ಕನ್ನಡಪ್ರಭ ವಾರ್ತೆ ಉಳ್ಳಾಲ
ದೇಶದಲ್ಲಿ ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿದೆ, ಯುವಕರು ತಮ್ಮಲ್ಲಿರುವ ಬುದ್ಧಿಯನ್ನು ವಿಕಸನಗೊಳಿಸಬಲ್ಲ ಅವಕಾಶಗಳೇ ಇಲ್ಲ. ಕಾನೂನು ಶಿಕ್ಷಣ, ನೈತಿಕ ಶಿಕ್ಷಣ, ಗುಣಾತ್ಮಕ ಶಿಕ್ಷಣ ಕೊಡುವ ಅಗತ್ಯವಿದೆ. ಅದಕ್ಕಾಗಿ ನಿರಂತರ ಹೋರಾಟಗಳ ಅಗತ್ಯವಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಎಚ್.ಎನ್. ನಾಗಮೋಹನ್ ದಾಸ್ ಹೇಳಿದ್ದಾರೆ. ತೊಕ್ಕೊಟ್ಟುವಿನ ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಡಿವೈಎಫ್‌ಐ ಆಯೋಜಿಸಿದ್ದ ೧೨ನೇ ರಾಜ್ಯ ಸಮ್ಮೇಳನಕ್ಕೆ ಡೋಲು ಬಡಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಿರಂತರ ಯುದ್ಧಗಳು ಆರಂಭವಾಗಿದೆ. ತಡೆಯಲು ವಿಶ್ವಸಂಸ್ಥೆಗೂ ಸಾಧ್ಯವಾಗುತ್ತಿಲ್ಲ. ಶಿಕ್ಷಣ, ಉದ್ಯೋಗದಿಂದ ವಂಚಿತರಾಗುತ್ತಿರುವ ಯುವಸಮೂಹ ಯುದ್ಧ, ಗಲಭೆಗಳಲ್ಲಿ ಕೈಜೋಡಿಸುವಂತಾಗಿದೆ. ಯುವಸಮೂಹ ಯುದ್ಧವಿರೋಧಿ ನೀತಿಯನ್ನು ಅನುಸರಿಸಿಕೊಂಡು, ಶಾಂತಿ ಕಾಪಾಡುವತ್ತ ಮುಖಮಾಡಬೇಕಿದೆ ಎಂದರು. ಸ್ವಾಗತ ಭಾಷಣ ಮಾಡಿದ ವಿಶ್ರಾಂತ ಜಿಲ್ಲಾಧಿಕಾರಿ, ಡಿವೈಎಫ್ ಐ ೧೨ ನೇ ರಾಜ್ಯ ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎ.ಬಿ. ಇಬ್ರಾಹಿಂ, ಸಂವಿಧಾನ ಉಳಿಸುವ ಸಲುವಾಗಿ ಹಳ್ಳಿಯಿಂದ ದೆಹಲಿಯವರೆಗೆ ಹೋರಾಟವಾಗಬೇಕು. ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನ ನಿರಂತರ ಜಾರಿಯಲ್ಲಿದೆ ಎಂದರು. ಡಿವೈಎಫ್ ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ್, ಡಾ. ಕೃಷ್ಣಪ್ಪ ಕೊಂಚಾಡಿ, ಸಂತೋಷ್ ಬಜಾಲ್, ಸುನಿಲ್ ಕುಮಾರ್ ಬಜಾಲ್, ಬಿಕೆ ಇಮ್ತಿಯಾಝ್ , ವಕೀಲ ರಾಮಚಂದ್ರ ಬಬ್ಬುಕಟ್ಟೆ, ಡಾ.ಜೀವನ್ ರಾಜ್ ಕುತ್ತಾರ್, ಕೇರಳ ಡಿವೈಎಫ್ ಐನ ಸ್ಯಾಮ್ಸನ್ ಮತ್ತಿತರರಿದ್ದರು.ಮನೋಜ್ ಕುಮಾರ್ ನಿರೂಪಿಸಿದರು. ಬಿ..ಕೆ.ಇಮ್ತಿಯಾಝ್ ವಂದಿಸಿದರು ಡಾ. ಶಂಸುಲ್ಲಾ ಇಸ್ಲಾಂ ಬರೆದ ‘ವಿ.ಡಿ ಸಾವರ್ಕರ್ : ಏಳು ಮಿಥ್ಯೆಗಳು ತಡಗಳಲೆ’ ಸುರೇಂದ್ರ ರಾವ್ ಕನ್ನಡಕ್ಕೆ ಅನುವಾದಿಸಿದ, ಪತ್ರಕರ್ತ ನವೀನ್ ಸೂರಿಂಜೆ ಬರೆದ ‘ನಡು ಬಗ್ಗಿಸದ ಎದೆಯ ದನಿ ಹಿಂದುತ್ವವಾದಿಯ ಒಳಹೊರಗಿನ ಅನುಭವ ಕಥನ’ , ಬಿ.ಶ್ರೀಪಾದ್ ಭಟ್ ಬರೆದ ‘ವಿಷವಟ್ಟಿ ಸುಡುವಲ್ಲಿ ಪಠ್ಯಪುಸ್ತಕ ಮತೀಯವಾದೀಕರಣ ಮತ್ತು ಇತಿಹಾಸದ ತಿರುಚುವಿಕೆ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.