ರಾಜ್ಯದಲ್ಲಿ ೩ನೇ ಅತೀ ದೊಡ್ಡ ರಾಷ್ಟ್ರ ಧ್ವಜಸ್ತಂಭ: ಅಶೋಕ್ ರೈ

KannadaprabhaNewsNetwork |  
Published : Feb 18, 2026, 02:45 AM IST
ಫೋಟೋ: ೧೭ಪಿಟಿಆರ್-ಫ್ಲ್ಯಾಗ್ ೧ ಮತ್ತು ೧೭ಪಿಟಿಆರ್- ಫ್ಲ್ಯಾಗ್ ೨ | Kannada Prabha

ಸಾರಾಂಶ

ಪುತ್ತೂರಿನಲ್ಲಿ ರಾಜ್ಯದಲ್ಲಿಯೇ ೩ನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ನಿರ್ಮಾಣವಾಗಿದ್ದು, ತಾಲೂಕು ಕೇಂದ್ರಗಳನ್ನು ಪರಿಗಣಿಸಿದರೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಹಾರಾಡುವ ರಾಷ್ಟ್ರಧ್ವಜವು ೨೪೦೦ ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಧ್ವಜಸ್ತಂಭ ಸುಮಾರು ೪೦ ವರ್ಷಗಳ ಕಾಲ ಬಾಳಿಕೆ ಬರಲಿದೆ. ಈ ಸ್ತಂಭಕ್ಕೆ ಆಳವಡಿಸಿರುವ ಧ್ವಜವನ್ನು ವರ್ಷಕ್ಕೆ ೩ ಬಾರಿ ಬದಲಾಯಿಸಬೇಕಾಗುತ್ತದೆ

ಪುತ್ತೂರು: ಪುತ್ತೂರಿನಲ್ಲಿ ರಾಜ್ಯದಲ್ಲಿಯೇ ೩ನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ನಿರ್ಮಾಣವಾಗಿದ್ದು, ತಾಲೂಕು ಕೇಂದ್ರಗಳನ್ನು ಪರಿಗಣಿಸಿದರೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಹಾರಾಡುವ ರಾಷ್ಟ್ರಧ್ವಜವು ೨೪೦೦ ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಧ್ವಜಸ್ತಂಭ ಸುಮಾರು ೪೦ ವರ್ಷಗಳ ಕಾಲ ಬಾಳಿಕೆ ಬರಲಿದೆ. ಈ ಸ್ತಂಭಕ್ಕೆ ಆಳವಡಿಸಿರುವ ಧ್ವಜವನ್ನು ವರ್ಷಕ್ಕೆ ೩ ಬಾರಿ ಬದಲಾಯಿಸಬೇಕಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಪುತ್ತೂರು ಮಂಗಳವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ನೆಲ್ಲಿಕಟ್ಟೆ ಉದ್ಯಾನವನದಲ್ಲಿ ಸ್ಥಾಪಿಸಲಾದ ಬೃಹತ್ ರಾಷ್ಟ್ರಧ್ವಜವನ್ನು ಅನಾವರಣ ನಡೆಸಿ ಮಾತನಾಡಿದರು. ಪುತ್ತೂರಿನಲ್ಲಿ ಸದಾ ಕಾಲ ನೆನಪಿಟ್ಟುಕೊಳ್ಳುವಂಥ ಬೆಂಚ್ ಮಾರ್ಕ್ ಸ್ಥಾಪಿಸಬೇಕೆಂಬುದು ನನ್ನ ಇರಾದೆಯಾಗಿದೆ. ಇದರ ಒಂದು ಭಾಗವಾಗಿ ೭೮ ಮೀಟರ್ ಎತ್ತರದ ರಾಷ್ಟ್ರಧ್ವಜ ನಿರ್ಮಾಣಗೊಂಡಿದೆ. ದೇಶಪ್ರೇಮ ಎಂಬುದು ಕೇವಲ ಭಾಷಣದಲ್ಲಿ ಇರುವಂಥದ್ದಲ್ಲ. ಅದು ಹೃದಯದಲ್ಲಿ ಇರಬೇಕು. ದೇಶವನ್ನು ಯಾರು ವಿರೋಧಿಸುತ್ತಾರೋ ಅವರೆಲ್ಲ ನಮ್ಮ ವಿರೋಧಿಗಳು. ದೇಶವನ್ನು ಪ್ರೀತಿಸುವ ಎಲ್ಲ ಜಾತಿ, ಮತ, ಧರ್ಮಗಳ ಜನ ನಮ್ಮವರು. ಪುತ್ತೂರಿನಲ್ಲಿ ದೇಶಪ್ರೇಮದ ಅಭಿವ್ಯಕ್ತಿಗೆ ಒಂದು ಅದ್ಭುತ ಸಾಧನ ಸೃಷ್ಟಿಯಾಗಿದೆ. ಆಗಸದಲ್ಲಿ ನಿತ್ಯ ಹಾರಾಡುತ್ತಿರುವ ತ್ರಿವರ್ಣ ಧ್ವಜ ಪುತ್ತೂರಿನ ಜನರ ದೇಶಭಕ್ತಿಯ ಪ್ರತೀಕವಾಗಿದೆ ಎಂದರು. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಬೀರಮಲೆ ಬೆಟ್ಟದ ಅಭಿವೃದ್ಧಿ, ಪುತ್ತೂರು ನಗರಕ್ಕೆ ಒಳಚರಂಡಿ ಯೋಜನೆ, ೭೮ ಮೀಟರ್ ಎತ್ತರದ ರಾಷ್ಟ್ರ ಧ್ವಜ ನಿರ್ಮಾಣ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿ ಇವೆಲ್ಲ ನನ್ನ ಬೆಂಚ್ ಮಾರ್ಕ್ ಕನಸುಗಳು. ಎಲ್ಲವೂ ಜಾರಿಯಾಗುತ್ತಿವೆ ಎಂದು ಶಾಸಕರು ನುಡಿದರು.

ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ದೇಶದ ಅಖಂಡತೆ, ಸಮಗ್ರತೆ ಮತ್ತು ಸಾರ್ವಭೌಮತೆಯ ಸಂಕೇತ ಈ ರಾಷ್ಟ್ರಧ್ವಜ. ಈ ಚಾರಿತ್ರಿಕ ಧ್ವಜಸ್ಥಂಭ ನಿರ್ಮಿಸುವಲ್ಲಿ ನಗರ ಯೋಜನಾ ಪ್ರಾಧಿಕಾರ ರು. ೩೫ ಲಕ್ಷ ಅನುದಾನ ನೀಡಿದೆ. ಶಾಸಕರು ರು.೨೫ ಲಕ್ಷ ನೀಡಿದ್ದಾರೆ. ಉಳಿದ ಅನುದಾನ ನಗರಸಭೆಯಿಂದ ಪ್ರಾಪ್ತವಾಗಿದೆ. ರು. ೧ ಕೋಟಿ ವೆಚ್ಚದಲ್ಲಿ ಈ ಚಾರಿತ್ರಿಕ ತಾಣ ತಲೆ ಎತ್ತಿದೆ ಎಂದು ತಿಳಿಸಿದರು. ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿದರು. ನಗರಸಭೆ ಪೌರಾಯುಕ್ತರಾದ ವಿದ್ಯಾ ಕಾಳೆ ವಂದಿಸಿದರು. ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶಿವಪ್ರಿಯಾ ವಂದೇಮಾತರಂ ಹಾಡಿದರು.ಆಕರ್ಷಕ ಪಥಸಂಚಲನ:ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದಿಂದ ಆಕರ್ಷಕ ಪಥಸಂಚಲನ ನಡೆಯಿತು. ಸ್ಕೌಟ್ಸ್, ಗೈಡ್ಸ್, ರೋವರ್ಸ್ ಆ್ಯಂಡ್‌ ರೇಂಜರ್ಸ್, ಎನ್‌ಸಿಸಿ ಕೆಡೆಟ್ಸ್, ಕಾಲೇಜ್ ಸ್ಟೂಡೆಂಟ್ ಪೊಲೀಸ್ ವಿಂಗ್ ಘಟಕಗಳ ಪಾಲ್ಗೊಂಡರು. ಪುತ್ತೂರಿನ ನಿವೃತ್ತ ಸೈನಿಕರ ಸಂಘದ ಸದಸ್ಯರು ಸಮವಸ್ತ್ರಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದರು. ರಾಷ್ಟ್ರಧ್ವಜದ ಮುಂಭಾಗದಲ್ಲಿ ಶಾಸಕರು ಗೌರವ ರಕ್ಷೆ ಸ್ವೀಕರಿಸಿದರು. ಬಟನ್ ಒತ್ತುತ್ತಿದ್ದಂತೆ ಮೋಟಾರ್ ಚಾಲಿತ ಶಕ್ತಿಯೊಂದಿಗೆ ಮೆಗಾ ತ್ರಿವರ್ಣ ಧ್ವಜವು ೨೦ ನಿಮಿಷಗಳ ಅವಧಿಯಲ್ಲಿ ೭೮ ಮೀಟರ್ ಎತ್ತರದ ಸ್ತಂಭವನ್ನೇರಿ ತುತ್ತತುದಿಯಲ್ಲಿ ರಾರಾಜಿಸಿತು. ಈ ಸಂದರ್ಭದಲ್ಲಿ ವಂದೇಮಾತರಂ, ರಾಷ್ಟ್ರಗೀತೆ ಮತ್ತು ಧ್ವಜಗೀತೆ ಹಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಐತಿಹಾಸಿಕ ಧ್ವಜಸ್ಥಂಭದ ಕಾಮಗಾರಿ ನಡೆಸಿದ ಗುತ್ತಿಗೆದಾರ ಘನಶ್ಯಾಮ ಶೆಟ್ಟಿ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಮುತ್ತಪ್ಪ ಭಗವತಿ ದೇವಾಲಯ ವಾರ್ಷಿಕೋತ್ಸವ ಉತ್ಸವ
ಶ್ರಮಯೋಗಿ ಯೋಜನೆಯಲ್ಲಿ 7225 ನೋಂದಣಿ: ಸ್ವರೂಪ ಟಿ. ಕೆ.