ಪುತ್ತೂರು: ಶಾಲಾ ಶೈಕ್ಷಣಿಕ ವರ್ಷ ಪುನರಾರಂಭಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ ‘ಸರ್ಕಾರಿ ಶಾಲೆಗೆ ಸೇರಿಸಿ’ ಎಂಬ ಅಭಿಯಾನ ಭರದಿಂದ ನಡೆಯುತ್ತಿದೆ. ಶಾಲೆಯ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವೊಲಿಕೆ ಮಾಡುತ್ತಿದ್ದಾರೆ. ಜೂ. ೧ರಂದು ಅಬ್ಬರದ ಶಾಲಾ ಪ್ರಾರಂಭೋತ್ಸವವೂ ನಡೆಯಲಿದೆ. ಆದರೆ ಅವಿಭಜಿತ ಪುತ್ತೂರು ತಾಲೂಕುಗಳಲ್ಲಿ ಶಿಕ್ಷಕರ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಇದು ಇಲಾಖೆ ಮತ್ತು ಶಿಕ್ಷಕರು ನಡೆಸುತ್ತಿರುವ ಅಭಿಯಾನಕ್ಕೆ ತೊಡಕಾಗಿ ಪರಿಣಮಿಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಮಂಜೂರಾದ ಒಟ್ಟು ೨೩ ಹುದ್ದೆಗಳಲ್ಲಿ ೧೫ ಹುದ್ದೆಗಳು ಭರ್ತಿಯಾಗಿ ೮ ಹುದ್ದೆಗಳು ಖಾಲಿಯಾಗಿವೆ. ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿಯೂ ಮಂಜೂರಾದ ೩೦ ಹುದ್ದೆಗಳಲ್ಲಿ ಕೇವಲ ೧೩ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು ೧೭ ಹುದ್ದೆಗಳು ಖಾಲಿಯಾಗಿವೆ.
೩೮೮ ಶಿಕ್ಷಕರ ಹುದ್ದೆ ಖಾಲಿ:ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿರುವ ೧೭೮ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಒಟ್ಟು ೯೦೩ ಶಿಕ್ಷಕರ ಹುದ್ದೆ ಮಂಜೂರಾಗಿದ್ದರೂ ಕೇವಲ ೫೬೩ ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ೩೪೦ ಶಿಕ್ಷಕ ಹುದ್ದೆಗಳು ಖಾಲಿ ಇದೆ. ೨೩ ಸರಕಾರಿ ಪ್ರೌಢಶಾಲೆಗಳಿಗೆ ೨೨೧ ಶಿಕ್ಷಕರ ಹುದ್ದೆ ಮಂಜೂರಾಗಿದೆ. ಇದರಲ್ಲಿ ೧೭೩ ಮಂದಿ ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ೪೮ ಶಿಕ್ಷಕ ಹುದ್ದೆಗಳು ಖಾಲಿಯಾಗಿವೆ.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಪುತ್ತೂರು ಮತ್ತು ಕಡಬ ತಾಲೂಕಿನ ೨೨ ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರು ಇಲ್ಲ. ಪುತ್ತೂರು ತಾಲೂಕಿನ ನೂಜಿಬೈಲು, ಬೆದ್ರೋಡಿ, ನನ್ಯ, ಪೆರ್ನಾಜೆ, ಎಟ್ಯಡ್ಕ, ಬೆಟ್ಟಂಪಾಡಿ, ಚಿಕ್ಕಮುಡ್ನೂರು, ಕೊಂರ್ಬಡ್ಕ, ಮಿತ್ತಡ್ಕ, ಕಡಬ ತಾಲೂಕಿನ ಕೊಂಡಾಡಿಕೊಪ್ಪ, ಬಲ್ಯಪಟ್ಟೆ, ಕೊಪ್ಪ, ಇಡ್ಯಡ್ಕ, ಅಂಕತ್ತಡ್ಕ, ಅಡೆಕ್ಕಲ್ಲು, ಕುಮಾರಮಂಗಲ, ಕಾರ್ಕಳ, ಕಳಾರ, ಕೋಡಿಂಬಾಳ, ಅಡೆಂಜ, ಹೊಸ್ಮಠ ಹಾಗೂ ಚೆನ್ನಾವರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರು ಇಲ್ಲ. ಕಳೆದ ಬಾರಿ ೨೦ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ ಇದ್ದುದು ಈ ಬಾರಿ ೨೨ಕ್ಕೆ ಏರಿಕೆಯಾಗಿದೆ.
ಇನ್ನು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಉಭಯ ತಾಲೂಕುಗಳಲ್ಲಿರುವ ೧೧ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ೧೨೪ ಸರಕಾರಿ ನೇಮಕಾತಿಯ ಶಿಕ್ಷಕರಿಗೆ ಅವಕಾಶ ಇದೆ. ಆದರೆ ಪ್ರಸ್ತುತ ಕೇವಲ ೧೯ ಮಂದಿ ಶಿಕ್ಷಕರು ಮಾತ್ರ ಕರ್ತವ್ಯದಲ್ಲಿದ್ದು ೧೦೫ ಹುದ್ದೆಗಳು ಖಾಲಿಯಾಗಿವೆ. ೨೧ ಅನುದಾನಿತ ಪ್ರೌಢಶಾಲೆಗಳಿಗೆ ಒಟ್ಟು ೨೬೯ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು ೯೭ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೧೭೨ ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಶಿಕ್ಷಕರ ನೇಮಕಾತಿ ಮಾಡಿಕೊಂಡು ಪ್ರಸ್ತಾವನೆ ಕಳಿಸಿದರೆ ಈ ನೇಮಕಾತಿ ಅಧಿಕೃತಗೊಳ್ಳುತ್ತದೆ. ಆದರೆ ೨೦೨೦ರಿಂದ ನಿವೃತ್ತಿಯಾದ ಶಿಕ್ಷಕರ ಹುದ್ದೆಗಳೇ ಈಗಲೂ ಖಾಲಿಯಾಗಿವೆ.
ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ೧ರಿಂದ ೫ನೇ ತರಗತಿಗಳ ಮಕ್ಕಳಿಗೆ ದ್ವಿಭಾಷಾ ಮಾಧ್ಯಮದಲ್ಲಿ ಕಲಿಕೆ ಆರಂಭವಾಗಲಿದೆ. ಸರ್ಕಾರದ ಆಣತಿಯಂತೆ ಪ್ರತಿಯೊಂದು ಪಠ್ಯವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಕರು ಪಾಠ ಮಾಡಬೇಕಿದೆ. ಇದಕ್ಕೆ ಪ್ರತಿಯೊಂದು ಪಠ್ಯವೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಕ್ಕಳಿಗೆ ಸಿಗಲಿದೆ. ಆದರೆ ಉಭಯ ತಾಲೂಕುಗಳಲ್ಲಿರುವ ಶಿಕ್ಷಕರ ಕೊರತೆಯು ಈ ಹೊಸ ಚಿಂತನೆಗೆ ತೊಡಕಾಗಲಿದೆ. ಈ ನಡುವೆ ದ್ವಿಭಾಷಾ ಮಾಧ್ಯಮದ ಹೊಸ ಚಿಂತನೆಯು ಮಕ್ಕಳ ಪಾಲಿಗೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಪ್ರಶ್ನಾರ್ಹವಾಗಿದೆ.
ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಕುರಿತು ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಖಾಲಿ ಇರುವ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕವಾಗುವ ಆಶಯವಿದೆ. ಇಲಾಖೆಯಿಂದ ಆದೇಶ ಬಂದ ಕೂಡಲೇ ಬಿಡುಗಡೆಯಾದ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಅವಶ್ಯವಿರುವ ಶಾಲೆಗಳಿಗೆ ನೇಮಕಾತಿ ನಡೆಯಲಿದೆ. ಅಲ್ಲದೆ ಅತಿಥಿ ಶಿಕ್ಷಕರ ನೇಮಕಾತಿ ನಡೆದ ಬಳಿಕ ಅವರ ಜೊತೆಗೆ ಕಾರ್ಯವ್ಯವಸ್ಥೆಯ ಶಿಕ್ಷಕರೂ ಕರ್ತವ್ಯ ನಿರ್ವಹಿಸಲಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಖಾಲಿ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕವಾಗಲಿದೆ. ಸರಕಾರ ಈಗಾಗಲೇ ರಾಜ್ಯದಲ್ಲಿ ೧೫,೦೦೦ ಶಿಕ್ಷಕರ ನೇಮಕಾತಿಗೆ ಆದೇಶ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಗಳು ನಡೆದ ಬಳಿಕ ಖಾಲಿ ಇರುವ ಶಾಲೆಗಳಿಗೆ ಖಾಯಂ ಶಿಕ್ಷಕರು ನೇಮಕಗೊಳ್ಳಲಿದ್ದು, ಶಿಕ್ಷಕರ ಕೊರತೆ ನಿವಾರಣೆಯಾಗಲಿದೆ.