ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಮೂಡ್ಲಕಟ್ಟೆಯ ಐ.ಎಂ.ಜೆ. ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಹಿತ್ಯ ಸಂಘ, ಓದುಗರ ಸಂಘ ಮತ್ತು ಲಲಿತ ಕಲಾಸಂಘಗಳ ಆಶ್ರಯದಲ್ಲಿ ‘ವಿಶ್ವಗುಬ್ಬಚ್ಚಿ ದಿನ’ವನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಕುಂದಪ್ರಭ ಟ್ರಸ್ಟ್ ಅಧ್ಯಕ್ಷ ಯು. ಸುರೇಂದ್ರ ಶೆಣೈ ಅವರನ್ನು ಪತ್ರಿಕೋದ್ಯಮದಲ್ಲಿ 40 ವರ್ಷಗಳ ನಿರಂತರ ಸೇವೆ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪ್ರಕೃತಿ ಬಗೆಗಿನ ಕಾಳಜಿಯನ್ನು ಗುರುತಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶೆಣೈ, ವಿಶ್ವಪ್ರಿಯವಾದ ಪುಟ್ಟ ಹಕ್ಕಿ ಗುಬ್ಬಚ್ಚಿ, ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಅದರ ಜೀವನ ಕ್ರಮ ಮತ್ತು ಮನುಷ್ಯನೊಂದಿಗೆ ಅದರ ಒಡನಾಟ ಇತ್ತೀಚೆಗೆ ಶೇ.80ರಷ್ಟು ಕಡಿಮೆಯಾಗಿದೆ. ಕೃಷಿ ಭೂಮಿಯಲ್ಲಿ ಕೀಟಗಳನ್ನು ನಾಶ ಮಾಡಿ ಬೆಳೆಗಳನ್ನು ರಕ್ಷಿಸುವ ಈ ಹಕ್ಕಿಯನ್ನು ಆಧುನಿಕತೆ ಮತ್ತು ತಂತ್ರಜ್ಞಾನಗಳಿಂದ ನಾವುಗಳೇ ಅವುಗಳ ನಾಶಕ್ಕೆ ಕಾರಣಕರ್ತರಾಗಿದ್ದೇವೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಮನೆಗಳಲ್ಲಿ, ತೋಟಗಳಲ್ಲಿ ಚಿಕ್ಕಚಿಕ್ಕ ಗೂಡುಗಳನ್ನು ನಿರ್ಮಿಸಿ ಅವುಗಳಿಗೆ ರಕ್ಷಣೆಯನ್ನು ಒದಗಿಸುವ ಪ್ರಯತ್ನವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭ ನಡೆಸಲಾದ ಪ್ರಬಂಧ ಮತ್ತು ಓದುವಿಕೆ ಸ್ಪರ್ಧೆಯಲ್ಲಿ ಪ್ರಥಮ ಬಿಸಿಎ ವಿದ್ಯಾರ್ಥಿನಿಯರಾದ ಸನ್ನಿಧಿ ಪಿ.ವೈ. ಮತ್ತು ರಶಿತ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಿಬಿಎ ವಿದ್ಯಾರ್ಥಿ ಉಲ್ಲಾಸ್ ಬಹುಮಾನ ಪಡೆದುಕೊಂಡರು.
ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಪ್ರೊ. ಜಯಶೀಲ್ ಕುಮಾರ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸಾಹಿತ್ಯ ಸಂಘದ ಸಂಯೋಜಕಿ ಪ್ರೊ. ಸುಮನ ನಿರೂಪಿಸಿದರು. ಬಿಸಿಎ ವಿದ್ಯಾರ್ಥಿನಿ ಚೇತನ ಪ್ರಾರ್ಥಿಸಿದರು. ಓದುಗರ ಸಂಘದ ಸಂಯೋಜಕಿ ಪ್ರೊ. ಪಾವನ ಸ್ವಾಗತಿಸಿದರು. ಲಲಿತ ಕಲಾ ಸಂಘದ ಸಂಯೋಜಕಿ ಪ್ರೊ. ಅರ್ಚನಾ ಉಪಾಧ್ಯಾಯ ಗಣ್ಯರನ್ನು ಪರಿಚಯಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥೆ ಪ್ರೊ. ಸ್ವರ್ಣರಾಣಿ ವಂದಿಸಿದರು.