ಬೆಳ್ತಂಗಡಿ: ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಕಿರಿಯ ಸ್ವಾಮೀಜಿ ಸುಶ್ರೀಂದ್ರತೀರ್ಥ ಸ್ವಾಮೀಜಿ ಗುರುವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಆಶೀರ್ವಚನ ನೀಡಿದ ಪುತ್ತಿಗೆ ಶ್ರೀಗಳು, ಹೆಗ್ಗಡೆ ಅವರ ದಕ್ಷ ನೇತೃತ್ವದಲ್ಲಿ ಧರ್ಮಸ್ಥಳದ ಭವ್ಯ ಪರಂಪರೆ ಮತ್ತು ಸಂಪ್ರದಾಯವನ್ನು ಉಳಿಸಿಕೊಂಡು ಇಲ್ಲಿನ ಆಚಾರ-ವಿಚಾರಗಳು, ನಂಬಿಕೆ- ನಡವಳಿಕೆಗಳು, ಶಿಸ್ತು, ಸ್ವಚ್ಛತೆ ಮತ್ತು ಅನುಪಮ ಸೇವಾ ಕಾರ್ಯಗಳಿಂದಾಗಿ ಇಂದು ಧರ್ಮಸ್ಥಳ ಎಲ್ಲ ತೀರ್ಥಕ್ಷೇತ್ರಗಳಿಗೂ ಮಾದರಿಕ್ಷೇತ್ರವಾಗಿ ಬೆಳೆದಿದೆ. ವಿಶ್ವದೆಲ್ಲೆಡೆ ಬೆಳಗುತ್ತಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು. ಹೆಗ್ಗಡೆಯವರ ಸೇವೆ- ಸಾಧನೆ ಹಾಗೂ ವಿಶಿಷ್ಟ ಕಾರ್ಯವೈಖರಿ ಉಡುಪಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ತಮಗೂ ಇದು ಸ್ಫೂರ್ತಿದಾಯಕವಾಗಿ ವಿಶೇಷ ಪ್ರೇರಣೆ ನೀಡುತ್ತದೆ ಎಂದರು.
ಡಿ. ಹರ್ಷೇಂದ್ರಕುಮಾರ್ ಅವರ ಕಾರ್ಯದಕ್ಷತೆ ಹಾಗೂ ಸೇವಾವೈಖರಿಯನ್ನು ಸ್ವಾಮೀಜಿ ಶ್ಲಾಘಿಸಿ ಅಭಿನಂದಿಸಿದರು.ಸ್ವಾಮೀಜಿಯವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ,. ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರಕುಮಾರ್ ಅವರಿಗೆ ಫಲಮಂತ್ರಾಕ್ಷತೆ ನೀಡಿ ಗೌರವಿಸಿ ಆಶೀರ್ವದಿಸಿದರು.