ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಟಿನೋಪ್ಪಿನಡ್ಕ ಸಮೀಪದ ಮುರುವದಿಂದ ಕಲ್ಲಡ್ಕ ಮೂಲಕ ದರ್ಬೆತ್ತಡ್ಕ ರಸ್ತೆಗೆ ನೂತನ ಸೇತುವೆಗೆ ಶಿಲಾನ್ಯಾಸ
ಪುತ್ತೂರು : ಚುನಾವಣೆ ಸಂದರ್ಭದಲ್ಲಿ ಜನರು ಇರಿಸಿದ ಬೇಡಿಕೆಗಳಲ್ಲಿ ಮುರುವ- ದರ್ಬೆತ್ತಡ್ಕ ಸಂಪರ್ಕ ಸೇತುವೆಯೂ ಸೇರಿದ್ದು, ಜನರಿಗೆ ನೀಡಿರುವ ಭರವಸೆಯಂತೆ ಇಲ್ಲಿನ ಸೇತುವೆ ನಿರ್ಮಾಣಕ್ಕೆ ೨ ಕೋಟಿ ರು. ಅನುದಾನ ಇರಿಸಿದ್ದೇನೆ. ಈ ಅನುದಾನದಲ್ಲಿ ಸೇತುವೆ ಕಾಮಗಾರಿ ನಡೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಬುಧವಾರ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಟಿನೋಪ್ಪಿನಡ್ಕ ಸಮೀಪದ ಮುರುವದಿಂದ ಕಲ್ಲಡ್ಕ ಮೂಲಕ ದರ್ಬೆತ್ತಡ್ಕ ರಸ್ತೆಗೆ ನೂತನ ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಈಗ ಇರುವ ಸೇತುವೆ ಕಿರಿದಾಗಿದೆ, ಅಗಲ ಕಡಿಮೆ ಇದೆ, ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಅವರ ಕಾಲದಲ್ಲಿ ಈ ಸೇತುವೆ ನಿರ್ಮಾಣವಾಗಿತ್ತು. ಆಗಿನ ಕಾಲಕ್ಕೆ ಇದುವೇ ದೊಡ್ಡ ಸೇತುವೆಯಾಗಿರಬಹುದು. ಆದರೆ ಆ ಬಳಿಕ ಇಲ್ಲಿನ ಜನರ ಬೇಡಿಕೆಯನ್ನು ಈಡೇರಿಸಿಲ್ಲ. ಅಭಿವೃದ್ದಿಯಲ್ಲಿ ನಾನು ಯಾವುದೇ ಪಕ್ಷ ಬೇಧ ಮಾಡಲ್ಲ. ಇಲ್ಲಿಗೆ ಅಗತ್ಯವಾಗಿ ಬೇಕಾದ ಸೇತುವೆಯನ್ನು ಮುಂದಿನ ೬ ತಿಂಗಳಲ್ಲಿ ಪೂರ್ಣಗೊಳಿಸಿ ಸಂಚಾರ ಮುಕ್ತ ಮಾಡಲಾಗುವುದು ಎಂದರು.ಮುರುವದಲ್ಲಿ ಸೇತುವೆಯಾಗುತ್ತದೆ ಎಂದು ಇಲ್ಲಿನ ಜನ ಕನಸಲ್ಲೂ ನೆನಸಲಿಲ್ಲ. ಈ ಹಿಂದೆ ಸೊರಕೆಯ ಕಾಲದಲ್ಲಿ ಇಲ್ಲಿ ಕಿರಿದಾದ ಸೇತುವೆ ನಿರ್ಮಾಣವಾದ ಕಾರಣ ಜನ ಇಷ್ಟು ವರ್ಷ ಹೊಳೆ ದಾಟುತ್ತಿದ್ದರು. ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಶಾಸಕರು ಅಭಿವೃದ್ದಿ ಕೆಲಸವನ್ನು ಮಾಡುತ್ತಾರೆ ಎಂಬುದಕ್ಕೆ ಈ ಸೇತುವೆಯೇ ಸಾಕ್ಷಿ. ಅಂದು ಸೊರಕೆ ಮಾಡಿದ್ರು ಇವತ್ತು ಇದೇ ಸೇತುವೆಗೆ ಅಶೋಕ್ ರೈ ಅವರು ೨ ಕೋಟಿ ಅನುದಾನ ನೀಡಿ ೪೦ ವರ್ಷದ ಬೇಡಿಕೆ ಈಡೇರಿಸಿದ್ದಾರೆ ಎಂದು ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ರೈ ಮುಗೇರು, ಬೂತ್ ಅಧ್ಯಕ್ಷ ಅಝೀಝ್ ನೀರ್ಪಾಡಿ, ಗೋವಿಂದ ನಾಯ್ಕ, ಹಂಝ ಉಜಿರೋಡಿ, ಸ್ಥಳೀಯ ಮುಖಂಡರಾದ ಸಂಕಪ್ಪ ಆಳ್ವ, ಸುಧಾಕರ ಆಳ್ವ, ತ್ಯಾಂಪಣ್ಣ ಆಳ್ವ, ವಸಂತ ಶೆಟ್ಟಿ, ಹಾರಿಸ್ ಮುಳಿಯಡ್ಕ, ರಮೇಶ್ ಆಳ್ವ ಕಲ್ಲಡ್ಕ, ಸುಧಾಕರ ಆಳ್ವ ಕಲ್ಲಡ್ಕ, ಜಯರಾಮ ರೈ, ಮೋಹನ ರೈ ಕಲ್ಲಡ್ಕ, ಚಿದಾನಂದ ರೈ, ರಾಧಾಕೃಷ್ಣ ರೈ, ರಾಜೇಶ್ ರೈ, ಜನಾರ್ಧನ ರೈ, ಮಂಜುನಾಥ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಬದ್ರು ಪರ್ಪುಂಜ, ರಝಾಕ್ ಪರ್ಪುಂಜ, ಮಹಮ್ಮದ್ ಅಡ್ಕ,ಪ್ರವೀಣ್ ಅಡ್ಕ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.