ಕನ್ನಡಪ್ರಭ ವಾರ್ತೆ ಮಂಗಳೂರು
ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಅಧಿಕೃತ ಸೇರ್ಪಡೆ ಬಳಿಕ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರದಲ್ಲಿದ್ದ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಸಮನ್ವಯತೆ ಕಾಯ್ದುಕೊಳ್ಳಲು ಜತೆಯಾಗಿ ಬೂತ್ ಸಮಿತಿಗಳನ್ನು ರಚಿಸಿ ಮುನ್ನಡೆಯುತ್ತಿದೆ.ಪುತ್ತೂರಿನಲ್ಲಿ ಇತ್ತೀಚೆಗೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆಯಲ್ಲಿ ಸ್ಥಳೀಯ ಪಕ್ಷದ ಮುಖಂಡರ ಉಪಸ್ಥಿತಿಯಲ್ಲಿ ನಡೆದ ಚುನಾವಣಾ ನಿರ್ವಹಣಾ ತಂಡದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆ ಪುತ್ತೂರಿನ ಮಂಡಲ, ನಗರ ಪದಾಧಿಕಾರಿಗಳು, ಮಾಜಿ ಶಾಸಕರು ಸೇರಿದಂತೆ ಎಲ್ಲ ಮುಖಂಡರು ಭಾಗವಹಿಸಿದ್ದರು. ಪುತ್ತಿಲ ಪರಿವಾರ ವಿಸರ್ಜನೆಯಾದರೂ ಅದರ ಕಾರ್ಯಕರ್ತರು ಪ್ರತಿ ಬೂತ್‌ಗಳಲ್ಲಿ ಇದ್ದಾರೆ. ಹೀಗಾಗಿ ಪ್ರತಿ ಬೂತ್‌ಗಳಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿ ಜತೆಯಾಗಿಯೇ ಬಿಜೆಪಿ ಅಭ್ಯರ್ಥಿ ಗೆಲವಿಗೆ ಓಡಾಟ ನಡೆಸಲಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಎಲ್ಲ ಬೂತ್‌ಗಳಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಿದ್ದರು. ಇದರ ಪರಿಣಾಮ ಪಕ್ಷೇತರನಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಗೆಲುವಿನ ಸನಿಹ ತಲುಪಿದ್ದರು. ಇದನ್ನೇ ಮಾನದಂಡವಾಗಿ ಇರಿಸಿಕೊಂಡು ಲೋಕಸಭಾ ಚುನಾವಣೆಗೆ ಪುತ್ತಿಲ ಪರಿವಾರದಲ್ಲಿದ್ದವರನ್ನು ಹಾಗೂ ಮೂಲ ಬಿಜೆಪಿ ಕಾರ್ಯಕರ್ತರನ್ನು ವಿಶ್ವಸಕ್ಕೆ ತೆಗೆದುಕೊಂಡು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ವೇಳೆ ಇಬ್ಬರೂ ಜತೆಯಾಗಿಯೇ ಮನೆ ಮನೆ ಭೇಟಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಎಲ್ಲವೂ ಸರಿಹೋಗುವ ವಿಶ್ವಾಸವನ್ನು ನಾಯಕರು ಹೊಂದಿದ್ದಾರೆ.
ಜಂಟಿ ಸಂಚಾರ:ಜಿಲ್ಲೆ ಹಾಗೂ ರಾಜ್ಯ ನಾಯಕರ ಸಂಧಾನ ಮಾತುಕತೆ ಫಲವಾಗಿ ಅರುಣ್ ಕುಮಾರ್ ಪುತ್ತಿಲ ಕಳೆದ ವಾರ ಬಿಜೆಪಿ ಸೇರ್ಪಡೆಯಾಗಿದ್ದರು. ಆ ಬಳಿಕ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳು ಜತೆಯಾಗಿಯೇ ಸಂಪರ್ಕ ಅಭಿಯಾನ ಕೈಗೊಳ್ಳುತ್ತಿದ್ದಾರೆ. ಗುರುವಾರ ಪುತ್ತೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರವಾಸ ವೇಳೆ ಜೋಡೆತ್ತುಗಳಂತೆ ಅರುಣ್ ಕುಮಾರ್ ಪುತ್ತಿಲ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಸುತ್ತಿದ್ದಾರೆ. ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬಳಿಕವೂ ಇದು ಹಾಗೆಯೇ ಮುಂದುವರಿಯಲಿದೆ ಎನ್ನುವುದು ನಾಯಕರ ವಿಶ್ವಾಸ.ಅರುಣ್ ಕುಮಾರ್ ಪುತ್ತಿಲ ಹೊರತುಪಡಿಸಿ ವಿಲೀನಗೊಂಡ ಪುತ್ತಿಲ ಪರಿವಾರದ ಪ್ರಮುಖರಿಗೆ ಮಂಡಲ ಚುನಾವಣಾ ಜವಾಬ್ದಾರಿ ನೀಡಲಾಗಿದೆ. ಆದರೆ ಅರುಣ್ ಕುಮಾರ್ ಪುತ್ತಿಲಗೆ ಜಿಲ್ಲಾ ಚುನಾವಣಾ ಜವಾಬ್ದಾರಿ ನೀಡುವ ನಿರೀಕ್ಷೆ ಇದ್ದು, ಅದನ್ನು ಪಕ್ಷದ ರಾಜ್ಯ ನಾಯಕರು ಘೋಷಿಸಲಿದ್ದಾರೆ.