ಪುತ್ತೂರು: ನಿರ್ಗತಿಕ ಮಹಿಳೆ ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆ

KannadaprabhaNewsNetwork |  
Published : Aug 21, 2026, 03:45 AM IST
ಫೋಟೋ: ೨೦ಪಿಟಿಆರ್-ಆಸರೆಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅನಾಥ, ನಿರ್ಗತಿಕ ಮಹಿಳೆಯನ್ನು ಪುನರ್ವವಸತಿ ಕೇಂದ್ರಕ್ಕೆ ಸೇರ್ಪಡೆ ಮಾಡಲಾಯಿತು. | Kannada Prabha

ಸಾರಾಂಶ

ಆಸರೆಯಿಲ್ಲದೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ೨೦ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು ೫೨ ವರ್ಷದ ಅನಾಥ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ರಕ್ಷಿಸಿ, ಮಂಗಳೂರಿನ ಕೈಕಂಬದಲ್ಲಿರುವ ಜೀವದಾನ ಚಾರಿಟೇಬಲ್ ಟ್ರಸ್ಟ್ ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದೆ.

ಪುತ್ತೂರು: ಆಸರೆಯಿಲ್ಲದೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ೨೦ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು ೫೨ ವರ್ಷದ ಅನಾಥ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ರಕ್ಷಿಸಿ, ಮಂಗಳೂರಿನ ಕೈಕಂಬದಲ್ಲಿರುವ ಜೀವದಾನ ಚಾರಿಟೇಬಲ್ ಟ್ರಸ್ಟ್ ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಮಾನವೀಯ ಕಾರ್ಯವನ್ನು ರೋಟರಿ ಕ್ಲಬ್ ಪುತ್ತೂರು ಯುವ ಸಂಸ್ಥೆಯ ಎಕ್ಸಿಕ್ಯೂಟಿವ್ ಸೆಕ್ರೆಟರಿ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ನಡೆಸಿದ್ದಾರೆ.

ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಿ, ಚಿಕಿತ್ಸೆ ನೀಡಿದ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಸಿಬ್ಬಂದಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವಧಿಯಲ್ಲಿ ಈ ಮಹಿಳೆಯು ಅಲ್ಲಿನ ಇತರ ಒಳರೋಗಿಗಳ ಜೊತೆಗೆ ಉತ್ತಮ ಆತ್ಮೀಯ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಇಂದು ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯುವ ಸಂದರ್ಭ ಸಿಬ್ಬಂದಿ ಭಾವುಕರಾಗಿ ಬಿಳ್ಕೊಟ್ಟರು. ಈ ಸಂದರ್ಭದಲ್ಲಿ ಒಳ ರೋಗಿಗಳ ಪ್ರೀತಿಯನ್ನು ಗಮನಿಸಿದ ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಮುದಾಯ ಸೇವಾ ವಿಭಾಗದ ಮುಖ್ಯಸ್ಥರಾದ ಅಭಿಷ ಸಿಹಿತಿಂಡಿ ಹಂಚಿದರು.

ಉಮೇಶ್ ನಾಯಕ್ ನಿರ್ಗತಿಕರ ಆಪದ್ಬಾಂಧವ: ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ವಚನ ಜಯರಾಮ್ ಅವರು, ನಮ್ಮ ಸಂಸ್ಥೆಯ ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಪುತ್ತೂರು ಉಮೇಶ್ ನಾಯಕ್ ಅನಾಥರು ಹಾಗೂ ನಿರ್ಗತಿಕರ ಪಾಲಿನ ನಿಜವಾದ ಆಪದ್ಬಾಂಧವರಾಗಿದ್ದಾರೆ. ಸಂಕಷ್ಟದಲ್ಲಿರುವವರನ್ನು ಕಂಡಾಗ ತಕ್ಷಣವೇ ಸ್ಪಂದಿಸುವ ಅವರ ನಿಸ್ವಾರ್ಥ ಸೇವಾ ಕಳಕಳಿ ಸಮಾಜಕ್ಕೆ ಮಾದರಿ ಎಂದರು. ವೈದ್ಯಾಧಿಕಾರಿ ಡಾ. ಯಧು ರಾಜ್ , ಸಿಬ್ಬಂದಿ ಸ್ಪಂದನೆ: ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಈ ಮಹಿಳೆಗೆ ಕುಟುಂಬದ ಬೆಂಬಲವಿಲ್ಲದೆ ಅನಾಥರಾಗಿದ್ದನ್ನು ಗಮನಿಸಿದ ಮುಖ್ಯ ವೈದ್ಯಾಧಿಕಾರಿ ಡಾ. ಯಧುರಾಜ್, ರೋಗಿಯ ಸೂಕ್ತ ಆರೈಕೆ ಹಾಗೂ ಸುರಕ್ಷಿತ ಆಶ್ರಯಕ್ಕಾಗಿ ಕಾಳಜಿ ವಹಿಸಿ ಉಮೇಶ್ ನಾಯಕ್ ಅವರನ್ನು ಸಂಪರ್ಕಿಸಿದ್ದರು. ಆಸ್ಪತ್ರೆಯ ಆಪ್ತ ಸಲಹಾ ಕೇಂದ್ರದ ಆಪ್ತ ಸಮಾಲೋಚಕರಾದ ತಾರಾನಾಥ್ ಅವರು ಈ ಮಹಿಳೆಗೆ ಆಪ್ತ ಸಲಹೆಯನ್ನು ನೀಡಿ ಪುನರ್ವಸತಿ ಕೇಂದ್ರಕ್ಕೆ ದಾಖಲು ಪಡೆಯುವಲ್ಲಿ ಮನವರಿಕೆ ಮಾಡಿದ್ದರು. ಈ ರಕ್ಷಣಾ ಕಾರ್ಯಾಚರಣೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಹಾಗೂ ಮಂಗಳ ಕಾಳೆ ಹಾಗೂ ಕಚೇರಿಯ ಸಿಬ್ಬಂದಿ ಸಹಕಾರ ನೀಡಿದ್ದಾರೆ.

ರೋಟರಿ ಕ್ಲಬ್ ಪುತ್ತೂರು ಯುವ ಇದರ ಕಾರ್ಯದರ್ಶಿ ಅನುಪ್, ಸಮುದಾಯ ಸೇವಾ ವಿಭಾಗದ ಮುಖ್ಯಸ್ಥರಾದ ಅಭಿಶ್, ಹಾಗೂ ಮಹಿಳಾ ಪೊಲೀಸ್ ಠಾಣೆಯ ಪರವಾಗಿ ಗೃಹರಕ್ಷಕ ದಳದ ಚೈತ್ರ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಇಕ್ಕೆಲ 75 ಮೀ.ನಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವಂತಿಲ್ಲ: ಕೋಟ
ಯಕ್ಷಗಾನಕ್ಕೆ ಗಡಿನಾಡು ಕನ್ನಡಿಗರ ಕೊಡುಗೆ ಅಪಾರ: ಡಾ. ತಲ್ಲೂರು