾಗೂ ದುಡಿಕೊಟ್ಟ್ ಪಾಟ್‌ನೊಂದಿಗೆ ಬೇತು ಗ್ರಾಮದ ಕುರುಂಬರಾಟ್ ಎಂಬಲ್ಲಿ ವಿಶ್ರಾಂತಿ ಪಡೆಯುತ್ತಾರೆ. ನಂತರದ ಮೆರವಣಿಗೆಯಲ್ಲಿ ಬಿದ್ದಾಟಂಡ ವಾಡೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಬಿದ್ದಾಟಂಡ ಕುಟುಂಬದ ಹಿರಿಯರು ಸಾಂಪ್ರದಾಯಿಕ ಬಿಳಿ ಕುಪ್ಪಸ ಧರಿಸಿ, ಮಹಾದೇವ (ಕೋಟ) ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಬೇತು ಗ್ರಾಮದ ಮುಖ್ಯಸ್ಥರು, ಗ್ರಾಮಸ್ಥರನ್ನು ಭಕ್ತಿಯಿಂದ ಬರಮಾಡಿಕೊಂಡರು.

ಮೂರು ಗ್ರಾಮಸ್ಥರ ಸಂಗಮ: ಸಂಪ್ರದಾಯದಂತೆ ನಾಪೋಕ್ಲು ಗ್ರಾಮಸ್ಥರು ದುಡಿಕೊಟ್ಟ್ ಪಾಟ್ ಹಾಡುತ್ತಾ ವಾಡೆಗೆ ಆಗಮಿಸಿದರೆ, ಮತ್ತೊಂದೆಡೆ ಮೂಟೇರಿ ಮತ್ತು ಕೊಳಕೇರಿ ಗ್ರಾಮಸ್ಥರು ಮೆರವಣಿಗೆಯಲ್ಲಿ ಬಂದರು. ಅವರನ್ನು ವಾಡೆಯ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಕೋಲಾಟ ನಡೆಸುವ ಮರದ ಕೆಳಗೆ ಕೋಲು, ವಸ್ತ್ರ ಹಾಗೂ ಬೆಳ್ಳಿಯ ಕಡತಲೆ (ಖಡ್ಗ) ವನ್ನು ಇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಾಂಪ್ರದಾಯಿಕ ಹುತ್ತರಿ ಕೋಲಾಟಕ್ಕೆ ಚಾಲನೆ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮೂರು ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ಕೋಲಾಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಎರಡನೇ ದಿನದಂದು ''''''''ಚಿಕ್ಕ ಕೋಲು'''''''' ನಡೆಯಲಿದ್ದು, ಅಂದೂ ಸಹ ಮೂರು ಗ್ರಾಮಸ್ಥರು ಸೇರಿ ಕೋಲಾಟ, ಪರೆಯಕಳಿ, ಕಪ್ಪೆ ಆಟ್ ಮುಂತಾದ ಜಾನಪದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಬಳಿಕ ದೇವರ ಕೋಲನ್ನು ಮಕ್ಕಿ ದೇವಾಲಯಕ್ಕೆ ಒಪ್ಪಿಸುವುದರೊಂದಿಗೆ ಈ ಬಾರಿಯ ಹುತ್ತರಿ ಹಬ್ಬಕ್ಕೆ ತೆರೆ ಬೀಳಲಿದೆ.

ಗಮನ ಸೆಳೆದ ''''''''ಕಾಪಳ ಕಳಿ'''''''': ಹುತ್ತರಿ ಹಬ್ಬದಲ್ಲಿ ''''''''ಕಾಪಳ ಕಳಿ''''''''ಗೆ ವಿಶೇಷ ಮಹತ್ವವಿದೆ. ಬೇತು ಗ್ರಾಮದ ಮಕ್ಕಿ ದೇವಾಲಯಕ್ಕೆ ಒಳಪಟ್ಟ ಕೆಂಬಟ್ಟಿ ಜನಾಂಗದವರು ಮೈಗೆ ಕಪ್ಪು ಬಣ್ಣದ ಮಸಿ ಬಳಿದುಕೊಂಡು, ಕೈಯಲ್ಲಿ ಅಂಗರೇ ಕೋಲು ಹಿಡಿದು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ನೆರೆದಿದ್ದವರ ಗಮನ ಸೆಳೆದರು. ಎರಡು-ಮೂರು ದಿನಗಳ ಕಾಲ ನಡೆಯುವ ಈ ಸಾಂಪ್ರದಾಯಿಕ ವೇಷಭೂಷಣ ಹಬ್ಬಕ್ಕೆ ವಿಶೇಷ ಮೆರುಗು ನೀಡಿತು.ಅಗ್ನಿ, ನೀರು ಮತ್ತು ಪ್ರಕೃತಿಯನ್ನು ಪೂಜಿಸುವ ಹುತ್ತರಿ ಹಬ್ಬದಲ್ಲಿ ಭೂಮಾತೆಗೆ ಹಾಗೂ ಧಾನ್ಯಲಕ್ಷ್ಮಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ. ಈ ಹಬ್ಬಕ್ಕಾಗಿ ಕುಂಬಾರರು ''''''''ಹುತ್ತರಿ ಕುಡಿಕೆ'''''''', ಮರಗೆಲಸದವರು ಕದಿರು ತುಂಬಲು ಬುಟ್ಟಿ ಹಾಗೂ ಬಿದಿರು ನೇಯುವವರು ''''''''ಹುತ್ತರಿ ಕ್ಕುಕ್ಕೆ'''''''' ತಯಾರಿಸಿ ನೀಡುವ ಪದ್ಧತಿ ಇಂದಿಗೂ ಜೀವಂತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕ್ಕರೆ ಕನಿಷ್ಠ ಮಾರಾಟ ಬೆಲೆ ಕೆ.ಜಿ.ಗೆ ₹60ಕ್ಕೆ ಹೆಚ್ಚಿಸಿ
ಸೈನಿಕ ಶಾಲೆ ಪ್ರವೇಶಾತಿಗೆ ಜ.31ರಂದು ಪರೀಕ್ಷೆ