ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಪ್ರಸ್ತುತಿಯಲ್ಲಿ ನೃತ್ಯಗುರು ಶಾಲಿನಿ ಆತ್ಮಭೂಷಣ್ ಶಿಷ್ಯೆ ಭಾರತಿ ಎಂ. ಅವರ ಭರತನಾಟ್ಯ ರಂಗಪ್ರವೇಶ ೭ ರಂದು ಪುತ್ತೂರಿನ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯ ತೆರೆದ ರಂಗಸ್ಥಳದಲ್ಲಿ ಮೊದಲ ಬಾರಿಗೆ ನಡೆಯಲಿದೆ.
ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ರಘು ಸಿಂಹ ಎ.ಎನ್. ಬೆಂಗಳೂರು ಹಾಗೂ ವೀಣೆಯಲ್ಲಿ ವಿದ್ವಾನ್ ವಿ.ಸುಂದರ ರಾಜನ್ ತಿರುವನಂತಪುರ ಸಾಥ್ ನೀಡಲಿದ್ದಾರೆ.
ಭಾರತಿ ಎಂ. ಪರಿಚಯ: ಕಡಬ ತಾಲೂಕು ಎಂ. ಮಾಧವ ಭಟ್ ಮತ್ತು ಗಾಯತ್ರಿ ದಂಪತಿ ಪುತ್ರಿಯಾದ ಭಾರತಿ ಎಂ.ಕಲಿಕೆ, ಶಿಸ್ತು ಮತ್ತು ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಬೆಳೆದವರು. ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರ್ಣಗೊಳಿಸಿದ ಇವರು ಶೈಕ್ಷಣಿಕ ಅಧ್ಯಯನದ ಜೊತೆಗೆ ಶಾಸ್ತ್ರೀಯ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ೧೦ನೇ ವಯಸ್ಸಿನಲ್ಲಿ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಕೆ ಆರಂಭಿಸಿದರು. ಇತ್ತೀಚೆಗೆ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ನೃತ್ಯಾಭ್ಯಾಸದ ಜೊತೆಗೆ ಗುರು ವಿದ್ವಾನ್ ಶ್ರೀಕಾಂತ್ ಕುದುಮಾರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಧ್ಯಯನ ಮಾಡುತ್ತಿರುವ ಭಾರತಿ, ಸಂಗೀತದ ಜೂನಿಯರ್ ಪರೀಕ್ಷೆಯನ್ನು ಪೂರೈಸಿದ್ದಾರೆ. ಭಾರತಿ ಅವರು ೬೦ಕ್ಕೂ ಅಧಿಕ ವೇದಿಕೆಗಳಲ್ಲಿ ಏಕವ್ಯಕ್ತಿ ಸಹಿತ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.