ಪುತ್ತೂರು ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರದ ದೇವಳದ ಜಾತ್ರೋತ್ಸವವು ೧೦ರಿಂದ ಆರಂಭಗೊಂಡು ಎ.೨೦ರ ತನಕ ನಡೆಯಲಿದ್ದು, ಜಾತ್ರೆಯ ಯಶಸ್ವಿಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಬಾವಿ ಸಭೆ ಬುಧವಾರ ದೇವಳದ ಮುಂಭಾಗದಲ್ಲಿರುವ ಸಭಾಂಗಣದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅವರು ಜಾತ್ರೋತ್ಸವಕ್ಕೆ ಎರಡು ಲಕ್ಷಕ್ಕೂ ಅಧಿಕ ಮಂದಿ ಭಕ್ತಾದಿಗಳು ಸೇರುವ ನಿರೀಕ್ಷೆ ಇದ್ದು, ಯಾವುದೇ ಅಡೆತಡೆ ಇಲ್ಲದೆ ಜಾತ್ರೋತ್ಸವ ಯಶಸ್ವಿಯಾಗಿ ನಿರ್ವಹಿಸಲು ಇಲಾಖೆಗಳ ಸಹಭಾಗಿತ್ವದ ಅಗತ್ಯವಿದೆ. ವಿವಿಧ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು..೧೭ರಂದು ರಥೋತ್ಸವ ದಿನ ಮಹಾರಥ ಎಳೆಯುವ ಸಂದರ್ಭ ಮತ್ತು ವೀರಮಂಗಲಕ್ಕೆ ದೇವರು ಅವಭೃತ ಜಳಕಕ್ಕೆ ಹೋಗುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದಂತೆ ಹೆಚ್ಚಿನ ಎಚ್ಚರವಹಿಸಬೇಕು. ಜಾತ್ರೆಯ ಸಮರ್ಪಕ ನಿರ್ವಹಣೆಗಾಗಿ ಈಗಾಗಲೇ ಜಾತ್ರಾ ಅಂಗಣವನ್ನು ಸಾಕಷ್ಟು ವಿಸ್ತರಣೆ ಮಾಡಲಾಗಿದೆ. ಪ್ರತೀ ದಿನ ೨೫ ಸಾವಿರ ಮಂದಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ದೇವರ ಅವಭೃತಸ್ನಾನದ ಸಂದರ್ಭದಲ್ಲಿ ವೀರಮಂಗಲದಲ್ಲಿ ಭಕ್ತ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವೀರಮಂಗಲದಲ್ಲಿ ತಡೆಗೋಡೆ, ಗ್ಯಾಲರಿ, ತಾತ್ಕಾಲಿಕ ಶೌಚಾಲಯ ವ್ಯವಸ್ಥಿತ ರೀತಿಯಲ್ಲಿ ಮಾಡಲಾಗುವುದು ಎಂದರು.ಜಾತ್ರಾ ಗದ್ದೆಯಲ್ಲಿ ೩೫೦ ಸ್ಟಾಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ದೇವರ ಹುಂಡಿಗೆ ಸುಮಾರು ೧ ಕೋಟಿ ರು. ಹಣ ಸೇರ್ಪಡೆಯಾಗಲಿದೆ. ಸ್ಟಾಲ್ ಏಲಂ ಪ್ರಕ್ರಿಯೆಯಲ್ಲಿ ಒಳ ಒಪ್ಪಂದಗಳಿಗೆ ಯಾವುದೇ ಅವಕಾಶ ಇಲ್ಲ. ಪ್ರತಿಯೊಬ್ಬರೂ ವೈಯುಕ್ತಿಕ ಏಲಂನಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದ ಅವರು ಇದರೊಂದಿಗೆ ದೇವಳದ ಜೀರ್ಣೋದ್ಧಾರಕ್ಕಾಗಿ ದೇಣಿಗೆ ಸಂಗ್ರಹಕ್ಕೆ ಪ್ರತ್ಯೇಕ ಕಚೇರಿ ತೆರೆಯಲಾಗುತ್ತಿದ್ದು, ೨ ಕೋಟಿ ರು. ಸಂಗ್ರಹದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.