ಕನ್ನಡಪ್ರಭವಾರ್ತೆ ಪುತ್ತೂರುಅಡಕೆ ಆಮದಿನಿಂದಾಗಿ ಅಡಕೆ ಬೆಲೆ ಕುಸಿತಗೊಂಡಿದ್ದು, ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಕೆ ಆಮದು ನಿಷೇಧಿಸುವಂತೆ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ. 7ರಂದು ಬಿ.ಸಿ.ರೋಡ್‌ನಿಂದ ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿ ತನಕ ಟ್ರ್ಯಾಕ್ಟರ್ ಹಾಗೂ ವಾಹನ ಜಾಥಾ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ರೈತ ಸಂಘಗಳ ಒಕ್ಕೂಟದ ಸಂಯೋಜಕ ಸನ್ನಿ ಡಿ''''''''ಸೋಜ ತಿಳಿಸಿದ್ದಾರೆ.
ಜಿಲ್ಲೆಗೆ ಆರ್ಥಿಕ ಬೆನ್ನೆಲುಬು ಆಗಿರುವ ಅಡಕೆ ಆಮದು ಪ್ರಕ್ರಿಯೆಯಿಂದ ಇಲ್ಲಿನ ಅಡಕೆಯ ಮೌಲ್ಯ ಕುಸಿತವಾಗಿದೆ, ಅಡಕೆ ಉತ್ಪಾದನಾ ವೆಚ್ಚ ಮೂರು ಪಟ್ಟು ಹೆಚ್ಚಾಗಿದ್ದು, ಬೆಲೆ ನಿರಂತರ ಕುಸಿತವಾಗುತ್ತಿದೆ. ಎಲೆ ಚುಕ್ಕಿ ಹಾಗೂ ಹಳದಿ ಎಲೆ ರೋಗದಿಂದ ತತ್ತರಿಸಿ ಜಿಲ್ಲೆಯ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೈತರಿಗೆ 25 ಲಕ್ಷ ಪರಿಹಾರವನ್ನು ಸರ್ಕಾರ ನೀಡಬೇಕು. ಅಡಕೆಯನ್ನು ಆಮದು ಮಾಡಿ ಮಿಶ್ರಣ ಮಾಡುವ ಮೂಲಕ, ದಕ್ಷಿಣ ಕನ್ನಡದ ಹೆಸರು ಕೆಡಿಸುವ ಕಾರ್ಯವಾಗುತ್ತಿದೆ. ಅಡಕೆ ಮಾರುಕಟ್ಟೆಯನ್ನು ಹಾಳು ಮಾಡುವ ನಿಟ್ಟಿನಲ್ಲಿ ವಿಮಾನಗಳ ಮೂಲಕ ತರಿಸಿಕೊಂಡು ಆತಂಕ ಸೃಷ್ಟಿಸುವ ಕಾರ್ಯವಾಗುತ್ತಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದ ಅಡಕೆ ಯಾರಿಗೆ ಸೇರಿದ್ದು, ಎಲ್ಲಿಗೆ ಹೋಗುವುದು ಎಂಬ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಬ್ರಿಟಿಷರು ಕಾರ್ಖಾನೆಗಳಿಗೆ ಕಡಿಮೆ ಬೆಲೆಯಲ್ಲಿ ಕಚ್ಚಾ ವಸ್ತುಗಳು ಬೇಕೆಂದು ಕೃಷಿ ಉತ್ಪನ್ನಗಳ ಬೆಲೆಯನ್ನು ಹತೋಟಿಯಲ್ಲಿಟ್ಟಿದ್ದಂತೆ, ಸರ್ಕಾರಗಳು ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕು ರೈತರ ಹೊಟ್ಟೆಗೆ ಹೊಡೆಯುತ್ತಿದ್ದರು. ರೈತರ ಫಲವತ್ತಾದ ಭೂಮಿಯನ್ನು ಹಾಳು ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ರೈತರ ಬಗ್ಗೆ ಕಳಕಳಿ ಇರುತ್ತಿದ್ದರೆ, ಇಂತಹ ದು:ಸ್ಥಿತಿ ಬರುತ್ತಿರಲಿಲ್ಲ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳು ಕಳೆದರೂ, ಜಿಲ್ಲಾಧಿಕಾರಿಯವರು ರೈತರ ಸಭೆ ನಡೆಸಿಲ್ಲ. ವಿವಿಧ ಬೇಡಿಕೆಯನ್ನು ಇಟ್ಟುಕೊಂಡು ಮಾ.7 ರಂದು ಮಧ್ಯಾಹ್ನ 2ರಿಂದ ಬಿಸಿರೋಡಿನಿಂದ ಟ್ರ‍್ಯಾಕ್ಟರ್ ಹಾಗೂ ವಾಹನ ಜಾಥಾ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಯಂಕಾಲ 4ಕ್ಕೆ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ರೈತ ಸಂಘಗಳ ಒಕ್ಕೂಟದ ಸಮಿತಿ ಸದಸ್ಯರಾದ ಓಸ್ವಾಲ್ಡ್ಸ್ ಫೆರ್ನಾಂಡಿಸ್, ಅಮರನಾಥ ಆಳ್ವ, ಕಲೀಲ್ ಇಬ್ರಾಹಿಂ, ಭರತ್ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.