ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಸಂಸದ ಸಂಗಣ್ಣ ಕರಡಿ ಅವರ ಮನವೊಲಿಸುವ ಕಸರತ್ತು ಮುಂದುವರಿದಿದೆ. ಶಾಸಕ ಅರವಿಂದ ಬೆಲ್ಲದ ಅವರು ಶುಕ್ರವಾರ ಸಂಗಣ್ಣ ಕರಡಿ ಅವರ ನಿವಾಸದಲ್ಲಿ ಗಂಟೆಗಟ್ಟಲೇ ಮಾತುಕತೆ ನಡೆಸಿದರು.
ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಮಾತನಾಡಲು ಬಂದಿದ್ದೇನೆ, ಅವರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ, ಅವರಿಗೆ ಸೂಕ್ತ ಸ್ಥಾನಮಾನ, ಗೌರವ ನೀಡಲಾಗುವುದು ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಪಕ್ಷದ ವರಿಷ್ಠರೊಂದಿಗೆ ಮಾತುಕತೆಯಾದ ಮೇಲೆಯೇ ನಾನು ಸೂಕ್ತ ನಿರ್ಧಾರ ಪ್ರಕಟಿಸುತ್ತೇನೆ. ಚುನಾವಣೆ ಸಮಿತಿಯ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಅವರಿಂದ ಸಿಕ್ಕ ಉತ್ತರ ಆಧಾರದ ಮೇಲೆ ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.