ಶಾಸಕ ಅಶೋಕ್ ರೈ ನೇತೃತ್ವ । ಬಹುಪಯೋಗಿ ವಸ್ತು ವಿತರಣೆ । ಸಿಎಂ ಉದ್ಘಾಟನೆ
ಈ ಬಾರಿ ವಸ್ತ್ರದ ಬದಲಿಗೆ ಸ್ಟೀಲ್‌ತಟ್ಟೆ, ಪಿಂಗಾಣಿ, ಗ್ಲಾಸ್, ಬೌಲ್ ಹಾಗೂ ಟವೆಲ್ ನೀಡಲಾಗುವುದು. ಅಲ್ಲದೆ ದೋಸೆ ಹಬ್ಬ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ೧ ಲಕ್ಷ ಮಂದಿ ಭಾಗವಹಿಸಲಿದ್ದಾರೆ ಎಂದು ಶಾಸಕ ಆಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೩ನೇ ವರ್ಷದ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ.ಖಾದರ್ ಸಹಿತ ಹಲವು ಸಚಿವರು ಭಾಗಿಯಾಗಲಿದ್ದಾರೆ ಎಂದರು.
ದೀಪಾವಳಿಯ ಪ್ರಯುಕ್ತ ಈ ಹಿಂದೆ ಸಾಂಪ್ರದಾಯಿಕವಾಗಿ ಸೀರೆ ಹಾಗೂ ಬೆಡ್ ಶೀಟ್‌ನೀಡಲಾಗುತ್ತಿತ್ತು. ಈ ಬಾರಿ ಸೀರೆ -ಬೆಡ್ ಶೀಟ್ ಬದಲಿಗೆ ಮನೆಗೆ ಬಹು ಉಪಯೋಗಿಯಾಗುವ ವಸ್ತುಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷ ೮೫೬೫೦ ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿತ್ತು. ಈ ಬಾರಿ ೧ ಒಂದು ಲಕ್ಷ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.೨೦ರಂದು ಬೆಳಗ್ಗೆ ೯.೩೦ಕ್ಕೆ ಆರಂಭವಾಗಲಿದ್ದು, ಸಂಜೆ ೫ ಗಂಟೆ ತನಕವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಪಕ್ಷಾತೀತ ಕಾರ್ಯಕ್ರಮವಾಗಿದೆ. ಇದರಲ್ಲಿ ಜಾತಿ, ಮತ, ಧರ್ಮವಿಲ್ಲದೆ ಎಲ್ಲರೂ ಭಾಗವಹಿಸುವಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಟ್ರಸ್ಟ್ ವತಿಯಿಂದ ಪ್ರತಿ ಗ್ರಾಮಗಳಿಗೆ ತೆರಳಿ ಮಾಹಿತಿ ನೀಡಲಾಗುತ್ತಿದೆ ಎಂದರು.ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಮಹಾಲಿಂಗೇಶ್ವರ ದೇವಳದ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಅಲ್ಲಿಂದ ಆಟೊರಿಕ್ಷಾಗಳು ಪ್ರಯಾಣಿಕರನ್ನು ಕಾರ್ಯಕ್ರಮ ನಡೆಯುವಲ್ಲಿಗೆ ಉಚಿತವಾಗಿ ಕರೆತರಲಿದ್ದಾರೆ. ಸುಮಾರು ೧ ಸಾವಿರ ಸ್ವಯಂಸೇವಕರು ಸುವ್ಯವಸ್ಥೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಉಚಿತ ದೋಸೆಮೇಳ:ದೀಪಾವಳಿಯಲ್ಲಿ ಉದ್ದಿನ ದೋಸೆ ಮೇಳ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಸುಮಾರು ೫೦ ಮಂದಿ ಸ್ಥಳದಲ್ಲಿಯೇ ದೋಸೆ ತಯಾರಿಸಿ ನೀಡಲಿದ್ದಾರೆ. ಸುಮಾರು ೮೦ ಸಾವಿರ ದೋಸೆಗಳು ತಯಾರಾಗಲಿವೆ. ಸಂಜೆ ೩ ಗಂಟೆ ನಂತರ ಈ ದೋಸೆಮೇಳ ನಡೆಯಲಿದೆ. ೧ ಲಕ್ಷ ಮಂದಿಗೆ ಅನ್ನದಾನ ನಡೆಯಲಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಗೂಡುದೀಪ ಸ್ಪರ್ಧೆ ನಡೆಯಲಿದೆ. ಸೀನಿಯರ್ ಹಾಗೂ ಜೂನಿಯರ್ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಸೀನಿಯರ್ ವಿಭಾಗಕ್ಕೆ ಪ್ರಥಮ ಬಹುಮಾನ ರು. ೭೫೦೦, ಜೂನಿಯರ್ ವಿಭಾಗದಲ್ಲಿ ಪ್ರಥಮಸ್ಥಾನಕ್ಕೆ ರು.೫೦೦೦ ನೀಡಲಾಗುವುದು. ಉಳಿದಂತೆ ದ್ವಿತೀಯಸ್ಥಾನಿಗಳಿಗೆ ೨೫೦೦ ಬಹುಮಾನ ನೀಡಲಾಗುವುದು ಎಂದರು. ಬಡ ಸೇವಾಸಕ್ತರಿಗೆ ಸನ್ಮಾನ
ಸಂಕಷ್ಟದಲ್ಲಿರುವ ತಾಯಿಯ ಸೇವೆ ಮಾಡಿದವರಿಗೆ, ಹಾಲು ಮಾರಾಟ ಮಾಡಿ ಮನೆ ನಡೆಸುವವರಿಗೆ, ಬೀಡಿಕಟ್ಟಿ ಜೀವನ ಸಾಗಿಸುವಂತಹ ಬಡವರಿಗೆ ಸನ್ಮಾನ ಮಾಡಲಾಗುವುದು. ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ ೨೦ ಮಂದಿಗೆ ಈ ಸನ್ಮಾನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ರೈ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಸ್ಯರಾದ ಜಯಪ್ರಕಾಶ್ ಬದಿನಾರ್ ಮತ್ತು ನಿಹಾಲ್ ರೈ ಉಪಸ್ಥಿತರಿದ್ದರು.