ಪುತ್ತೂರು: ಜಲಸಿರಿ, ನಗರೋತ್ಥಾನ ಕಾಮಗಾರಿ, ವಿಪತ್ತು ನಿರ್ವಹಣೆ ಸಭೆ

KannadaprabhaNewsNetwork |  
Published : Jul 12, 2024, 01:34 AM IST
ಫೋಟೋ: ೧೦ಪಿಟಿಆರ್-ಸಭೆಪುತ್ತೂರು ನಗರಸಭೆಯಲ್ಲಿ ಜಲಸಿರಿ, ನಗರೋತ್ಥಾನ ಕಾಮಗಾರಿ, ವಿಪತ್ತು ನಿರ್ವಹಣೆ ಸಭೆ ನಡೆಯಿತು. | Kannada Prabha

ಸಾರಾಂಶ

೧೫ ನೇ ಹಣಕಾಸು ಯೋಜನೆಯಡಿ ನೀರಿನ ನಿರ್ವಹಣೆಗಾಗಿ ನಗರಸಭೆಗೆ ೮೭ ಲಕ್ಷ ರು. ಅನುದಾನ ಬಂದಿದ್ದು ಆ ಅನುದಾನವನ್ನು ಒಂದು ವಲಯದ ಪೈಪ್‌ಲೈನ್ ಅಳವಡಿಕೆಗೆ ಬಳಸಲಾಗುವುದು ಎಂದು ಪೌರಯುಕ್ತ ಮಧು ಎಸ್. ಮನೋಹರ್ ಹೇಳಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಜಲಸಿರಿ ಯೋಜನೆಗೆ ಸಂಬಂಧಿಸಿದ ಕಾಮಗಾರಿ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಾಖಲಿಸಲಾಗುತ್ತಿರುವ ದೂರಿನ ನಿರ್ವಹಣೆಯ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ಸಮಗ್ರ ಮಾಹಿತಿ ನೀಡುವಂತೆ ಜಲಸಿರಿ ಅಧಿಕಾರಿಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಉದಯ ಶೆಟ್ಟಿ ಸೂಚನೆ ನೀಡಿದರು.

ಅವರು ಬುಧವಾರ ಮಧ್ಯಾಹ್ನ ಪುತ್ತೂರು ನಗರಸಭಾ ಸಭಾಂಗಣದಲ್ಲಿ ಜಲಸಿರಿ, ನಗರೋತ್ಥಾನ ಕಾಮಗಾರಿ, ವಿಪತ್ತು ನಿರ್ವಹಣೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಅವರು ಜಲಸಿರಿ ಕಾಮಗಾರಿಗಳು ಹತ್ತಾರು ಸಮಸ್ಯೆಗಳಿಂದ ಕೂಡಿದೆ. ಪ್ರತಿ ಬಾರಿ ಸಭೆ ನಡೆಯುತ್ತದೆ ಅನ್ನುವುದನ್ನು ಬಿಟ್ಟರೆ ಅದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಈ ಯೋಜನೆ ಪೂರ್ಣಗೊಂಡ ಬಳಿಕ ನಗರಸಭೆಗೆ ಆರ್ಥಿಕ ಹೊರೆ ಬೀಳಲಿದೆ. ಈಗಾಗಲೇ ಕೆಮಿಕಲ್‌ಗಾಗಿ ೮೦ ಲಕ್ಷ, ಜನರೇಟರ್ ಡಿಸೇಲ್‌ಗಾಗಿ ತಿಂಗಳಿಗೆ ೩೦ ಲಕ್ಷ ರು,. ವಿದ್ಯುತ್ ಬಿಲ್ ೪೬ ಲಕ್ಷ ಸೇರಿದಂತೆ ವರ್ಷಕ್ಕೆ ೧೦ ಕೋಟಿಯನ್ನು ನಗರಸಭೆ ಭರಿಸಬೇಕಾಗಿದೆ. ವಾರ್ಷಿಕವಾಗಿ ೧೧ ಕೋಟಿಯ ಬಜೆಟ್ ಆದಾಯ ಹೊಂದಿರುವ ನಗರಸಭೆಗೆ ೧೦ ಕೋಟಿಯನ್ನು ಜಲಸಿರಿಗೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಖರ್ಚನ್ನು ಸರ್ಕಾರವೇ ಭರಿಸುವಂತೆ ಪತ್ರ ಬರೆಯುವಂತೆ ಯೋಜನಾ ನಿರ್ದೇಶಕರಿಗೆ ಆಗ್ರಹಿಸಿದರು.

೧೫ ನೇ ಹಣಕಾಸು ಯೋಜನೆಯಡಿ ನೀರಿನ ನಿರ್ವಹಣೆಗಾಗಿ ನಗರಸಭೆಗೆ ೮೭ ಲಕ್ಷ ರು. ಅನುದಾನ ಬಂದಿದ್ದು ಆ ಅನುದಾನವನ್ನು ಒಂದು ವಲಯದ ಪೈಪ್‌ಲೈನ್ ಅಳವಡಿಕೆಗೆ ಬಳಸಲಾಗುವುದು ಎಂದು ಪೌರಯುಕ್ತ ಮಧು ಎಸ್. ಮನೋಹರ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜೀವಂಧರ್ ಜೈನ್, ಈ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ಬಳಸಲಾಗುತಿತ್ತು. ಈ ಬಾರಿ ಆ ಹಣವನ್ನು ಜಲಸಿರಿಯ ಪೈಪ್‌ಲೈನ್‌ಗೆ ಬಳಸುವಂತಾಗಿದೆ. ಜಲಸಿರಿ ಡಿಪಿಆರ್ ಸಂದರ್ಭದಲ್ಲಿ ಹಳೆ ಪೈಪ್‌ಲೈನ್ ಬದಲಾವಣೆಯನ್ನು ಸೇರಿಸದ ಕಾರಣ ಈಗ ನಗರಸಭೆ ಅನುದಾನವನ್ನು ಅವರಿಗೆ ನೀಡುವಂತಾಗಿದೆ ಎಂದರು.

ಯಾವ ವಲಯದಲ್ಲಿ ನೀರು ಪೂರೈಕೆ ಆಗುತ್ತಿದೆ, ಎಷ್ಟೊತ್ತಿಗೆ ಮನೆ ಮನೆಗೆ ನೀರು ಹರಿಸಲಾಗುತ್ತಿದೆ ಎನ್ನುವ ಬಗ್ಗೆ ಚಾರ್ಟ್ ಸಿದ್ಧಪಡಿಸಲಾಗಿದ್ದು ಅದನ್ನು ಎಲ್ಲ ಸದಸ್ಯರಿಗೆ ನೀಡಲಾಗುವುದು. ಬೆಳಗ್ಗೆಯ ಅವಧಿಯಲ್ಲೇ ನೀರು ಪೂರೈಸಲು ಸೂಚನೆ ನೀಡಲಾಗಿದೆ ಎಂದು ಮಧು ಮನೋಹರ್ ಸಭೆಗೆ ಮಾಹಿತಿ ನೀಡಿದರು.

ನಗರಸಭಾ ಸದಸ್ಯರಾದ ಬಾಲಚಂದ್ರ ಕೆ, ರಮೇಶ್ ರೈ, ದೀಕ್ಷಾ ಪೈ, ಸುಂದರ ಪೂಜಾರಿ, ಪದ್ಮನಾಭ, ವಿದ್ಯಾ ಗೌರಿ ಮತ್ತಿತರ ಸದಸ್ಯರು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ನಗರೋತ್ಥಾನ ಕಾಮಗಾರಿಗಳ ಬಗ್ಗೆಯು ಸಭೆಯಲ್ಲಿ ಮಾಹಿತಿ ವಿನಿಮಯ, ಚರ್ಚೆ ನಡೆಯಿತು. ಕಾರ್ಯಪಾಲಕ ಎಂಜಿನಿಯರ್ ಪುರಂದರ ಉಪಸ್ಥತಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ