ಪುತ್ತೂರು: ಭೂಕುಸಿತದ ಅಪಾಯದಲ್ಲಿರುವ ಪ್ರದೇಶದ ಮನೆಗಳಿಗೆ ನೋಟೀಸ್ ಮೂಲಕ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು. ಅಂತಹ ಪ್ರದೇಶಗಳಲ್ಲಿ ಮಾಹಿತಿ ಫಲಕ ಅಳವಡಿಸಬೇಕು ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಪಿಡಿಒ ಮತ್ತು ಗ್ರಾಮ ಕರಣಿಕರು ಕೇಂದ್ರ ಸ್ಥಾನದಲ್ಲಿ ಲಭ್ಯವಿರಬೇಕು, ಅಪಾಯಕಾರಿ ಸ್ಥಳಗಳ ಬಗ್ಗೆ ಚೆಕ್‌ಲೀಸ್ಟ್ ಮಾಡಿಕೊಡಬೇಕು. ನಗರಸಭಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್ ಗಳನ್ನಾಗಿ ನೇಮಿಸಲಾಗಿದೆ. ನಿಮ್ಮ ಸ್ಥಳೀಯಾಡಳಿತ ಮಟ್ಟದಲ್ಲಿ ನೀವೇ ನಾಯಕರಾಗಿ ಇತರ ಅಧಿಕಾರಿಗಳನ್ನು ಜತೆ ಸೇರಿಕೊಂಡು ಮುನ್ನೆಚ್ಚರಿಕಾ ಕ್ರಮಗಳು, ವಿಪತ್ತು ನಿರ್ವಹಣೆಯ ಕಾರ್ಯ ಮಾಡಬೇಕು ಎಂದು ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ಪುತ್ತೂರು ತಾ.ಪಂ.ಸಭಾಂಗಣದಲ್ಲಿ ಬುಧವಾರ ಪ್ರಾಕೃತಿಕ ವಿಕೋಪ ನಿರ್ವಹಣಾ ಮುಂಜಾಗ್ರತಾ ಸಭೆಯು ಬುಧವಾರ ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕಿನಲ್ಲಿ 217 ಅಂಗನವಾಡಿಗಳಿದ್ದು, ಅದರಲ್ಲಿ ನಾಲ್ಕೈದು ಅಂಗನವಾಡಿಗಳ ಪಕ್ಕ ಅಪಾಯಕಾರಿ ಮರಗಳಿದ್ದು, ಅದರ ತೆರವಿಗೆ ಸಂಬಂಧಿಸಿ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸಿಡಿಪಿಒ ಹರೀಶ್ ಅವರು ಸಭೆಗೆ ತಿಳಿಸಿದರು. ಅಪಾಯಕಾರಿ ಮರ, ವಿದ್ಯುತ್ ತಂತಿ, ಕಟ್ಟಡಗಳ ಸ್ಥಿತಿ, ಆವರಣ ಗೋಡೆಯ ಸ್ಥಿತಿಯ ಕುರಿತು ತಿಳಿದುಕೊಂಡು ಅದು ಸುಸ್ಥಿತಿಯಲ್ಲಿದ್ದರೆ ಮೇಲ್ವಿಚಾರಕರು ದೃಢೀಕರಿಸಿ ಪತ್ರ ನೀಡಬೇಕು. ಮುಂದೆ ಅಲ್ಲಿ ಅನಾಹುತ ನಡೆದರೆ ಅವರೇ ಹೊಣೆಯಾಗುತ್ತಾರೆ. ಸಮಸ್ಯೆಗಳಿದ್ದರೆ ಮೊದಲೇ ತಿಳಿಸಿ ಪರಿಹರಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಎಸಿಯವರು ಸೂಚಿಸಿದರು.
ತಿಂಗಳಾಡಿ ಶಾಲೆಯ ಮೇಲ್ಛಾವಣಿ ಅಪಾಯದಲ್ಲಿದ್ದು, ಶೀಘ್ರ ದುರಸ್ತಿಯಾಗಬೇಕು. ಕೆದಂಬಾಡಿ ಶಾಲೆಯ ಆಟದ ಮೈದಾನಕ್ಕೆ ಮಣ್ಣನ್ನು ತಂದು ಹಾಕಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ ಎಂದು ಪಿಡಿಒ ಸಭೆಗೆ ತೆಳಿಸಿದರು. ಈ ಕುರಿತು ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ಮಾಡಿ ತಹಸೀಲ್ದಾರ್ ಗೆ ವರದಿ ನೀಡಬೇಕು ಎಂದು ಸೂಚಿಸಿದರು.ಮುಖ್ಯ ರಸ್ತೆಗಳಲ್ಲಿ ಭೂ ಕುಸಿತದ ಅಪಾಯವಿದ್ದರೆ ರಾತ್ರಿಯೂ ಚೆನ್ನಾಗಿ ಕಾಣುವಂತೆ ಬೋರ್ಡ್ ಗಳನ್ನು ಹಾಕಬೇಕು, ಎಲ್ಲಾ ಕಡೆಯೂ ರಸ್ತೆ ಬದಿ ಚರಂಡಿ ಶುಚಿ ಮಾಡುವ ಕೆಲಸ ಮಾಡಬೇಕು, ವಿಪತ್ತು ನಿರ್ವಹಣೆಗೆ ಸಂಬಂಧಿಸಿ ಎಲ್ಲಾ ಅಧಿಕಾರಿಗಳ ವಿವರ ತಮ್ಮಲ್ಲಿರಬೇಕು ಎಂದು ಪಿಡಿಒಗಳಿಗೆ ಎಸಿ ತಿಳಿಸಿದರು.ಒಳಮೊಗ್ರುವಿನ ಅಜಲಡ್ಕ ಅಂಗನವಾಡಿ ಕೇಂದ್ರದ ಹಿಂಭಾಗ ಅಪಾಯಕಾರಿ ಧರೆಯ ಮಣ್ಣು ತೆರವಿನ ವೇಳೆ ಅರಣ್ಯ ಇಲಾಖೆಯವರು ತಡೆ ಒಡ್ಡಿದ್ದಾರೆ ಎಂದು ಪಿಡಿಒ ತಿಳಿಸಿದರು. ಅಂಗನವಾಡಿ ಕೇಂದ್ರ ನಮ್ಮ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿದ್ದು, ಅಪಾಯಕಾರಿ ಧರೆಯ ಕುರಿತು ಮಾಹಿತಿ ಇರಲಿಲ್ಲ. ಜತೆಗೆ ತೆರವು ಮಾಡುವ ಕುರಿತು ಕೂಡ ನಮಗೆ ಮಾಹಿತಿ ನೀಡಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದರು. ಅದರ ಕುರಿತು ಗಮನಹರಿಸುವಂತೆ ಎಸಿಯವರು ಸೂಚಿಸಿದರು.
ಪುತ್ತೂರು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿ, ಈಗಾಗಲೇ ದ.ಕ.ಜಿಲ್ಲಾಧಿಕಾರಿಗಳು ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಕುರಿತು ಸೂಕ್ತ ನಿರ್ದೇಶನ ನೀಡಿ ಪ್ರತಿ ಪಂಚಾಯತ್ ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ. ಅವರು ತಮ್ಮ ಪಂಚಾಯತ್ ಗಳಿಗೆ ತೆರಳಿ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿ ವರದಿ ತಲುಪಿಸುವ ಕಾರ್ಯ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಮೊಬೈಲ್ ಆಫ್ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ತಾಪ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ವಂದಿಸಿದರು.