ಪುತ್ತೂರು ಉಪವಿಭಾಗ ಮಟ್ಟದ ಜಾಗೃತಿ, ಉಸ್ತುವಾರಿ ಸಮಿತಿ ಸಭೆ

KannadaprabhaNewsNetwork |  
Published : Jun 28, 2025, 12:22 AM IST
ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಹಾಗೂ ಸಫಾಯಿ ಕರ್ಮಚಾರಿಗಳ ನಿಷೇಧ ಮತ್ತು ಪುನರ್ವಸತಿ ಸಮಿತಿ ಸಭೆ ನಡೆಸಲಾಯಿತು | Kannada Prabha

ಸಾರಾಂಶ

ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ಉಪವಿಭಾಗ ಮಟ್ಟದ ಸಫಾಯಿ ಕರ್ಮಚಾರಿಗಳ ನಿಷೇಧ ಮತ್ತು ಪುನರ್ವಸತಿ ಸಮಿತಿ ಸಭೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರು ಎಸ್‌ಸಿ ಮತ್ತು ಎಸ್‌ಟಿ ವಸತಿ ರಹಿತ ಫಲಾನುಭವಿಗಳ ಸಮರ್ಪಕ ಸಮೀಕ್ಷೆ ನಡೆಸಿ, ಫಲಾನುಭವಿಗಳನ್ನು ಗುರುತಿಸಿಕೊಂಡು ಅವರಿಗೆ ಅರ್ಹರಿಗೆ ಆದ್ಯತೆವಾರು ಪಟ್ಟಿ ತಯಾರಿಸಿ ವಸತಿ ನೀಡುವ ವ್ಯವಸ್ಥೆ ಮಾಡಿ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ಉಪವಿಭಾಗ ಮಟ್ಟದ ಸಫಾಯಿ ಕರ್ಮಚಾರಿಗಳ ನಿಷೇಧ ಮತ್ತು ಪುನರ್ವಸತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗಿಸ್ ಅವರು ವಿವಿಧ ಇಲಾಖೆಗಳಿಂದ ಮಾಹಿತಿ ಪಡೆದುಕೊಂಡರು. ಪುತ್ತೂರು ನಗರದಲ್ಲಿರುವ ಬ್ರಹ್ಮನಗರ ಎಂಬಲ್ಲಿನ ಎಸ್‌ಸಿ ಕಾಲೊನಿಯ ಸುಮಾರು ೧೫ರಿಂದ ೨೦ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಡಿವೈಎಸ್‌ಪಿ ಅರುಣ್ ನಾಗೇಗೌಡ ಅವರು ಪ್ರಸ್ತಾಪಿಸಿದರು. ಈ ಬಗ್ಗೆ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು ಜತೆಯಾಗಿ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಹಾಯಕ ಕಮೀಷನರ್ ಸೂಚನೆ ನೀಡಿದರು. ಎಸ್‌ಸಿ ಮತ್ತು ಎಸ್‌ಟಿಗಳ ವಸತಿ ವಿಚಾರದಲ್ಲಿ ಚರ್ಚೆ ನಡೆದು ಅವರಿಗೆ ಅಂಬೇಡ್ಕರ್ ವಸತಿ ನಿಗಮದಿಂದ ನೀಡಲಾಗುತ್ತಿರುವ ಮನೆಗಳು ಇದೀಗ ಬರುತ್ತಿಲ್ಲ. ಬದಲಿಗೆ ಪ್ರಧಾನ ಮಂತ್ರಿ ಆವಾಝ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಸರ್ಕಾರದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿಯೊಂದು ಪಂಚಾಯತ್‌ಗಳಿಗೆ ಕನಿಷ್ಠ ೨೦ ಮನೆಯಂತೆ ಅನುದಾನ ಸಿಗಬಹುದು ಆದರೆ ಬಹುತೇಕರಲ್ಲಿ ಜಾಗವಿದ್ದರೂ ಅದರ ದಾಖಲಾತಿಗಳ ಸಮಸ್ಯೆಯಿದೆ ಎಂದು ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯದ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು. ಬೇರೆ ಇಲಾಖೆಗಳ ಯೋಜನೆಯಿದ್ದರೆ ಅದರೊಂದಿಗೆ ಒಗ್ಗೂಡಿಸುವ ಮೂಲಕ ಮನೆಯನ್ನು ನಿರ್ಮಿಸಲು ಪ್ರಯತ್ನ ನಡೆಸಿ ಎಂದು ಸಹಾಯಕ ಕಮೀಷನರ್ ಸಲಹೆ ನೀಡಿದರು. ಆದರೆ ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿಯನ್ನು ಹೊರತು ಪಡಿಸಿ ಇತರ ಯಾವುದೇ ಯೋಜನೆಗಳಲ್ಲಿ ಒಗ್ಗೂಡಿಸುವಿಕೆಗೆ ಅವಕಾಶಗಳಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟ ಪಡಿಸಿದರು.

ಪೌರಕಾರ್ಮಿಕರಿಗೆ ನಿರಂತರ ಆರೋಗ್ಯ ತಪಾಸಣೆ ನಡೆಸುವುದರೊಂದಿಗೆ ಅವರಿಗೆ ಆರೋಗ್ಯ ವಿಮಾ ಯೋಜನೆ ಕಲ್ಪಿಸುವುದು, ಗುಣಮಟ್ಟದ ಸುರಕ್ಷಾ ವಸ್ತುಗಳನ್ನು ಒದಗಿಸುವಂತೆ ಸೂಚಿಸಿದ ಉಪವಿಭಾಗಾಧಿಕಾರಿಗಳು ವಸತಿ ರಹಿತ ಪೌರ ಕಾರ್ಮಿಕರಿಗೆ ವಸತಿ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಇದಕ್ಕಾಗಿ ವಸತಿ ರಹಿತ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ಡಿಪಿಆರ್ ಮಾಡಿ ವರದಿಯನ್ನು ರಾಜ್ಯಕ್ಕೆ ತಕ್ಷಣವೇ ಕಳುಹಿಸಿಕೊಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಅರುಣ್ ನಾಗೇಗೌಡ, ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ತಹಸೀಲ್ದಾರರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ