ಪುತ್ತೂರು ರೋಟರಿ ಕ್ಲಬ್‌ಗೆ ೬೦ರ ಸಂಭ್ರಮ

KannadaprabhaNewsNetwork | Published : Mar 29, 2025 12:35 AM

ಸಾರಾಂಶ

ಪುತ್ತೂರಿನ ರೋಟರಿ ಕ್ಲಬ್ ಸಂಸ್ಥೆಯು ೬೦ರ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ರೋಟರಿ ಕ್ಲಬ್ ವತಿಯಿಂದ ಹಲವಾರು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ೨೪-೨೫ನೇ ಸಾಲಿನಲ್ಲಿ ಸುಮಾರು ೬೫ ಲಕ್ಷ ರು. ವೆಚ್ಚದ ಸಮಾಜ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರಿನ ರೋಟರಿ ಕ್ಲಬ್ ಸಂಸ್ಥೆಯು ೬೦ರ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ರೋಟರಿ ಕ್ಲಬ್ ವತಿಯಿಂದ ಹಲವಾರು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ೨೪-೨೫ನೇ ಸಾಲಿನಲ್ಲಿ ಸುಮಾರು ೬೫ ಲಕ್ಷ ರು. ವೆಚ್ಚದ ಸಮಾಜ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪತಿ ರಾವ್ ತಿಳಿಸಿದ್ದಾರೆ.ಅವರು ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರು ರೋಟರಿ ಕ್ಲಬ್ ತನ್ನದೇ ಆದ ಕೊಡುಗೆಯನ್ನು ಪುತ್ತೂರಿನ ಜನತೆಗೆ ನೀಡುತ್ತಾ ಬಂದಿದೆ. ೨೦೨೪-೨೫ನೇ ಸಾಲಿನಲ್ಲಿ ರೋಟರಿ ಸಂಸ್ಥೆಯಿಂದ ಪ್ರತೀ ತಿಂಗಳು ಕೆಎಂಸಿ ದಂತ ಮಹಾವಿದ್ಯಾಲಯದ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ, ಪುತ್ತೂರಿನ ಪ್ರಗತಿ, ಚೇತನಾ ಹಾಗೂ ನಝೀರ್ ಕ್ಲಿನಿಕ್ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ, ಡಯಾಬಿಟಿಸ್, ಅಸ್ತಮಾ, ಮಕ್ಕಳ ಆರೋಗ್ಯ ಶಿಬಿರ, ಎಲುಬು ಸಾಂಧ್ರತೆ, ಥೈರಾಯಿಡ್ ಮುಂತಾದ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಮುಂದಿನ ಯೋಜನೆಯ ಅಂಗವಾಗಿ ಈ ವರ್ಷ ಸುಮಾರು ೬೦ ಲಕ್ಷ ರು. ವೆಚ್ಚದಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ‘ಮೆಮೋಗ್ರಾಪಿ ಸೆಂಟರ್’ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಇದು ಉಚಿತವಾಗಿ ಲಭ್ಯವಾಗಲಿದೆ. ಮುಂದಿನ ಜುಲೈ ಒಳಗಡೆ ಯೋಜನೆ ಪೂರ್ಣಗೊಳ್ಳಲಿದೆ.ರೋಟರಿ ಕ್ಲಬ್ ಪುತ್ತೂರು ಪೂರ್ವದ ಸಹಕಾರದೊಂದಿಗೆ ವಿಶೇಷ ಚೇತನ ಮಕ್ಕಳಿಗೆ ೬ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ಲೇ ಹೋಂ ಲೋಕಾರ್ಪಣೆ ನಡೆಯಲಿದೆ. ೪೦ ಸಾವಿರ ರು. ವೆಚ್ಚದ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.ಸುದ್ಧಿಗೋಷ್ಠಿಯಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ರೋಟರಿ ಕ್ಲಬ್ ಕಾರ್ಯದರ್ಶಿ ಡಾಮೋದರ್ ಕೆ.ಎ., ಪೂರ್ವಾಧ್ಯಕ್ಷ ಜಯರಾಜ್ ಭಂಡಾರಿ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್, ಸದಸ್ಯ ಚಿದಾನಂದ ಬೈಲಾಡಿ ಉಪಸ್ಥಿತರಿದ್ದರು.

Share this article