ಪುತ್ತೂರು ನಗರದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ದ.ಕ.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ತಾ.ಪಂ, ನಗರಸಭೆ, ತಾಲೂಕು ಯುವಜನ ಒಕ್ಕೂಟ, ಶ್ರೀ ವಿಷ್ಣು ಯುವ ಶಕ್ತಿ ಬಳಗ, ವಿವೇಕಾನಂದ ವಿದ್ಯಾಸಂಸ್ಥೆಗಳು, ವೀರಮಂಗಲ ಕೆಪಿಎಸ್ ಶಾಲೆ ಹಾಗೂ ಕೊಂಬೆಟ್ಟು ಸರ್ಕಾರಿ ಪ.ಪೂ.ಕಾಲೇಜಿನ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
ಪುತ್ತೂರು: ಪುತ್ತೂರಿನ ಕ್ರೀಡಾ ಪ್ರತಿಭೆಗಳಿಗೆ ಸಿಂಥೆಟಿಕ್ ಟ್ಯ್ರಾಕ್ ಸೇರಿದಂತೆ ಇತರ ಮೂಲಸೌಕರ್ಯಗಳು ಇಲ್ಲ ಎಂಬ ಕೊರಗು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕ್ರೀಡಾ ಝೋನ್ ನಿರ್ಮಾಣವಾದಲ್ಲಿ ಕ್ರೀಡಾ ಸಾಧನೆಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಭಾನುವಾರ ಪುತ್ತೂರು ನಗರದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ದ.ಕ.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ತಾ.ಪಂ, ನಗರಸಭೆ, ತಾಲೂಕು ಯುವಜನ ಒಕ್ಕೂಟ, ಶ್ರೀ ವಿಷ್ಣು ಯುವ ಶಕ್ತಿ ಬಳಗ, ವಿವೇಕಾನಂದ ವಿದ್ಯಾಸಂಸ್ಥೆಗಳು, ವೀರಮಂಗಲ ಕೆಪಿಎಸ್ ಶಾಲೆ ಹಾಗೂ ಕೊಂಬೆಟ್ಟು ಸರ್ಕಾರಿ ಪ.ಪೂ.ಕಾಲೇಜಿನ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪುತ್ತೂರು ತಾಲೂಕಿನ ಮುಂಡೂರಿನಲ್ಲಿ ಸುಮಾರು 15.50 ಎಕರೆ ಜಾಗವನ್ನು ಮೀಸಲಿಟ್ಟು ಈಗಾಗಲೇ 9.50 ಕೋಟಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಮುಂದಿನ 6 ತಿಂಗಳಲ್ಲಿ ಕ್ರೀಡಾಂಗಣ ಕಾಮಗಾರಿ ಪೂರ್ಣಗೊಂಡು ಉದ್ಘಾಟಿಸುವ ಕಾರ್ಯ ಮಾಡಲಾಗುವುದು. ಈ ತಾಲೂಕು ಕ್ರೀಡಾಂಗಣ ನಿರ್ಮಾಣದ ಬಳಿಕ ಮುಂದಿನ 2 ವರ್ಷಗಳಲ್ಲಿ ಅಲ್ಲಿ ಸಿಂಥೆಟಿಕ್ ಟ್ಯ್ರಾಕ್ ನಿರ್ಮಾಣ, ವಾಕಿಂಗ್ ಟ್ಯ್ರಾಕ್ ನಿರ್ಮಾಣ, ಒಲಿಂಪಿಕ್ಸ್ ಮಾದರಿ ಈಜು ಕೊಳ, ಒಳಾಂಗಣ ಆಟಕ್ಕೆ ವ್ಯವಸ್ಥೆಗಳನ್ನು ಮಾಡಿಕೊಂಡು ಅಲ್ಲಿ ಕ್ರೀಡಾ ಝೋನ್ ಮಾಡುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.ಪುತ್ತೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಉದ್ಯಮಿ ಕೃಷ್ಣಪ್ರಸಾದ್ ಆಳ್ವ, ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ, ವೀರಮಂಗಲ ಶಾಲಾ ಮುಖ್ಯಶಿಕ್ಷಕ ತಾರಾನಾಥ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಕ್ರೀಡಾ ನೋಡೆಲ್ ಅಧಿಕಾರಿ ಮಾಮಚ್ಚನ್, ಶ್ರೀಕಾಂತ್ ಬಿರಾವು, ಪ್ರವೀಣ ರೈ, ಶ್ರೀಕಾಂತ್, ರಾಜೇಶ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.