ಸನಾತನ ಹಿಂದೂ ಪರಂಪರೆ ಅತ್ಯಂತ ಶ್ರೇಷ್ಠ: ಶ್ರೀ ವಿಧುಶೇಖರ ಭಾರತೀ

KannadaprabhaNewsNetwork |  
Published : May 09, 2026, 02:45 AM IST
ಫೋಟೋ: ೭ಪಿಟಿಆರ್-ಶೃಂಗೇರಿ ೧, ೨, ೩, ೪, ೫ | Kannada Prabha

ಸಾರಾಂಶ

ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಡೆದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಂಭ್ರಮದ ಸಮಾರೋಪ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ

ಪುತ್ತೂರು: ಸನಾತನ ಹಿಂದೂ ಪರಂಪರೆ ಅತ್ಯಂತ ಶ್ರೇಷ್ಠವಾಗಿದ್ದು, ಹಿಂದೂ ಧರ್ಮವನ್ನು ಮತ್ತು ಹಿಂದೂ ಸಮಾಜವನ್ನು ಬೆಳೆಸುವುದರಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಎಂದು ಶೃಂಗೇರಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.ಗುರುವಾರ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಡೆದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಂಭ್ರಮದ ಸಮಾರೋಪ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ನಾಸ್ತಿಕರು ಹಾಗೂ ನಾಸ್ತಿಕರೆಂದು ಹೆಸರಿಟ್ಟುಕೊಂಡ ಎರಡು ಪ್ರಭೇದಗಳಿವೆ. ನೈಜ ನಾಸ್ತಿಕರು ಎಲ್ಲ ಮತ ಧರ್ಮಗಳ ನ್ಯೂನತೆಗಳನ್ನೂ ಎತ್ತಿ ತೋರಿಸುತ್ತಾ ಬಂದರೆ, ನಾಸ್ತಿಕರೆಂದು ಹೆಸರಿಟ್ಟುಕೊಂಡವರು ಹಿಂದೂ ಧರ್ಮದ ಬಗ್ಗೆ ಮಾತ್ರ ಟೀಕಿಸುವುದಕ್ಕೆ ತೊಡಗುತ್ತಾರೆ. ಅವರಿಗೆ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಅನ್ಯಾಯಗಳು ಕಾಣುತ್ತವೆ, ಬೇರೆ ಧರ್ಮದ ಯಾವುದೇ ಹುಳುಕುಗಳು ಅವರಿಗೆ ಕಾಣಿಸುವುದಿಲ್ಲ. ಇಂತಹವರ ಬಗ್ಗೆ ಗಮನ ಇಡಬೇಕು ಎಂದರು.

ದೇಶ-ಧರ್ಮಗಳೆರಡೂ ಸದಾ ಉತ್ತಮ ಸ್ಥಿತಿಯಲ್ಲಿರುವಂತೆ ನಾವು ನೋಡಿಕೊಳ್ಳಬೇಕು. ಹಿಂದೂ ಧರ್ಮದ ಬಗೆಗೆ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಆದರೆ ಆ ಸುಳ್ಳುಗಳು ಸುಳ್ಳು ಎಂದು ಹಿಂದೂಗಳಿಗೇ ಅರಿವಾಗುತ್ತಿಲ್ಲ. ಇಲ್ಲಿಯವರೆಗೆ ನಮ್ಮ ಧರ್ಮಕ್ಕಾದ ಹಾನಿಯೇ ಸಾಕು. ಇನ್ನು ಮುಂದೆಯೂ ಅದು ಮುಂದುವರೆಯದಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರು ಆಧ್ಯಾತ್ಮಿಕ ಮಾರ್ಗದರ್ಶನದ ಜತೆಗೆ ದೇಶ-ಜನ ಸೇವೆಯ ಮೂಲಕ ಶೃಂಗೇರಿ ಪೀಠವು ಶ್ರೇಷ್ಠ ಪರಂಪರೆ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸಮಸ್ತ ಹಿಂದೂ ಸಮಾಜ ಒಳಗೊಂಡು ಗುರುಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ೨೫ ವರ್ಷಗಳ ಬೆಳವಣಿಗೆಗೆ ಪೀಠದ ಆಶೀರ್ವಾದವೇ ಕಾರಣವಾಗಿದೆ ಎಂದರು.

ವಿದ್ವಾಂಸ ವಿದ್ಯಾವಾಚಸ್ಪತಿ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟ ಗುರುವಂದನಾ ಭಾಷಣ ಮಾಡಿದರು.

ಶಂಖನಾದ ಹಾಗೂ ವೇದಘೋಷ ನಡೆಸಿಕೊಡಲಾಯಿತು. ಗುರುವಂದನಾ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ವಾಗತಿಸಿದರು. ತಾಲೂಕು ಧರ್ಮ ಶಿಕ್ಷಣ ಧರ್ಮಾಭ್ಯುದಯದ ವಿದ್ಯಾರ್ಥಿಗಳಿಂದ ಸಮರ್ಪಣಮ್ ಕಾರ್ಯಕ್ರಮ ನಡೆಯಿತು.

ಉಬ್ಬುಶಿಲ್ಪ ಅನಾವರಣ

ಸಂಸ್ಥೆಯ ಆವರಣದಲ್ಲಿ ಭಾರತಮಾತೆಯ ಉಬ್ಬುಶಿಲ್ಪವನ್ನು ಮತ್ತು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸ್ಮರಣ ಸಂಚಿಕೆ ಹಾಗೂ ಶೃಂಗೇರಿಯ ಹಿರಿಮೆ ಕೃತಿಯನ್ನು ಶ್ರೀ ಜಗದ್ಗುರುಗಳು ಅನಾವರಣಗೊಳಿಸಿದರು. ಅಂಬಿಕಾ ನಡೆದು ಬಂದ ಹಾದಿಯ ಕಿರುಚಿತ್ರ ಪ್ರದರ್ಶಿಸಲಾಯಿತು. ಅಂಬಿಕಾ ವತಿಯಿಂದ ರೂಪಿಸಲಾದ ನಾವಿಕ - ಹಿಂದೂ ಸಂಪರ್ಕ ಸಾರಿಗೆ ಎಂಬ ಮೊಬೈಲ್ ಆಪ್‌ನ್ನು ಶ್ರೀ ಜಗದಗ್ಗುರುಗಳು ಲೋಕಾರ್ಪಣೆಗೊಳಿಸಿದರು.

ಗುರುವಂದನಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಭಿವಂದನಾ ಪತ್ರ, ಸ್ಮರಣಿಕೆಗಳನ್ನು ಜಗದ್ಗುರುಗಳಿಗೆ ಸಮರ್ಪಿಸಲಾಯಿತು. ಸುಬ್ರಮಣ್ಯ ನಟ್ಟೋಜ ಹಾಗೂ ಕುಟುಂಬಸ್ಥರು ಶಾರದಾಮಾತೆಯ ಪುತ್ಥಳಿಯನ್ನು ಗುರುಚರಣಗಳಿಗೆ ಅರ್ಪಿಸಿದರು. ವಿವಿಧ ಸಂಘ ಸಂಸ್ಥೆಗಳು, ಸಮುದಾಯಗಳ ವತಿಯಿಂದ ಗುರುವಂದನೆ ನಡೆಯಿತು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಡಾ.ಎಂ.ಎಸ್.ಶೆಣೈ, ಇನ್ನಿತರ ಸದಸ್ಯರು, ಗುರುವಂದನಾ ಸಮಿತಿಯ ಗೌರವಾಧ್ಯಕ್ಷ ಮೊಗೆರೋಡಿ ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ, ಕೋಶಾಧಿಕಾರಿ ಕಾವು ಹೇಮನಾಥ ಶೆಟ್ಟಿ, ಕಾರ್ಯಾಧ್ಯಕ್ಷ ಶಿವರಾಮ ಆಳ್ವ, ಸಂಚಾಲಕ ಡಾ.ಸುರೇಶ್ ಪುತ್ತೂರಾಯ, ಕಾರ್ಯದರ್ಶಿ ಸಾಜ ರಾಧಾಕೃಷ್ಣ ಆಳ್ವ, ಸಂಘಟನಾ ಕಾರ್ಯದರ್ಶಿ ದಿನೇಶ್ ಜೈನ್, ಸಂಯೋಜಕ ಮಾಧವ ಸ್ವಾಮಿ, ಜತೆ ಕಾರ್ಯದರ್ಶಿಗಳಾದ ಸುರೇಶ್ ಕೆಮ್ಮಿಂಜೆ ಹಾಗೂ ನವೀನ್ ಕುಲಾಲ್, ಸಹಸಂಚಾಲಕ ಗಿರಿಶಂಕರ ಸುಲಾಯ, ಗೌರವ ಸಲಹೆಗಾರ ಎನ್.ಕೆ.ಜಗನ್ನಿವಾಸ ರಾವ್, ಪದಾಧಿಕಾರಿಗಳು, ಸದಸ್ಯರು ಮತ್ತು ಧರ್ಮಾಭ್ಯುದಯದ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಇತರ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ ಹಾಗೂ ಸಂಜೀವ ಮಠಂದೂರು ಮೊದಲಾದವರು ಉಪಸ್ಥಿತರಿದ್ದರು.

ಬಹುಮಾನ: ಶ್ರೀ ಶಂಕರ ಜಯಂತಿ ಪ್ರಯುಕ್ತ ಪುತ್ತೂರು ಹಾಗೂ ಸುತ್ತಮುತ್ತಲಿನ ಆರು ತಾಲೂಕುಗಳ ವಿದ್ಯಾರ್ಥಿಗಳಿಗಾಗಿ ಶೃಂಗೇರಿ ಪೀಠದಿಂದ ಇತ್ತೀಚೆಗೆ ಆಯೋಜಿಸಲಾದ ಶಂಕರ ವಿಜಯ ಸ್ಪರ್ಧೆಗಳಲ್ಲಿ ಗೆಲುವು ಪಡೆದವರಿಗೆ ಹಾಗೂ ಅತ್ಯುತ್ತಮ ಪ್ರದರ್ಶನ ತೋರಿದವರಿಗೆ ಶ್ರೀಗಳು ಬಹುಮಾನ ವಿತರಿಸಿದರು. ಅಂಬಿಕಾ ವತಿಯಿಂದ ಆಯೋಜಿಸಲಾಗಿದ್ದ ಶ್ಲೋಕಭಾರತೀ ಸ್ಪರ್ಧೆಯ ವಿಜೇತರಿಗೆ ಬಾಲಭಾರತಿ ಪ್ರಶಸ್ತಿ ವಿತರಿಸಲಾಯಿತು.

ಶೃಂಗೇರಿ ಮಠದ ಶಾಂಕರ ತತ್ವ ಪ್ರಸಾರ ಅಭಿಯಾನದ ರಾಜ್ಯ ಸಂಚಾಲಕ ವಿದ್ವಾನ್ ತೇಜಶಂಕರ ಸೋಮಯಾಜಿ ಅಭಿವಂದನಾ ಪತ್ರ ವಾಚಿಸಿದರು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಧರ್ಮದ ಹಾದಿಯಲ್ಲಿ ನಡೆಯಲಿ: ಅಭಿನವ ಸಿದ್ಧಲಿಂಗ ಶ್ರೀ
ದಾನಮ್ಮ ಉತ್ಸವ ದೇಸಿ ಸಂಸ್ಕೃತಿಗೆ ಹಿಡಿದ ಕನ್ನಡಿ: ಎಂ.ಎ.ಮೋರೆ