ತಾಲೂಕು ಮಟ್ಟದ ಕಲಿಕಾ ಸಂಭ್ರಮ, ಎಫ್‌ಎಲ್‌ಎನ್ ಕಲಿಕಾ ರಥೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಅವರ ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.ಪಟ್ಟಣದ ಬಾಬು ಜಗಜೀವನ್‌ರಾಮ್ ಭವನದಲ್ಲಿ ತಾಲೂಕು ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ 2024-25ನೇ ಸಾಲಿನ ತಾಲೂಕು ಮಟ್ಟದ ಕಲಿಕಾ ಸಂಭ್ರಮ ಮತ್ತು ಎಫ್‌ಎಲ್‌ಎನ್ ಕಲಿಕಾ ರಥೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಬಿಳಿ ಹಾಳೆ ಇದ್ದಂತೆ ಅವರನ್ನು ನಾವು ಹೇಗೆ ತಿದ್ದಿ-ತೀಡುತ್ತಾ ಬೆಳೆಸುತ್ತೇವೆ ಹಾಗೇಯೆ ಬೆಳೆಯುತ್ತವೆ. ಹಾಗಾಗಿ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಜ್ಞಾನಾರ್ಜನೆ ನೀಡಿದರೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.ಯಾವ ನಗರ, ಸಿಟಿ ಶಾಲೆಗೂ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಹಳ್ಳಿಯ ಶಾಲೆಯ ಮಕ್ಕಳನ್ನು ಬೆಳೆಸಬೇಕು, ಮಕ್ಕಳಿಗೆ ಪಠ್ಯದ ಜೊತೆಗೆ ಕಥೆ ಕವನ, ಗುರುಕುಲ ಶಿಕ್ಷಣ, ಸಂಸ್ಕೃತಿ ಬಗ್ಗೆ ಹೇಳಿಕೊಡಬೇಕು ಆಗ ಕಲಿಕೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತು ಸ್ಪರ್ಧಾತ್ಮಕವಾಗಿ ಮುಂದುವರೆದಿದೆ, ಭಾರತ ಚಂದ್ರಯಾನಕ್ಕೂ ಹೋಗಿ ಸಾಧನೆ ಮಾಡಿದೆ. ಶೈಕ್ಷಣಿಕವಾಗಿ ಮಕ್ಕಳು ಮುನ್ನುಗಿದರೆ ಶಿಕ್ಷಣ ಕ್ಷೇತ್ರದಲ್ಲಿಯೂ ಕ್ರಾಂತಿ ಮಾಡಬಹುದು ಎಂದರು.ಕಲಿಕಾ ಗುಣಮಟ್ಟ ಹೆಚ್ಚಿಸಲು ಸರ್ಕಾರ ಕಲಿಕಾ ಹಬ್ಬಕಾರ್ಯಕ್ರಮ ಜಾರಿಗೆ ತಂದಿದ್ದು, ತಾಲೂಕಿನಲ್ಲಿ ಕಲಿಕಾ ಹಬ್ಬವನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಿದ್ದೇವೆ, ಶಾಸಕರು ಸಹ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಹಲವು ಮಾರ್ಗಸೂಚಿಗಳನ್ನು ನೀಡುತ್ತಾ ಬಂದಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ಫಾತೀಮಾಬೀ ಶೇಕ್ಷಾವಲಿ, ಸದಸ್ಯರಾದ ಲಾಟಿದಾದಪೀರ, ಉದ್ದಾರ ಗಣೇಶ, ಶಾಸಕರ ಆಪ್ತ ಸಹಾಯಕ ಮತ್ತೂರು ಬಸವರಾಜ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಹೊನ್ನೆತ್ತೇಪ್ಪ, ನಾಗರಾಜ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕೆ.ನಾಗರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಂದೋಳ್ ಸಿದ್ದಪ್ಪ, ಬಿ.ರಾಜಶೇಖರ, ಶಿಕ್ಷಕ ಮನೋಹರ, ಗುರುಮೂರ್ತಿ, ಅರ್ಜುನ ಪರಸಪ್ಪ, ಅಂಜಿನಪ್ಪ, ಷರೀಫ್, ಶಿವಾಜಿ ನಾಯ್ಕ್, ಲತಾ, ಗಿರಜ್ಜಿ ಮಂಜುನಾಥ, ಸಲೀಂ ಸೇರಿದಂತೆ ಇತರರು ಇದ್ದರು.ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಬಾಬು ಜಗಜೀವನ್‌ರಾಮ್ ಭವನದವರೆಗೆ ಎಫ್‌ಎಲ್‌ಎನ್ ಕಲಿಕಾ ರಥೋತ್ಸವ ಮೆರವಣಿಗೆ ನಡೆಯಿತು.