ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಳಸ ಗ್ರಾಮದ ಕೆಇಎಸ್ ನವೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪುಟ್ಟವ್ವ ಬಾರಕೇರ ತಯಾರಿಸಿದ ವೆಜಿಟೇಬಲ್ ಕಟರ್ ಇದೀಗ ಜಪಾನ್ ತಲುಪಿದೆ!
ಕಳೆದ ಸಾಲಿನಲ್ಲಿ (2022)ರಲ್ಲಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ 9ನೇ ಇನ್‌ಸ್ಪಾಯರ್ ಆವಾರ್ಡ್ ಮಾನಕ್‌ದಲ್ಲಿ ಇದಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಲಭಿಸಿತ್ತು. ಇದೀಗ ಅದು ಜಪಾನ್‌ನಲ್ಲಿ ಪ್ರದರ್ಶನಗೊಳ್ಳಲಿದೆ.ಈ ಮಾದರಿಯ ಕುರಿತು ಮಾಹಿತಿ ನೀಡಲು ಸ್ವತಃ ಜಪಾನ್‌ಗೆ ತೆರಳಿದ್ದಾಳೆ ಪುಟ್ಟವ್ವ. ಹಳ್ಳಿಯ ಪ್ರತಿಭೆಯೊಂದು ಇಂದು ಜಪಾನ್‌ಗೆ ತೆರಳಿ ಜಿಲ್ಲೆಯ ಮೆರಗು ಹೆಚ್ಚಿಸಿದೆ.
ವೆಜಿಟೇಬಲ್ ಕಟರ್ಪುಟ್ಟವ್ವ ತಯಾರಿಸಿದ ವೆಜಿಟೇಬಲ್ ಕಟರ್ ಸ್ಟೂಲ್‌ನಲ್ಲಿ ತರಕಾರಿಯನ್ನು ವಿವಿಧ ರೀತಿಯಲ್ಲಿ ಕತ್ತರಿಸಬಹುದು. ಅದೇ ರೀತಿ, ಈಳಿಗೆ ಮಣೆ ರೀತಿಯಲ್ಲಿ ತೆಂಗಿನಕಾಯಿಯನ್ನು ತುರಿಯಬಹುದು. ಇದನ್ನು ಬೇಕಾದಾಗ ಮಾತ್ರ ಉಪಯೋಗಿಸಿ ಮತ್ತೆ ಸುರಕ್ಷಿತವಾಗಿ ಮಡಚಿಡಬಹುದು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದಲ್ಲಿ ಇದರಿಂದ ಯಾವುದೇ ರೀತಿಯ ಅವಘಡ ಸಂಭವಿಸುವುದಿಲ್ಲ. ಹೀಗೆ ಒಂದೇ ಸಾಧನದಿಂದ ಒಂದಕ್ಕಿಂತ ಹೆಚ್ಚು ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲದೇ ಇದರಲ್ಲಿ ಅಡುಗೆ ಮನೆಗೆ ಅವಶ್ಯವಿರುವ ಮಸಾಲೆ ಪದಾರ್ಥಗಳನ್ನೂ ಶೇಖರಿಸಬಹುದು. ಅಡುಗೆ ಮನೆಯಲ್ಲಿ ತಾಯಿ ಮಗುವೂ ಇದರ ಮೇಲೆ ಕುಳಿತು ಕೆಲಸ ಮಾಡಬಹುದಾಗಿದೆ.
ತಾಯಿಯೇ ಪ್ರೇರಣೆತಾಯಿ ಅಡುಗೆ ಮಾಡುವ ವೇಳೆ ಅವರು ಪಡುವ ಕಷ್ಟ ನೋಡಿ ನನಗೆ ಈ ಸಾಧನ ತಯಾರಿಸಬೇಕು ಎಂಬ ಕಲ್ಪನೆ ಮೂಡಿತು. ಆಗ, ಶಿಕ್ಷಕರಾದ ನವೀನ್ ಕೊಣಸಾಲಿ ಅವರ ಮಾರ್ಗದರ್ಶನ ಪಡೆದು ಈ ವೆಜಿಟೇಬಲ್ ಕಟರ್ ಸ್ಟೂಲ್ ತಯಾರಿಸಿದೆ. ನನ್ನ ಈ ಮಾದರಿ ಪ್ರದರ್ಶಿಸಲು ಶಾಲೆಯ, ಶಿಕ್ಷಣ ಇಲಾಖೆಯ ಮೂಲಕ ಉತ್ತಮ ವೇದಿಕೆ ದೊರೆಯಿತು. ಇದರಿಂದಾಗಿ ನಾನು ಇಂದು ನನ್ನ ಈ ಆವಿಷ್ಕಾರವನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಲು ಸಹಕಾರಿಯಾಯಿತು. ನನಗೆ ಬೆಂಬಲ ನೀಡಿದ ಮಾರ್ಗದರ್ಶಿ ಶಿಕ್ಷಕರು ಮತ್ತು ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಪುಟ್ಟವ್ವ ಬಾರಕೇರ ಕನ್ನಡಪ್ರಭಕ್ಕೆ ತಿಳಿಸಿದಳು.
ಸುಕುರಾದಲ್ಲಿ ಎಕ್ಸ್ಪೋಜಪಾನ್ ದೇಶದ ಸಕುರಾದಲ್ಲಿ ನ. 6 ರಿಂದ 10ರ ವರೆಗೆ ನಡೆಯುವ ಎಕ್ಸ್‌ಪೋದಲ್ಲಿ ಪುಟ್ಟವ್ವ ಪಾಲ್ಗೊಳ್ಳುತ್ತಿದ್ದಾಳೆ. ಇಲ್ಲಿ ತಾನು ತಯಾರಿಸಿದ ಸಾಧನದ ಕುರಿತು ವಿಜ್ಞಾನಿಗಳಿಗೆ, ತಂತ್ರಜ್ಞರಿಗೆ ಮಾಹಿತಿ ನೀಡಲಿದ್ದಾಳೆ.
ಪುಟ್ಟವ್ವ 6ನೇ ತರಗತಿಯಲ್ಲಿದ್ದ ವೇಳೆಯೇ ಈ ವೆಜಿಟೇಬಲ್ ಕಟರ್ ಸ್ಟೂಲ್ ತಯಾರಿಸುವ ಕಲ್ಪನೆ ಹೇಳಿದಳು. ಆಗ ಅವಳಿಗೆ ಮಾರ್ಗದರ್ಶನ ನೀಡಿದ್ದೇನೆ. ಅವಳ ಸಾಧನೆ ಇಂದು ರಾಷ್ಟ್ರಮಟ್ಟದ ಪ್ರಶಸ್ತಿಗೆ ಕಾರಣವಾಗಿದೆ ಎನ್ನುತ್ತಾರೆ ಮಾರ್ಗದರ್ಶಿ ಶಿಕ್ಷಕ ನವೀನ ಕೊಣಸಾಲಿ.ಪುಟ್ಟವ್ವ ಬಾರಕೇರ ನಮ್ಮ ತಾಲೂಕಿನ ಪ್ರತಿಭೆ. ಅವಳ ಸಾಧನೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಸಾಧನೆಗೆ ಕಾರಣರಾದ ಬಾಲಕಿಯ ಪೋಷಕರು, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವೆ ಎನ್ನುತ್ತಾರೆ ಕುಂದಗೋಳದ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ಕುಂದರಗಿ.