ಪುತ್ತೂರು: ಬೃಹತ್ ಧ್ವಜಸ್ತಂಭ ಅಳವಡಿಕೆ ಸ್ಥಳ ಬದಲಾವಣೆ ಆಗ್ರಹ

KannadaprabhaNewsNetwork |  
Published : Aug 02, 2025, 12:15 AM IST
ಫೋಟೋ: ೩೧ಪಿಟಿಆರ್-ನಗರಸಭೆನಗರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆಯಲ್ಲಿ ನಡೆಯಿತು.  | Kannada Prabha

ಸಾರಾಂಶ

ಬೀರಮಲೆ ಬೆಟ್ಟದಲ್ಲಿ ರು. ೧ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೭೫ ಮೀಟರ್ ಎತ್ತರದ ಬ್ರಹತ್ ಧ್ವಜಸ್ತಂಭವನ್ನು ಅಲ್ಲಿಂದ ನಗರದ ನೆಲ್ಲಿಕಟ್ಟೆ ಪ್ರದೇಶಕ್ಕೆ ಬದಲಾವಣೆ ಮಾಡಿರುವ ಬಗ್ಗೆ ಚರ್ಚೆ ನಡೆದು ಜನರಿಗೆ ವೀಕ್ಷಣೆಗೆ ಅನುಕೂಲಕರ ಜಾಗದಲ್ಲಿ ನಿರ್ಮಿಸುವಂತೆ ನಗರಸಭೆ ಸದಸ್ಯರು ಒತ್ತಾಯ ಮಾಡಿದ್ದಾರೆ.

ಪುತ್ತೂರು ನಗರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

ಕನ್ನಡಪ್ರಭ ವಾರ್ತೆ ಪುತ್ತೂರು ನಗರಸಭಾ ವ್ಯಾಪ್ತಿಯ ಬೀರಮಲೆ ಬೆಟ್ಟದಲ್ಲಿ ರು. ೧ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೭೫ ಮೀಟರ್ ಎತ್ತರದ ಬ್ರಹತ್ ಧ್ವಜಸ್ತಂಭವನ್ನು ಅಲ್ಲಿಂದ ನಗರದ ನೆಲ್ಲಿಕಟ್ಟೆ ಪ್ರದೇಶಕ್ಕೆ ಬದಲಾವಣೆ ಮಾಡಿರುವ ಬಗ್ಗೆ ಚರ್ಚೆ ನಡೆದು ಜನರಿಗೆ ವೀಕ್ಷಣೆಗೆ ಅನುಕೂಲಕರ ಜಾಗದಲ್ಲಿ ನಿರ್ಮಿಸುವಂತೆ ಸದಸ್ಯರು ಒತ್ತಾಯ ಮಾಡಿದ್ದಾರೆ.

ಪುತ್ತೂರು ನಗರಸಭೆಯ ಸಾಮಾನ್ಯ ಸಭೆ ಗುರುವಾರ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಧ್ವಜಸ್ತಂಭದ ಬಗ್ಗೆ ವಿಷಯ ಪ್ರಸ್ತಾಪಿಸಿ ರು. ೧ ಕೋಟಿ ಮೊತ್ತದಲ್ಲಿ ನಿರ್ಮಿಸಲಾಗುತ್ತಿರುವ ಧ್ವಜಸ್ತಂಭಕ್ಕೆ ಸರ್ಕಾರದ ಅನುದಾನ ಮತ್ತು ನಗರಸಭಾ ನಿಧಿಯ ೫೦:೫೦ ಅನುಪಾತದಲ್ಲಿ ವೆಚ್ಚದಲ್ಲಿ ಭರಿಸಲು ನಿರ್ಣಯಿಸಲಾಗಿದೆ. ಇದರಂತೆ ಈಗಾಗಲೇ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಲ್ಲಿ ಉಳಿಕೆಯಾಗಿರುವ ರು. ೨೫.೯೩ ಲಕ್ಷವನ್ನು ಯೋಜನೆಗೆ ಕಾದಿರಿಸಲಾಗಿದೆ. ನಗರ ಯೋಜನಾ ಪ್ರಾಧಿಕಾರದಿಂದ ರೂ. ೩೫ ಲಕ್ಷ ಮಂಜೂರುಗೊಂಡಿದೆ. ಬಾಕಿ ಮೊತ್ತ ರು. ೩೯.೦೭ ಲಕ್ಷವನ್ನು ನಗರಸಭಾ ನಿಧಿಯಡಿ ಕಾದಿರಿಸುವ ಬಗ್ಗೆ ಸಭೆಯಲ್ಲಿ ಅನುಮೋದನೆಗೆ ಮಂಡಿಸಲಾಯಿತು. ಬೀರಮಲೆ ಬೆಟ್ಟದಲ್ಲಿ ನಿರ್ಮಿಸಲು ನಡೆಸಲಾಗಿದ್ದ ಯೋಜನೆಯನ್ನು ನೆಲ್ಲಿಕಟ್ಟೆಗೆ ಬದಲಾವಣೆ ಮಾಡಿರುವ ಬಗ್ಗೆ ಪ್ರಶ್ನಿಸಿದ ಸದಸ್ಯ ಮಹಮ್ಮದ್ ರಿಯಾಝ್ ಬದಲಾವಣೆಗೆ ಕಾರಣಗಳನ್ನು ತಿಳಿಸಲು ಆಗ್ರಹಿಸಿದರು. ಇದಕ್ಕೆ ಉತ್ತರಿಸಿ ಸಂಬಂಧಿಸಿದ ಅಧಿಕಾರಿಗಳು ಅಲ್ಲಿಗೆ ಸಾಮಾಗ್ರಿ ಸಾಗಾಟ ಮಾಡಲು ತೊಂದರೆಯಾಗುತ್ತದೆ. ಈ ತಾಂತ್ರಿಕ ಸಮಸ್ಯೆಯಿಂದಾಗಿ ನೆಲ್ಲಿಕಟ್ಟೆಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸದಸ್ಯ ಮಹಮ್ಮದ್ ರಿಯಾಝ್ ಬ್ರಹತ್ ಮೊತ್ತದಲ್ಲಿ ನಿರ್ಮಿಸಲಾಗುತ್ತಿರುವ ಈ ಧ್ವಜಸ್ತಂಭವನ್ನು ಎತ್ತರದ ಬೀರಮಲೆ ಪ್ರದೇಶದಲ್ಲಿಯೇ ನಿರ್ಮಿಸಿದರೆ ನೋಡಲು ಚಂದ. ಆದಾಗ್ಯೂ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಸರಿಯಾದ ಜಾಗದಲ್ಲಿ ಜನರಿಗೆ ವೀಕ್ಷಣೆಗೆ ಅನುಕೂಲಕರವಾಗಿ ನಿರ್ಮಿಸಿ ಎಂದು ಸಲಹೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಹಿರಿಯ ಸದಸ್ಯ ಕೆ. ಜೀವಂಧರ್ ಜೈನ್ ಮತ್ತು ಭಾಮಿ ಅಶೋಕ್ ಶೆಣೈ ಅವರು ಸ್ಥಳಾಂತರದ ಬಗ್ಗೆ ಆತುರದ ತೀರ್ಮಾನ ಬೇಡ. ಈ ಬಗ್ಗೆ ಶಾಸಕರು, ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಸಭೆಯನ್ನು ನಡೆಸಿ ಬಳಿಕ ಕ್ರಮ ಕೈಗೊಳ್ಳಿ. ಇದು ರಾಷ್ಟ್ರೀಯ ಧ್ವಜವಾಗಿರುವುದರಿಂದ ಮುಂದೆ ಯಾವುದೇ ಸಮಸ್ಯೆಗಳಾಗದಂತೆ ಎಚ್ಚರ ವಹಿಸಿಕೊಳ್ಳಿ ಎಂದು ಸಲಹೆ ನೀಡಿದರು.ನಗರಕ್ಕೆ ನೀರು ಪೂರೈಕೆಯಾಗುತ್ತಿರುವ ಉಪ್ಪಿನಂಗಡಿ ಸೇತುವೆಯ ಗೇಟು ಇನ್ನೂ ತೆರವು ಮಾಡಿಲ್ಲ. ಇದರಿಂದಾಗಿ ನದಿಯಲ್ಲಿ ಹೂಳು ತುಂಬಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಬಹುದು. ಜಲಸಿರಿ ಯೋಜನೆಯ ಅಧಿಕಾರಿಗಳು ಈ ಬಗ್ಗೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಭಾಮಿ ಅಶೋಕ್ ಶೆಣೈ ತಿಳಿಸಿದರು. ಇದಕ್ಕೆ ಉತ್ತರಿಸಿದ ಜಲಸಿರಿ ಯೋಜನೆಯ ಅಧಿಕಾರಿ ಮಾದೇಶ, ಈ ಸೇತುವೆಯ ಕೆಳ ಭಾಗದಲ್ಲಿರುವ ಬಿಳಿಯೂರು ಸೇತುವೆಯ ಗೇಟು ತೆರವು ಮಾಡದೆ ಇಲ್ಲಿನ ಗೇಟು ತೆರವು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ಈ ಮಾತನ್ನು ಆಕ್ಷೇಪಿಸಿದ ಜೀವಂಧರ್ ಜೈನ್ ಮತ್ತು ಭಾಮಿ ಅಶೋಕ್ ಶೆಣೈ ಅವರು ಈ ಸಮಸ್ಯೆ ಬಗ್ಗೆ ನೀವು ನಗರಸಭೆಯ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೀರಾ ಎಂದು ಪ್ರಶ್ನಿಸಿದರು. ಅತೀ ಶೀಘ್ರವಾಗಿ ನಗರಸಭಯೆ ಇಂಜಿನಿಯರ್ ಮತ್ತು ಜಲಸಿರಿಯ ಇಂಜಿನಿಯರ್ ಸಹಿತ ಎಲ್ಲರೂ ಹೋಗಿ ಈ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೂಳು ತುಂಬಿ ಕುಡಿಯುವ ನೀರಿಗೆ ತೊಂದರೆಯಾಗಬಹುದು ಎಂದು ಅವರು ಎಚ್ಚರಿಸಿದರು.

ಸದಸ್ಯರಾದ ದೀಕ್ಷಾ ಪೈ, ಝವುರಾ, ಶೈಲಾ ಪೈ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು. ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತೆ ವಿದ್ಯಾ ಎಂ. ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...