ಕನ್ನಡಪ್ರಭ ವಾರ್ತೆ, ತುಮಕೂರುತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ ಪ್ರಾರಂಭವಾದ 7 ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಸುಮಾರು 1 ಲಕ್ಷ ರು. ಬೆಲೆಯ ಪರಿಕರಗಳನ್ನು ವಿತರಿಸಲಾಯಿತು. ನಗರದ ಹೊರವಲಯದ ಮಲ್ಲಸಂದ್ರದಲ್ಲಿರುವ ತುಮಕೂರು ಹಾಲು ಒಕ್ಕೂಟದ ಆಡಳಿತ ಮಂಡಳಿ ಕಚೇರಿ ಆವರಣದಲ್ಲಿ ತಾಲೂಕಿನ ಬಿದರೆಕಟ್ಟೆ, ಗಳಿಗೇನಹಳ್ಳಿ, ನಾಗವಲ್ಲಿ, ಸಿದ್ದೆಬೇಗೂರು, ಶೆಟ್ಟಪ್ಪನಹಳ್ಳಿ, ಚಿಕ್ಕಹಳ್ಳಿ ಹಾಗೂ ಬಿದನಗೆರೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ 1 ಲಕ್ಷ ರು. ನಂತೆ 7 ಸಂಘಗಳಿಗೆ ಒಟ್ಟು 7 ಲಕ್ಷ ರು. ಮೌಲ್ಯದ ಪರಿಕರಗಳನ್ನು ತುಮಕೂರು ತಾಲೂಕು ತುಮುಲ್ ನಿರ್ದೇಶಕ ನಂಜೇಗೌಡ ವಿತರಿಸಿದರು.ನಂತರ ಮಾತನಾಡಿದ ನಿರ್ದೇಶಕ ನಂಜೇಗೌಡ ಅವರು, 2024-25ನೇ ಸಾಲಿನಲ್ಲಿ ಪ್ರಾರಂಭವಾದ ತಾಲೂಕಿನ 7 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಒಕ್ಕೂಟದ ವತಿಯಿಂದ ತಲಾ 1 ಲಕ್ಷ ರು. ನಂತೆ 7 ಲಕ್ಷ ರು. ಬೆಲೆಯ ಪರಿಕರಗಳನ್ನು ವಿತರಿಸಲಾಗಿದೆ. ಇದರಲ್ಲಿ ಸಂಘಕ್ಕೆ ಅಗತ್ಯ ಇರುವ ಬೀರು, ಹಾಲು ಅಳತೆಯ ಮಾಪಕ, ಅನಲೈಸರ್, ಪೀಠೋಪಕರಣಗಳು ಸೇರಿದಂತೆ ಇತರೆ ವಸ್ತುಗಳು ಸೇರಿವೆ ಎಂದರು. ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮೂಲಕ ಒಕ್ಕೂಟದ ಹೆಸರು ಇಡೀ ರಾಜ್ಯ ಮತ್ತು ದೇಶದಲ್ಲೇ ಬೆಳಗುವಂತಾಗಬೇಕು. ಜತೆಗೆ ಹಾಲು ಉತ್ಪಾದಕ ರೈತರು ಆರ್ಥಿಕವಾಗಿ ಸಬಲರಾಗಬಹುದಾಗಿದೆ. ಗುಣಮಟ್ಟದ ಹಾಲು ಪೂರೈಕೆ ಹೈನುಗಾರರ ಧ್ಯೇಯವಾಗಬೇಕು. ಆಗ ಮಾತ್ರ ಇನ್ನು ಹೆಚ್ಚಿನ ರೀತಿಯಲ್ಲಿ ಸಂಘಗಳಿಗೆ ಆರ್ಥಿಕ ಸಹಾಯ ದೊರೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.