ತರಳಬಾಳು ವಿದ್ಯಾಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ: ತಿಮ್ಮರಾಜು

KannadaprabhaNewsNetwork |  
Published : Sep 05, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಸ್ವಾತಂತ್ರ್ಯ ಪೂರ್ವದಲ್ಲಿಯೇ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಮಠ-ಮಾನ್ಯಗಳ ಪೈಕಿ ತರಳಬಾಳು ಪೀಠವೂ ಪ್ರಮುಖವಾದುದು ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ತಿಮ್ಮರಾಜು ಹೇಳಿದರು.

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 35ನೇ ಶ್ರದ್ಧಾಂಜಲಿ ಸಮಾರಂಭ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸ್ವಾತಂತ್ರ್ಯ ಪೂರ್ವದಲ್ಲಿಯೇ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಮಠ-ಮಾನ್ಯಗಳ ಪೈಕಿ ತರಳಬಾಳು ಪೀಠವೂ ಪ್ರಮುಖವಾದುದು ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ತಿಮ್ಮರಾಜು ಹೇಳಿದರು.

ನಗರದ ಎಸ್‌ಟಿಜೆ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 35ನೇ ಶ್ರದ್ಧಾಂಜಲಿ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಪ್ರಾದೇಶಿಕ ಹಂತದ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತರಳಬಾಳು ಮಠವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಜನರಿಗೆ ಸೇವೆ ಸಲ್ಲಿಸುತ್ತಿದೆ. ಅದರಲ್ಲೂ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ ಕಾಲಘಟ್ಟದಲ್ಲಿ ಮಹತ್ವದ ಶೈಕ್ಷಣಿಕ ಕಾರ್ಯಗಳು ನಡೆದಿವೆ ಎಂದರು.

ಶ್ರೀಗಳು ಬಯಸಿದ್ದರೆ ರಾಜ್ಯದ ವಿವಿಧೆಡೆ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಅವಕಾಶವಿತ್ತು. ಸರ್ಕಾರವೂ ಯಾವುದೇ ಷರತ್ತು ವಿಧಿಸದೆ ಅನುಮತಿ ನೀಡುವ ಪರಿಸ್ಥಿತಿ ಇತ್ತು. ಆದರೆ, ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಶಿಕ್ಷಣ ದೊರಕಿಸಬೇಕೆಂಬ ಸೇವಾ ಮನೋಭಾವನೆಯಿಂದ ತರಳಬಾಳು ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಇಂದಿಗೂ ಮಠ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿಲ್ಲ ಎಂದು ಹೇಳಿದರು.

ಇಂದಿನ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿವೆ. ಆದರೆ ತರಳಬಾಳು ವಿದ್ಯಾಸಂಸ್ಥೆಗಳು ಸೇವಾ ಮನೋಭಾವನೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿಶಿಷ್ಟ ಸ್ಥಾನ ಪಡೆದಿವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್. ರುದ್ರಪ್ಪ ಮಾತನಾಡಿ, ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದ್ದ ಸ್ವಾತಂತ್ರ್ಯ ಪೂರ್ವದ ಗ್ರಾಮೀಣ ಪ್ರದೇಶಗಳಲ್ಲಿ ತರಳಬಾಳು ವಿದ್ಯಾಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಸರ್ಕಾರಕ್ಕೆ ಪರ್ಯಾಯವಾಗಿ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸಿದವು. ಜನರನ್ನು ಶಿಕ್ಷಿತರನ್ನಾಗಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು ಎಂದರು.

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ತರಳಬಾಳು ವಿದ್ಯಾಸಂಸ್ಥೆಗಳು ಮಹತ್ವದ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.

ತರಳಬಾಳು ವಿದ್ಯಾಸಂಸ್ಥೆಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ. ವಿಜಯ್ ಎಸ್. ಸಿಂದಿಗೆರೆ, ವಲಯಾಧಿಕಾರಿಗಳಾದ ಕೆ.ಟಿ. ಹಾಲೇಶ್, ಡಿ.ಜಿ. ಪ್ರಕಾಶ್, ಶ್ರೀ ಭುವನೇಶ್ವರಿ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಬಿ. ಚೇತನಾ, ಎಸ್‌ಟಿಜೆ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜೆ.ಕೆ. ಭಾರತಿ ಹಾಗೂ ಎಸ್‌ಟಿಜೆ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವನಗೌಡ ಕೆ. ಸುರಕೋಡು ಉಪಸ್ಥಿತರಿದ್ದರು.

---ಬಾಕ್ಸ್---

ಮೌಢ್ಯ, ಅಂಧಶ್ರದ್ಧೆಗೆ ಶಿವಕುಮಾರ ಶ್ರೀಗಳು ಅವಕಾಶ ನೀಡುತ್ತಿರಲಿಲ್ಲ: ಜಿ.ಎಂ.ಗಣೇಶ್

ಸಿರಿಗೆರೆಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳನ್ನು ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಲಿನಲ್ಲಿ ಸ್ಮರಿಸಬೇಕಾಗಿದೆ ಎಂದು ಎಂಎಲ್‌ಎಂಎನ್ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ. ಗಣೇಶ್ ಹೇಳಿದರು.

ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ ಕುರಿತು ಉಪನ್ಯಾಸ ನೀಡಿದ ಅವರು, ಶ್ರೀಗಳು ಎಂದಿಗೂ ಮೌಢ್ಯ ಹಾಗೂ ಅಂಧಶ್ರದ್ಧೆಗೆ ಅವಕಾಶ ನೀಡುತ್ತಿರಲಿಲ್ಲ. ದೇವಾಲಯಗಳನ್ನು ನಿರ್ಮಿಸುವುದಕ್ಕಿಂತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಂತೆ ಅವರು ಒತ್ತಾಯಿಸುತ್ತಿದ್ದರು. ಅವರ 35ನೇ ಶ್ರದ್ಧಾಂಜಲಿ ಸಮಾರಂಭ ಆಚರಿಸುತ್ತಿದ್ದರೂ, ಅವರ ಆದರ್ಶಗಳು ಹಾಗೂ ಸೇವಾ ಕಾರ್ಯಗಳಿಂದಾಗಿ ಇಂದಿಗೂ ಅವರು ನಮ್ಮೊಂದಿಗೇ ಇದ್ದಾರೆ ಎಂಬ ಭಾವನೆ ಮೂಡುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಕಪಡೆ ಯೋಜನೆ ಉದ್ದೇಶ ಮಹಿಳಾ ಸಬಲೀಕರಣ, ಸುರಕ್ಷತೆ: ಲಕ್ಷ್ಮೀ
ಸಿಂಡಿಕೇಟ್ ಸದಸ್ಯತ್ವದಿಂದ ಕನ್ನಾಳೆ ವಜಾಗೊಳಿಸಿ