ಕಲ್ಲು ಕ್ವಾರಿ ಮಾಲಿಕರಿಂದ ಕೋಟಿ ಕೋಟಿ ರಾಜಸ್ವ ವಂಚನೆ

KannadaprabhaNewsNetwork |  
Published : May 21, 2026, 02:30 AM IST
ಗದುಗಿನಲ್ಲಿ ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

2006 ರಿಂದ 2024ರ ವರೆಗೂ ನಡೆಸಿದ ಕಲ್ಲು ಗಣಿಗಾರಿಕೆಯ ಪ್ರಮಾಣವನ್ನು ಡ್ರೋಣ್‌ ಮೂಲಕ ಸರ್ವೆ ಮಾಡಲಾಗಿದೆ. ಹೀಗೆ ಸರ್ವೇ ಮಾಡಿದ ವೇಳೆ ಈಗಾಗಲೇ ಪಾವತಿ ಮಾಡಿರುವ ರಾಜಸ್ವಕ್ಕೂ ಮತ್ತು ಪಾವತಿಯಾಗಬೇಕಾದ ರಾಜಸ್ವಕ್ಕೂ ಭಾರಿ ವ್ಯತ್ಯಾಸ ಕಂಡು ಬಂದಿದೆ

ಕೊಪ್ಪಳ: ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಪ್ರಮಾಣದಲ್ಲಿ ಕಡಿಮೆ ತೋರಿಸುವ ಮೂಲಕ ವಂಚನೆ ಮಾಡಿದ್ದನ್ನು ಡ್ರೋಣ್‌ ಸರ್ವೇಯಲ್ಲಿ ಪತ್ತೆ ಮಾಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯಾದ್ಯಂತ ಕಲ್ಲುಕ್ವಾರಿ ಮಾಲಿಕರಿಗೆ ನೂರಾರು ಕೋಟಿ ರಾಜಸ್ವ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.

ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ಬರೋಬ್ಬರಿ 60 ಕಲ್ಲು ಕ್ವಾರಿಗಳ ಮಾಲಿಕರಿಗೆ ನೋಟಿಸ್ ಜಾರಿ ಮಾಡಿ ₹110 ಕೋಟಿ ರಾಜಸ್ವ ಪಾವತಿ ಮಾಡುವಂತೆ ಸೂಚಿಸಲಾಗಿದೆ. ಆದರೆ, ಇದಕ್ಕೆ ಕಲ್ಲು ಕ್ವಾರಿ ಮಾಲಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇವಲ ಕೊಪ್ಪಳ ಜಿಲ್ಲೆ ಅಷ್ಟೇ ಅಲ್ಲ, ರಾಜ್ಯಾದ್ಯಂತ ಕಲ್ಲು ಕ್ವಾರಿಗಳ ಮಾಲಿಕರಿಗೆ ನೋಟಿಸ್ ಜಾರಿ ಮಾಡಿ ಕೂಡಲೇ ರಾಜಸ್ವ ಪಾವತಿ ಮಾಡುವಂತೆ ಸೂಚಿಸಲಾಗಿದೆ.

ಡ್ರೋಣ್‌ ಸರ್ವೇ:2006 ರಿಂದ 2024ರ ವರೆಗೂ ನಡೆಸಿದ ಕಲ್ಲು ಗಣಿಗಾರಿಕೆಯ ಪ್ರಮಾಣವನ್ನು ಡ್ರೋಣ್‌ ಮೂಲಕ ಸರ್ವೆ ಮಾಡಲಾಗಿದೆ. ಹೀಗೆ ಸರ್ವೇ ಮಾಡಿದ ವೇಳೆ ಈಗಾಗಲೇ ಪಾವತಿ ಮಾಡಿರುವ ರಾಜಸ್ವಕ್ಕೂ ಮತ್ತು ಪಾವತಿಯಾಗಬೇಕಾದ ರಾಜಸ್ವಕ್ಕೂ ಭಾರಿ ವ್ಯತ್ಯಾಸ ಕಂಡು ಬಂದಿದೆ.

ಕಲ್ಲು ಕ್ವಾರಿ ನಡೆಸಿದ ವೇಳೆಯಲ್ಲಿ ಇಲಾಖೆಯ ಅಂದಾಜು ಲೆಕ್ಕಾಚಾರದ ಆಧಾರದಲ್ಲಿ ಮತ್ತು ಕಲ್ಲು ಕ್ವಾರಿ ಮಾಲಿಕರು ಸಲ್ಲಿಸಿದ ದಾಖಲೆಯ ಆಧಾರದಲ್ಲಿಯೇ ರಾಜಸ್ವ ಪಾವತಿ ಮಾಡಲಾಗಿದೆ. ಆದರೆ, ಈಗ ಡ್ರೋಣ್‌ ಸರ್ವೇ ಮೂಲಕ ಮಾಡಿದ ಲೆಕ್ಕಾಚಾರದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಹೆಚ್ಚುವರಿ ರಾಜಸ್ವ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಮಾಲಿಕರ ಆಕ್ಷೇಪ:ಕಲ್ಲು ಗಣಿಗಾರಿಕೆ ನಡೆಸುವ ವೇಳೆಯಲ್ಲಿ ಲೆಕ್ಕಾಚಾರ ಮಾಡಿಯೇ ರಾಜಸ್ವ ಪಾವತಿ ಮಾಡಿಕೊಂಡಿದ್ದಾರೆ. ಆಗ ಆಡಿಟ್ ಸಹ ಮಾಡಿಸಲಾಗಿದೆ. ಈಗ ಏಕಾಏಕಿ ಡ್ರೋಣ್‌ ಸರ್ವೇ ಮಾಡಿಸುವ ಮೂಲಕ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ರಾಜಸ್ವ ಪಾವತಿ ಮಾಡಬೇಕು ಎಂದರೆ ಹೇಗೆ ಸಾಧ್ಯ. ಇದನ್ನು ನಾವು ಸರ್ಕಾರದಲ್ಲಿಯೇ ಪ್ರಶ್ನೆ ಮಾಡುತ್ತೇವೆ. 2006 ರಿಂದ 2024ರ ಅವಧಿಯಲ್ಲಿ ನಡೆದ ಕಲ್ಲು ಗಣಿಗಾರಿಕೆ ಕುರಿತು ಈಗ ಡ್ರೋಣ್‌ ಸರ್ವೇ ಮಾಡಿ,ಅದರ ಲೆಕ್ಕಾಚಾರ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಡ್ರೋಣ್‌ ಸರ್ವೇಯಲ್ಲಿ ಗುಂಡಿ ಬಿದ್ದಿರುವುದು ಮತ್ತು ಆಳದ ಗುರುತು ತೋರಿಸುವುದೆಲ್ಲ ಗಣಿಗಾರಿಕೆಯಾಗಿರದೆ ಇರಬಹುದು. ಡ್ರೋಣ್‌ ಸರ್ವೇಯಿಂದಲೇ ಲೆಕ್ಕ ಮಾಡುವುದಾದರೆ ಆಯಾ ವರ್ಷದಲ್ಲಿ ಮಾಡುವುದು ಸೂಕ್ತ ಎಂದು ಕ್ಯಾತೆ ತೆಗೆದಿದ್ದಾರೆ. ಈಗಂತೂ ನೋಟಿಸ್ ಜಾರಿ ಮಾಡಿದ್ದು, ಅದಕ್ಕನುಗುಣವಾಗಿ ಪಾವತಿ ಮಾಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ.

ಆದಾಯದ ಕೊರತೆ:ಸರ್ಕಾರಕ್ಕೆ ಆದಾಯದ ಕೊರತೆಯಾಗಿದ್ದರಿಂದ ಈ ರೀತಿ ಮಾಡಲು ಮುಂದಾಗಿದೆಯೇ ಎನ್ನುವ ಪ್ರಶ್ನೆ ಈಗ ಹರಿದಾಡುತ್ತಿದೆ. 2006 ರಿಂದ 2024 ವರೆಗೂ ನಡೆದಿರುವ ಗಣಿಗಾರಿಕೆಯನ್ನು ಈಗ ಡ್ರೋಣ್‌ ಸರ್ವೇ ಮಾಡಿ, ಸರ್ಕಾರ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿದೆಯೇ ಎನ್ನುವುದು ಪ್ರಶ್ನಾರ್ಥಕ.

ನಮಗೆ ನೋಟಿಸ್ ಜಾರಿ ಮಾಡಿರುವುದು ನಿಜ.ಆದರೆ, ಇಷ್ಟು ವರ್ಷಗಳ ಕಾಲ ಮಾಡದೆ ಈಗ ಡ್ರೋಣ್‌ ಸರ್ವೇ ಮಾಡಿ,ನೋಟಿಸ್ ಜಾರಿ ಮಾಡಿ ರಾಜಸ್ವ ಪಾವತಿ ಮಾಡಬೇಕು ಎಂದರೆ ಕಷ್ಟವಾಗುತ್ತದೆ. ಈ ಕುರಿತು ಸರ್ಕಾರದ ಜತೆಗೆ ಮಾತುಕತೆ ಮಾಡುತ್ತೇವೆ ಎಂದು ಸಂಸದ ಮತ್ತು ಕ್ವಾರಿ ಮಾಲಿಕ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.

ಕಲ್ಲು ಕ್ವಾರಿಗಳಿಗೆ ದಂಡ ವಿಧಿಸಿಲ್ಲ. ಡ್ರೋಣ್‌ ಸರ್ವೇಯಲ್ಲಿ ರಾಜಸ್ವ ಪಾವತಿಯ ವ್ಯತ್ಯಾಸ ಪತ್ತೆ ಮಾಡಿ ಪಾವತಿ ಮಾಡುವಂತೆ ನೋಟಿಸ್ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಚಿದಂಬರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯಲ್ಲಿ ಪುರಾತನ ಕಾಲದ ಆಳ್ವರ್‌ ವಿಗ್ರಹ ಪತ್ತೆ
ಕೂಡ್ಲಿಗಿಯಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಆರೋಪ