ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ 2023-24 ನೇ ಸಾಲಿನಲ್ಲಿ 1, 54, 91, 660.61 ರು. ಲಾಭ ಗಳಿಸಿದ್ದು, ಲಾಭಾಂಶದಲ್ಲಿ ಸದಸ್ಯರಿಗೆ 12 ಶೇ. ಡಿವಿಡೆಂಟ್ ನೀಡಲಿದೆ.
ಕನ್ನಡಪ್ರಭವಾರ್ತೆ ಪುತ್ತೂರು
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ 2023-24 ನೇ ಸಾಲಿನಲ್ಲಿ 1, 54, 91, 660.61 ರು. ಲಾಭ ಗಳಿಸಿದ್ದು, ಹಾಲಿ ವರ್ಷಾಂತ್ಯದಲ್ಲಿ ಸಂಘದಲ್ಲಿ 9,168 ಸದಸ್ಯರಾಗಿ ಹಾಗೂ 1869 ಮಂದಿ ಸಹಸದಸ್ಯರಾಗಿದ್ದಾರೆ. 2,73,33,800 ರು. ಪಾಲು ಬಂಡವಾಳ ಹೊಂದಿದ್ದು, ವರ್ಷಾಂತ್ಯದಲ್ಲಿ 73,44,65,222.57 ರು. ಠೇವಣಾತಿ ಇದೆ. ವರ್ಷಾಂತ್ಯದಲ್ಲಿ 6341 ಸಾಲಗಳ ಬಾಬ್ತು 47,02,65,144 ರು. ಹೊರಬಾಕಿಯಿದೆ. ಲಾಭಾಂಶದಲ್ಲಿ ಸದಸ್ಯರಿಗೆ 12 ಶೇ. ಡಿವಿಡೆಂಟ್ ನೀಡಲಾಗುವುದು ಎಂದು ಬ್ಯಾಂಕ್ ನ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ಘೋಷಿಸಿದರು. ಅವರು ಸಹಕಾರಿ ಪಿತಾಮಹ ದಿ. ಮೊಳಹಳ್ಳಿ ಶಿವರಾಯರ 144 ನೇ ಜನ್ಮದಿನವಾದ ಭಾನುವಾರ ನಡೆದ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ 115 ನೇ ವರ್ಷದ ಮಹಾಸಭೆಯಲ್ಲಿ ಮಾತನಾಡಿ ಸಂಘದಲ್ಲಿ ವಿವಿಧ ರೀತಿಯ ಸಾಲ ನೀಡಿಕೆಯ ಪ್ರಮಾಣವನ್ನು ವೃದ್ಧಿಸುವುದು, ಹೊಸದಾಗಿ ಶಾಖೆಗಳನ್ನು ವಿಸ್ತರಣೆ ಮಾಡುವುದು, ಸೋಲಾರ್ ಅಳವಡಿಕೆ, ಸಿಬಂದಿಗೆ ಹೆಚ್ಚಿನ ಕ್ಷಮತೆಗಾಗಿ ತರಬೇತಿ ನೀಡುವುದು, ಬ್ಯಾಂಕ್‌ನಲ್ಲಿ ಆದ್ಯತೆಯಲ್ಲಿ ಡಿಜಿಟಲೀಕರಣ ವ್ಯವಸ್ಥೆ ಅಳವಡಿಸಿಕೊಳ್ಳುವ ಸೇರಿದಂತೆ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಹಿರಿಯ ಸದಸ್ಯರಾದ ಮೋನಪ್ಪ, ಭಾಸ್ಕರ ಆಚಾರ್ಯ ಎನ್., ಬಾಳಪ್ಪ ಗೌಡ ಕೆ., ಜಯರಾಮ ಭಟ್ ಎಂ., ಗೋಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುತ್ತೂರಿನ ಪದವಿ ಕಾಲೇಜುಗಳಲ್ಲಿ ದ್ವಿತೀಯ ಬಿಕಾಂನಲ್ಲಿ ಅಧಿಕ ಅಂಕ ಗಳಿಸಿದವರಿಗೆ ಬ್ಯಾಂಕ್ ಶತಮಾನೋತ್ಸವ ವಿದ್ಯಾರ್ಥಿ ವೇತನ, ದಿ. ಮೊಳಹಳ್ಳಿ ಶಿವರಾಯರಿಂದ ಸ್ಥಾಪಿಸಲ್ಪಟ್ಟ ಪುತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸೆಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಿವರಾಯ ಶತಾಬ್ದಿಯ ವಿದ್ಯಾರ್ಥಿ ವೇತನ, ದಿ. ಬಿ. ಗಣಪತಿ ವಿಷ್ಣು ಹೊಳ್ಳ ಸ್ಕಾಲರ್ ಶಿಪ್, ಎಂಜಿನಿಯರಿಂಗ್ ಪದವಿಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ನೆಲ್ಲಿಕಟ್ಟೆ ಸರಕಾರಿ ಶಾಲೆಯ ಹಾಗೂ ಬೊಳುವಾರು ಸರ್ಕಾರಿ ಶಾಲೆಯ 6 ನೇ ತರಗತಿಯಲ್ಲಿ ಅಧಿಕ ಅಂಕ ಪಡೆದವರಿಗೆ ಸ್ಕಾಲರ್ ಶಿಪ್, ಪುತ್ತೂರು ಪಟ್ಟಣದಲ್ಲಿ ಎಸೆಸೆಲ್ಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸ್ಕಾಲರ್ ಶಿಪ್ ನೀಡಿ ಗೌರವಿಸಲಾಯಿತು.ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ ಶೆಟ್ಟಿ ವರದಿ ವಾಚಿಸಿದರು. ಸದಸ್ಯರಾದ ಇ. ಶಿವಪ್ರಸಾದ್, ರಾಜೇಶ್ ಬನ್ನೂರು, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಚನಿಲ ತಿಮ್ಮಪ್ಪ ಶೆಟ್ಟಿ, ಸುದರ್ಶನ್ ಮುರ ಮೊದಲಾದವರು ಸಲಹೆ -ಸೂಚನೆಗಳನ್ನು ನೀಡಿದರು. ಬ್ಯಾಂಕ್‌ನ ನಿರ್ದೇಶಕರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಸದಾಶಿವ ಪೈ, ಕಿರಣ್ ಕುಮಾರ್ ರೈ, ಚಂದ್ರಶೇಖರ ಗೌಡ ಕೆ., ಎ.ವಿ. ನಾರಾಯಣ, ವಿನೋದ್ ಕುಮಾರ್, ಮಲ್ಲೇಶ್ ಕುಮಾರ್, ರಮೇಶ್ ನಾಯ್ಕ ಕೆ., ಜಯಂತಿ, ಹೇಮಾವತಿ, ಗಾಯತ್ರಿ ಪಿ., ಅರವಿಂದ ಕೃಷ್ಣ, ಲೆಕ್ಕಪರಿಶೋಧಕ ಅನೀಶ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬ್ಯಾಂಕ್‌ನ ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ ಸ್ವಾಗತಿಸಿದರು. ಹಿರಿಯ ಸಹಾಯಕಿ ಜ್ಯೋತಿ ಎನ್.ಎಸ್. ಹಾಗೂ ಕಿರಿಯ ಸಹಾಯಕ ಪವನ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.